Asianet Suvarna News Asianet Suvarna News

ಗುದನಾಳದಲ್ಲಿಟ್ಟು 633 ಗ್ರಾಂ ಚಿನ್ನ ಅಕ್ರಮ ಸಾಗಣೆ..!

ಗುದನಾಳದಲ್ಲಿ ಬರೋಬ್ಬರಿ 25.57 ಲಕ್ಷ ರು. ಮೌಲ್ಯದ 633 ಗ್ರಾಂ ಪೇಸ್ಟ್‌ ರೂಪದ ಚಿನ್ನ ಕಳ್ಳಸಾಗಾಟ ಮಾಡುತ್ತಿದ್ದ ಕೇರಳದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.

 

Man who was smuggling gold in Rectum was arrested in mangalore
Author
Bangalore, First Published Feb 12, 2020, 1:54 PM IST

ಮಂಗಳೂರು(ಫೆ.12): ಗುದನಾಳದಲ್ಲಿ ಬರೋಬ್ಬರಿ 25.57 ಲಕ್ಷ ರು. ಮೌಲ್ಯದ 633 ಗ್ರಾಂ ಪೇಸ್ಟ್‌ ರೂಪದ ಚಿನ್ನ ಕಳ್ಳಸಾಗಾಟ ಮಾಡುತ್ತಿದ್ದ ಕೇರಳದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಸರಗೋಡು ಮೂಲದ ಸೈಫುದ್ದೀನ್‌ ತೆಕ್ಕಿಲ್‌ ಪಝೆವಳಪ್ಪಿಲ್‌ (23) ಬಂಧಿತ ವ್ಯಕ್ತಿ. ಈತ ದುಬೈನಿಂದ ಏರ್‌ ಇಂಡಿಯಾ ವಿಮಾನದ ಮೂಲಕ ಬೆಳಗ್ಗೆ 4.45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈತನ ಚಲನವಲನದ ಕುರಿತು ಸಂಶಯಗೊಂಡ ಅಧಿಕಾರಿಗಳು ಮೆಟಲ್‌ ಡಿಟೆಕ್ಟರ್‌ ಮೂಲಕ ಪರಿಶೀಲಿಸಿದಾಗ ಚಿನ್ನ ಕಳ್ಳಸಾಗಾಟ ನಡೆಸುತ್ತಿರುವುದು ಪತ್ತೆಯಾಗಿದೆ.

ಮಹಿಳೆ ಒಳ ಉಡುಪಿನಲ್ಲಿ ಸಿಕ್ಕಿದ್ದ ಚಿನ್ನವೆಷ್ಟು..?

ಗಮ್‌ನೊಂದಿಗೆ ಚಿನ್ನ ಬೆರೆಸಿದ್ದ: ಆರೋಪಿ ಸೈಫುದ್ದೀನ್‌ ಚಿನ್ನವನ್ನು ಗಮ್‌ನೊಂದಿಗೆ ಬೆರೆಸಿ ಪೇಸ್ಟ್‌ ರೂಪದಲ್ಲಿ 4 ಉಂಡೆಗಳನ್ನು ತಯಾರಿಸಿದ್ದ. ಅವುಗಳನ್ನು ಗುದನಾಳದಲ್ಲಿ ಇರಿಸಿ ಮಂಗಳೂರಿಗೆ ಬಂದಿಳಿದಿದ್ದ ಎಂದು ಕಸ್ಟಮ್ಸ್‌ ಇಲಾಖೆಯ ಜಂಟಿ ಆಯುಕ್ತ ಜೋನ್ನೆಸ್‌ ಜಾಜ್‌ರ್‍ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮೊದಲ ಬಾರಿಗೆ ಸುದೀರ್ಘ ಕಸ್ಟಡಿ: ಆರೋಪಿಯನ್ನು 6ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ.25ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದುವರೆಗೆ ಕಳ್ಳಸಾಗಾಟ ಪ್ರಕರಣಗಳಲ್ಲಿ ಇಷ್ಟುಸುದೀರ್ಘ ಕಾಲ ಆರೋಪಿಗೆ ನ್ಯಾಯಾಂಗ ಬಂಧನ ನೀಡಿದ್ದಿಲ್ಲ. ಇಂಥ ಪ್ರಕರಣಗಳ ಗಂಭೀರತೆಯನ್ನು ನ್ಯಾಯಾಲಯಕ್ಕೆ ವಿವರಿಸಲಾಗಿದ್ದು, ಇದೇ ಮೊದಲ ಬಾರಿಗೆ ಸುದೀರ್ಘ ಅವಧಿಯ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಜಾರ್ಜ್ ತಿಳಿಸಿದರು.

