ಉತ್ತರ ಕನ್ನಡ(ಜೂ.30): ಮುಂಡಗೋಡ ಪಟ್ಟಣದ ಸುಭಾಸನಗರ ಬಡಾವಣೆಯ ಯುವಕನಿಗೆ ಡೆಂಘೀ ಜತೆಗೆ ಕೋವಿಡ್‌ -19 ವರದಿ ಕೂಡ ಪಾಸಿಟಿವ್‌ ಬಂದಿದ್ದು ಗೊಂದಲ ಸೃಷ್ಟಿಸಿದೆ. ಈ ವಿಷಯವೀಗ ಸಾರ್ವಜನಿಕರಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.

ಇಲ್ಲಿಯ ಹಾರ್ಡ್‌ವೇರ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಕೆಲ ದಿನಗಳಿಂದ ಜ್ವರ ಕಾಣಿಸಿಕೊಂಡಿದೆ. ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದ್ದಾನೆ. ಮೊದಲಿಗೆ ವರದಿಯಲ್ಲಿ ಡೆಂಘೀ ಪಾಸಿಟಿವ್‌ ಬಂದಿದ್ದು, ಚಿಕಿತ್ಸೆ ನೀಡಲಾಗಿದೆ. ಬಳಿಕ ಗಂಟಲು ದ್ರವ ಮಾದರಿಯನ್ನು ಕೋವಿಡ್‌ -19 ಪರೀಕ್ಷೆಗೆ ಕಳುಹಿಸಲಾಗಿತ್ತು. ಯುವಕನಿಗೆ ಕೊರೋನಾ ಪಾಸಿಟಿವ್‌ ಬಂದಿದೆ. 2ನೇ ಬಾರಿಗೆ ಕಳುಹಿಸಿದಾಗ ವರದಿ ನೆಗೆಟಿವ್‌ ಬಂದಿದ್ದು, ಈಗ ಮೂರನೇ ಬಾರಿಗೆ ಮತ್ತೆ ಪಾಸಿಟಿವ್‌ ಬಂದಿದೆ.

ಕೊಡಗಿನಲ್ಲಿ ಭಾನು​ವಾರ, ಮಂಗ​ಳ​ವಾರ ಸ್ವಂಯ ಪ್ರೇರಿತ ಬಂದ್‌

ಈ ವರೆಗೆ ಹೊರ ರಾಜ್ಯದಿಂದ ಬಂದು ಕ್ವಾರಂಟೈನ್‌ನಲ್ಲಿ ಇದ್ದವರಲ್ಲಿ ಮಾತ್ರ ಕೋವಿಡ್‌ ಕಾಣಿಸಿಕೊಂಡಿದ್ದರಿಂದ ಯಾರು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಈಗ ಸ್ಥಳಿಯ ಯುವಕನಿಗೆ ಕೊರೋನಾ ಸೋಂಕು ತಗುಲಿರುವುದು ಚರ್ಚೆಗೆ ಗ್ರಾಸವಾಗಿದೆ.

ಈಗಾಗಲೇ ಯುವಕ ಕೆಲಸ ಮಾಡುತ್ತಿದ್ದ ಹಾರ್ಡ್‌ವೇರ್‌ ಅಂಗಡಿ ಬಂದ್‌ ಮಾಡಲಾಗಿದ್ದು, ಯುವಕನ ಮನೆಯ 100 ಮೀಟರ್‌ ಸುತ್ತ ಕಂಟೈನ್ಮೆಂಟ್‌ ಝೋನ್‌ ಎಂದು ಪರಿಗಣಿಸಿದೆ.

ಚಿಕಿತ್ಸೆ ಸಿಗದೇ ಬಲಿಯಾದ ಮಗು ಎದೆಗಪ್ಪಿಕೊಂಡು ಪೋಷಕರ ಆಕ್ರಂದನ!

ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್‌ ಶ್ರೀಧರ ಮುಂದಲಮನಿ, ಮೊದಲನೇ ಬಾರಿ ಪಾಸಿಟಿವ್‌ ಬಂದರೆ ದ್ವಿತೀಯ ಬಾರಿ ನೆಗೆಟಿವ್‌ ಬಂತು. ಮತ್ತೊಮ್ಮೆ ಕಳುಹಿಸಿದಾಗ ಪಾಸಿಟಿವ್‌ ಬಂದಿರುವುದರಿಂದ ಗೊಂದಲವಾಗುತ್ತಿದೆ. ಸದ್ಯಕ್ಕೆ ಯುವಕನನ್ನು ಕೋವಿಡ್‌-19 ಪಾಸಿಟಿವ್‌ ಎಂದು ಪರಿಗಣಿಸಿ ಐಸೊಲೇಷನ್‌ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಈ ಯುವಕನಿಗೆ ಯಾವುದೇ ಪ್ರಯಾಣ ಹಿಸ್ಟರಿ ಇಲ್ಲದೇ ಇರುವುದರಿಂದ ಕೋವಿಡ್‌ ಪಾಸಿಟಿವ್‌ ಸಾಧ್ಯತೆ ಕಡಿಮೆ. ಈಗ ಮತ್ತೊಮ್ಮೆ ಗಂಟಲು ದ್ರವ ಮಾದರಿ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗುವುದು. ಆ ವರದಿ ಬಂದ ಮೇಲೆಯೇ ಮುಂದಿನ ಕ್ರಮ ಕೈಕೊಳ್ಳುವುದಾಗಿ ತಿಳಿಸಿದರು.