ಉತ್ತರ ಕನ್ನಡ(ಜೂ.30): ಯಲ್ಲಾಪುರ ತಾಲೂಕಿನಲ್ಲಿ ಕೋವಿಡ್‌-19 ಸೋಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಇದೀಗ ಗ್ರಾಮೀಣ ಭಾಗದಲ್ಲಿ ವಿಸ್ತರಿಸುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟಾಗಿದೆ.

ಪಟ್ಟಣದಲ್ಲಿ ಸೋಮವಾರ ಕೊರೋನಾ ಪಾಸಿಟಿವ್‌ ಬಂದ ವಿಷಯ ಒಬ್ಬರಿಂದೊಬ್ಬರಿಗೆ ಹಬ್ಬುತ್ತಿದ್ದಂತೆ ಭಯದ ವಾತಾವರಣ ನಿರ್ಮಾಣವಾಯಿತು. ಪಾಸಿಟಿವ್‌ ಬಂದ ತಾಲೂಕಿನ ನಂದೊಳ್ಳಿಯ ವ್ಯಕ್ತಿ ತನ್ನ ತಂದೆಯೊಂದಿಗೆ ಎಲ್‌ಎಸ್‌ಎಂಪಿ ಸೊಸೈಟಿಗೆ ಹೋಗಿ ಬೆಳೆಸಾಲದ ದಾಖಲಾತಿಗೆ ಸಹಿ ಮಾಡಿ ಬಂದಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿ ಹಲವರಿದ್ದರು. ಕೆಡಿಸಿಸಿ ಬ್ಯಾಂಕ್‌ ಶಾಖೆಗೂ ಹೋಗಿದ್ದರು. ತಾಲೂಕು ಆರೋಗ್ಯ ಇಲಾಖೆಯ ಗಮನಕ್ಕೆ ಬಂದ ತಕ್ಷಣ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅವರು ಬೆಳೆಸಾಲಕ್ಕಾಗಿ ಹಲವೆಡೆ ನೂರಾರು ಜನರ ನಡುವೆ ಸಾಲಿನಲ್ಲಿ ನಿಂತು ವ್ಯವಹರಿಸಿದ್ದಾರೆ.

ಯುವಕನಿಗೆ ಡೆಂಘೀ ಜತೆಗೆ ಕೊರೋನಾ ಸೋಂಕು

ಇದೀಗ ಅವರೆಲ್ಲರಿಗೂ ಆತಂಕ ಉಂಟಾಗಿದೆ. ಈ ವ್ಯಕ್ತಿಯು ಕೆಡಿಸಿಸಿ ಬ್ಯಾಂಕ್‌, ಎಲ್‌ಎಸ್‌ಎಂಪಿ ಜತೆಗೆ ಕೆಡಿಸಿಸಿ ಬ್ಯಾಂಕ್‌ ಪಕ್ಕದ ಟಿಎಂಎಸ್‌ ಸೂಪರ್‌ ಮಾರ್ಕೆಟ್‌ಗೂ ತೆರಳಿದ್ದರು ಎಂದು ಹೇಳಲಾಗಿದೆ. ಅವರ ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ ಟ್ರಾವೆಲ್‌ ಹಿಸ್ಟರಿ ಪತ್ತೆ ಹಚ್ಚಲಾಗುತ್ತಿದೆ.

ಗೋವಾದಲ್ಲಿ ವಾಸವಾಗಿರುವ ಈ ವ್ಯಕ್ತಿ ಲಾಕ್‌ಡೌನ್‌ನಲ್ಲಿ ಊರಿಗೆ ಬಂದಿದ್ದು, ಇದೀಗ ವಾಪಸಾಗಲು ಅಗತ್ಯವಾದ ಆರೋಗ್ಯ ಪ್ರಮಾಣಪತ್ರ ಪಡೆಯಲೆಂದು ತಪಾಸಣೆಗೆ ಒಳಪಟ್ಟಿದ್ದರು. ಈ ಸಂದರ್ಭದಲ್ಲಿ ಯಾವುದೇ ರೀತಿಯ ಕೊರೋನಾ ರೋಗ ಲಕ್ಷಣ ಇಲ್ಲದಿದ್ದರೂ, ವರದಿ ಪಾಸಿಟಿವ್‌ ಬಂದಿದೆ. ಇದು ಹೆಚ್ಚು ಆತಂಕಕ್ಕೀಡುಮಾಡಿದೆ. ಅಲ್ಲದೇ ಕೆಲ ದಿನಗಳ ಹಿಂದೆ ತಂದೆಯ ಹೃದಯ ಚಿಕಿತ್ಸೆಗಾಗಿ ಧಾರವಾಡಕ್ಕೆ ಕರೆದೊಯ್ದಿದ್ದರು ಎನ್ನುವುದು ತಿಳಿದುಬಂದಿದೆ. ಯಾವ ಮೂಲದಿಂದ ಇವರಿಗೆ ವೈರಸ್‌ ತಗುಲಿದೆ ಎಂಬುದು ತಿಳಿಯಬೇಕಿದೆ.