ಭಾರೀ ಸಿಗರೆಟ್‌ ವಶಕ್ಕೆ:

ಇನ್ನೊಂದು ಪ್ರಕರಣದಲ್ಲಿ ಭಾರೀ ಪ್ರಮಾಣದಲ್ಲಿ ವಿದೇಶಿ ಸಿಗರೆಟ್‌ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಡನ್‌ಹಿಲ್‌ ಮತ್ತು ಗುಡಂಗ್‌ ಗರಮ್‌ ಸಿಗರೆಟ್‌ಗಳು ಇದಾಗಿದ್ದು, ತಲಾ 200 ಸಿಗರೆಟ್‌ಗಳಿರುವ 120 ಪ್ಯಾಕೆಟ್‌ಗಳು ಪತ್ತೆಯಾಗಿವೆ. ಈ ಪ್ರಕರಣ ತನಿಖೆ ಹಂತದಲ್ಲಿದೆ. ಪ್ರಸ್ತುತ ದಿನಗಳಲ್ಲಿ ಸಿಗರೆಟ್‌ ಕಳ್ಳಸಾಗಾಟ ಪ್ರಕರಣಗಳು ಹೆಚ್ಚುತ್ತಿವೆ ಎಂದು ಜಂಟಿ ಆಯುಕ್ತರು ಹೇಳಿದರು. ಕಸ್ಟಮ್ಸ್‌ ಸೂಪರಿಂಟೆಂಡೆಂಟ್‌ ಶ್ರೀನಾಥ್‌, ಇನ್ಸ್‌ಪೆಕ್ಟರ್‌ ಸಿನ್ಮಯ ಪ್ರಧಾನ್‌, ಡೆಪ್ಯುಟಿ ಕಮಿಷನರ್‌ ರಾಘವೇಂದ್ರ ಮತ್ತಿತರರಿದ್ದರು.

ಹೆಚ್ಚುತ್ತಿರುವ ಪ್ರಕರಣಗಳು

ಹೆಚ್ಚಿನ ಪ್ರಕರಣಗಳಲ್ಲಿ ಅತಿ ಸಣ್ಣ ಅವಧಿಗೆ ದುಬೈಗೆ ತೆರಳುವವರೇ ಹೆಚ್ಚಾಗಿ ಚಿನ್ನ ಕಳ್ಳಸಾಗಾಟಗಳಲ್ಲಿ ತೊಡಗಿರುತ್ತಿದ್ದರು. ಅವರನ್ನು ಪತ್ತೆಹಚ್ಚಲು ಸುಲಭವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದುಬೈನಲ್ಲಿ ಒಂದೆರಡು ವರ್ಷ ಇದ್ದು ಕೆಲಸ ಮಾಡಿ ವಾಪಸಾಗುವವರೂ ಈ ರೀತಿಯ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿರುವುದು ಕಂಡುಬಂದಿದೆ. ಮಂಗಳವಾರ ಬಂಧಿತ ಸೈಫುದ್ದೀನ್‌ ಮೊದಲ ಬಾರಿ ಕಳ್ಳಸಾಗಾಟದಲ್ಲಿ ತೊಡಗಿಕೊಂಡಿದ್ದಾನೆ. ಆತ ದುಬೈನಲ್ಲಿ ವರ್ಷಕ್ಕಿಂತಲೂ ಹೆಚ್ಚು ಕಾಲ ಕೆಲಸ ಮಾಡಿಕೊಂಡಿದ್ದ ಎಂದು ಜೋನ್ನೆಸ್‌ ಜಾರ್ಜ್ ತಿಳಿಸಿದ್ದಾರೆ.

17.65 ಕೆಜಿ ಚಿನ್ನ ವಶ

ಸೀಮಾ ಸುಂಕ ಇಲಾಖೆಯು 2019ರ ಏಪ್ರಿಲ್‌ನಿಂದ 2020 ಜನವರಿವರೆಗೆ 52 ಚಿನ್ನ ಕಳ್ಳಸಾಗಾಟ ಪ್ರಕರಣಗಳನ್ನು ಪತ್ತೆಹಚ್ಚಿದ್ದು, ಒಟ್ಟು 6.38 ಕೋಟಿ ರು. ಮೌಲ್ಯದ 17.65 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. 10 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ, 7 ಮಂದಿ ಪ್ರಯಾಣಿಕರಿಂದ 33.48 ಲಕ್ಷ ವಿದೇಶಿ ಕರೆನ್ಸಿಯನ್ನೂ ವಶಪಡಿಸಲಾಗಿದೆ. ಅಪರಾಧಿಗಳಿಂದ 3.59 ಕೋಟಿ ರು. ದಂಡ ಸಂಗ್ರಹ ಮಾಡಲಾಗಿದೆ. 9.54 ಕೋಟಿ ರು. ಮೌಲ್ಯದ ಜಪ್ತಿ ಮಾಡಿದ ಚಿನ್ನವನ್ನು ಕಸ್ಟಮ್ಸ್‌ ಈ ಅವಧಿಯಲ್ಲಿ ವಿಲೇವಾರಿ ಮಾಡಿದೆ.

Follow Us:
Download App:
  • android
  • ios