ತುಮಕೂರು ಜಿಲ್ಲೆಯ ವೈ.ಎನ್.ಹೊಸಕೋಟೆಯಲ್ಲಿ, ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಕೋಟ್ಯಂತರ ಮೌಲ್ಯದ ಭೂಮಿ ದಾನ ಮಾಡಿದ್ದ ಸಾದಿಕ್ ಸಾಬ್ ಅವರ ಪುತ್ರ ಸೈಯ್ಯದ್ ಅಕ್ರಂ, ಅದೇ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಮತ್ತು ಆ್ಯಂಬುಲೆನ್ಸ್‌ ಸೌಲಭ್ಯ ಸಿಗದೆ ಕೊನೆಯುಸಿರೆಳೆದಿದ್ದಾರೆ. 

ತುಮಕೂರು: ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ್ದ ವ್ಯಕ್ತಿಯ ಮಗನಿಗೆ ಸೂಕ್ತ ಸಮಯಕ್ಕೆ ಪ್ರಥಮ ಚಿಕಿತ್ಸೆ ಹಾಗೂ ಆ್ಯಂಬುಲೆನ್ಸ್‌ ಸಿಗದೇ ಅದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯಲ್ಲಿ ನಡೆದಿದೆ. ಸಾದಿಕ್‌ ಸಾಬ್‌ ಅವರ ಪುತ್ರ ಸೈಯ್ಯದ್‌ ಅಕ್ರಂ (42) ಮೃತರು. 

ಕೋಟ್ಯಂತರ ಮೌಲ್ಯದ ಜಾಗ ದಾನ ಮಾಡಿದ್ರು!

ಸಾದಿಕ್ ಅವರು ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲು ಕೋಟ್ಯಂತರ ರು. ಮೌಲ್ಯದ ಜಾಗವನ್ನು ಸರ್ಕಾರಕ್ಕೆ ದಾನ ಮಾಡಿದ್ದರು. ಆದರೆ ಅವರ ಪುತ್ರನಿಗೇ ಆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಅಲ್ಲದೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್‌ ಬರಲಿಲ್ಲ. ಇದರಿಂದ ಅಕ್ರಂ ಕೊನೆಯುಸಿರೆಳೆದರು.

ಶನಿವಾರ ಆಗಿದ್ದೇನು?

ಶನಿವಾರ ಮಧ್ಯಾಹ್ನ 12ರ ಸುಮಾರಿಗೆ ಹೊಸಕೋಟೆ ಗ್ರಾಮದ ಸೈಯ್ಯದ್‌ ಅವರಿಗೆ ಉಸಿರಾಟದ ತೊಂದರೆಯಾಗಿದ್ದು ಮನೆಯವರು ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡಕ್ಕೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ. 

ಕುಟುಂಬಸ್ಥರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಒಂದೂವರೆ ಗಂಟೆ ಕಳೆದರೂ ಆ್ಯಂಬುಲೆನ್ಸ್‌ ಬಂದಿಲ್ಲ. ಅಕ್ರಂ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು, ಮನೆಯವರ ಮನವಿ ಮೇರೆಗೆ ವೈದ್ಯರು ಎಮರ್ಜೆನ್ಸಿ ಕೊಠಡಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದ ಪರಿಣಾಮ ಸೈಯ್ಯದ್‌ ಮೃತರಾಗಿದ್ದಾರೆ.

ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಮಗು? ಆಸ್ಪತ್ರೆಯಿಂದ ಆಸ್ಪತ್ರೆ ಅಲೆದಾಡಿದ ಪೋಷಕರು

ಇದನ್ನೂ ಓದಿ: ಬಡವರಿಗೆ ವರದಾನವಾದ ರಾಯಚೂರು ಹಾಸ್ಪಿಟಲ್, ತಿಂಗಳಲ್ಲಿ 200 ಹೆರಿಗೆ ಮಾಡಿದ ಸರ್ಕಾರಿ ಆಸ್ಪತ್ರೆ!