ಕೊಡಗಿನಲ್ಲಿ ಭಾನು​ವಾರ, ಮಂಗ​ಳ​ವಾರ ಸ್ವಂಯ ಪ್ರೇರಿತ ಬಂದ್‌

ಅಲ್ಲದೇ ಗುಳ್ಳಾಪುರದ ಮಹಿಳೆಯೊಬ್ಬಳು ಶಿರಸಿಯ ಖಾಸಗಿ ಆಸ್ಪತ್ರೆಗೆ ಬೇರೊಂದು ಕಾಯಿಲೆಗೆ ಆಪರೇಶನ್‌ ಮಾಡಿಸುವ ಕುರಿತು ಪರಿಶೀಲನೆಗೆ ಹೋಗಿ ಬಂದ ನಂತರ, ಅವಳಿಗೂ ಕೂಡ ಕೊರೋನಾ ಪಾಸಿಟಿವ್‌ ಬಂದಿರುವ ಕುರಿತು ತಾಲೂಕು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ತಿಳಿಸಿದ್ದಾರೆ.

ವಾಯವ್ಯ ಸಾರಿಗೆಗೆ ಮತ್ತೆ ಶಾಕ್‌:

ವಾಯವ್ಯ ಸಾರಿಗೆಯ ಐವರು ಸಿಬ್ಬಂದಿಗೆ ಸೋಮವಾರ ಪಾಸಿಟಿವ್‌ ಇರುವ ವರದಿ ಬಂದಿದ್ದು, ಒಟ್ಟು 7 ಜನರಿಗೆ ತಗುಲಿದಂತಾಗಿದೆ. ಇದರಿಂದಾಗಿ ಉಳಿದ ಸಿಬ್ಬಂದಿ ಕೂಡ ಕಂಗಾಲಾಗುವಂತಾಗಿದೆ. ಅವರು ಎಲ್ಲ ಸಿಬ್ಬಂದಿಯನ್ನು ತಪಾಸಣೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಕ್ವಾರಂಟೈನ್‌ನಲ್ಲಿರುವ ಕೆಲವು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸಿಬ್ಬಂದಿಯೇ ಹೇಳುತ್ತಿದ್ದು, ಅಧಿಕಾರಿಗಳು ಮಾತ್ರ ಇದು ಸುಳ್ಳೆಂದು ಹೇಳುತ್ತಿದ್ದಾರೆ. ಆದರೆ, ಸಾರ್ವಜನಿಕರಿಗೆ ಇದರಿಂದ ಯಾರನ್ನು ನಂಬುವುದು, ಯಾವುದು ಬಿಡುವುದು ಎಂಬ ಗೊಂದಲ ನಿರ್ಮಾಣವಾಗಿದ್ದು, ಮತ್ತಷ್ಟುಭಯಭೀತಿ ಉಂಟುಮಾಡಿದೆ.

ಇಂದಿರಾ ಕ್ಯಾಂಟೀನ್‌ ಸುರಕ್ಷಿತವಲ್ಲ:

ವಾಯವ್ಯ ಸಾರಿಗೆಯ ಬಹುತೇಕ ಸಿಬ್ಬಂದಿ ಮತ್ತು ತರಕಾರಿ ವ್ಯಾಪಾರಕ್ಕೆಂದು ಕಲಘಟಗಿ, ಮುಂಡಗೋಡ, ಅಂಕೋಲಾ, ಕುಮಟಾ ಮುಂತಾದ ಹೊರ ಊರುಗಳಿಂದ ಬರುವವರು ಇಂದಿರಾ ಕ್ಯಾಂಟೀನ್‌ನಲ್ಲೇ ಪ್ರತಿನಿತ್ಯ ಊಟ, ತಿಂಡಿ ಮಾಡುತ್ತಿದ್ದು, ಅಲ್ಲಿ ಯಾವುದೇ ಸುರಕ್ಷತಾ ಸಾಮಗ್ರಿಗಳು ಕಂಡು ಬರುತ್ತಿಲ್ಲ. ಸ್ಯಾನಿಟೈಸರ್‌ ಇದ್ದರೂ ಅದನ್ನು ಬಳಸುತ್ತಿಲ್ಲ. ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯವಾಗಿ ಬಳಸಬೇಕೆಂದಿದ್ದರೂ ನಿಯಮವನ್ನು ಗಾಳಿಗೆ ತೂರಲಾಗಿದೆ.