ಬೆಂಗಳೂರು(ಮಾ.10): ಮೂರು ವರ್ಷದ ಮಗು ಅಪಹರಿಸಿ ಮಾರಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಮಪುರದ ನಿವಾಸಿಯಾದ ಕರ್ಣ ಬಂಧಿತ. ಪ್ರಕರಣದಲ್ಲಿ ಅಪ್ರಾಪ್ತ ಬಾಲಕನನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಪೇಂಟಿಂಗ್‌ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈತನಿಗೆ ವಿವಾಹವಾಗಿದ್ದು, ನಾಲ್ಕು ಮಕ್ಕಳಿದ್ದಾರೆ. ಬಸವರಾಜ್‌ ಹಾಗೂ ಲಕ್ಷ್ಮಿ ದಂಪತಿ ಮೂಲತಃ ಉತ್ತರ ಕರ್ನಾಟಕದವರಾಗಿದ್ದು, ವಿದ್ಯಾರಣ್ಯಪುರದ ಹೊಸಬಾಳು ನಗರದಲ್ಲಿ ನೆಲೆಸಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ದಂಪತಿಯ ಮೂರು ವರ್ಷದ ಮಗುವನ್ನು ಆರೋಪಿ ಫೆ.29 ರಂದು ಅಪಹರಣ ಮಾಡಿದ್ದ. ಬಳಿಕ ಮಗುವನ್ನು ಮಲ್ಲೇಶ್ವರದ ದೇವಯ್ಯ ಪಾರ್ಕ್ ಬಳಿ ಬಿಟ್ಟು ಪರಾರಿಯಾಗಿದ್ದ.

ಪೊಲೀಸರ ಮೇಲೆ ವಿದೇಶಿಗರ ದಾಳಿ: ಸುಡಾನ್‌ ವಿದ್ಯಾರ್ಥಿಗಳಿಗೆ ಬಿದ್ವು ಗೂಸಾ!

ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ತೆರಳಿದ್ದ ವಿದ್ಯಾರಣ್ಯಪುರ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡ ಮಗುವನ್ನು ರಕ್ಷಣೆ ಮಾಡಿ ಪೋಷಕರ ಸುಪರ್ದಿಗೆ ವಹಿಸಿತ್ತು. ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆ ಹಿಡಿದಿದೆ.

ಆರೋಪಿ ಕೆಲ ವರ್ಷಗಳಿಂದ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಆ ಮಹಿಳೆ ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿತ್ತು. ನಂತರ, ಮಗುವನ್ನು ಆರೋಪಿ ಕೈಗೆ ಕೊಟ್ಟು ನಗರವನ್ನೇ ಬಿಟ್ಟು ಹೋಗಿದ್ದರು. ಆರೋಪಿ ಕರ್ಣನ ಸಂಬಂಧಿಕರೊಬ್ಬರಿಗೆ ವಿವಾಹವಾಗಿ ಹಲವು ವರ್ಷವಾದರೂ ಮಕ್ಕಳಿರಲಿಲ್ಲ. ಅವರಿಗೆ .70 ಸಾವಿರಕ್ಕೆ ಮಾರಾಟ ಮಾಡಿದ್ದ. ಆರೋಪಿಗೆ ಇತ್ತೀಚೆಗೆ ಹಣದ ಅವಶ್ಯಕತೆ ಎದುರಾಗಿದ್ದು, ಕೂಲಿ ಕಾರ್ಮಿಕರ ಮಗುವನ್ನು ಅಪಹರಿಸಿದ್ದ ಎಂದು ಪೊಲೀಸರು ತಿಳಿಸಿದರು.