ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಮಗು? ಆಸ್ಪತ್ರೆಯಿಂದ ಆಸ್ಪತ್ರೆ ಅಲೆದಾಡಿದ ಪೋಷಕರು, ತಕ್ಷಣದ ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕುಳಿಯುತ್ತಿತ್ತು. ಆದರೆ ನಡೆದಿದ್ದೇ ಬೇರೆ. ಪೋಷಕರು ಅಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಮಗು ಬದುಕುಳಿಯಲಿಲ್ಲ.
ಕೊಪ್ಪಳ (ನ.09) ನೀರು ತುಂಬವ ದೋಣಿ ಮಗುವಿನ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಅಲ್ಲಿಂದ ಮತ್ತೆ ಬೇರೆ ಆಸ್ಪತ್ರೆ ದಾಖಲಿಸುವಷ್ಟರಲ್ಲೇ ಮಗು ಮೃತಪಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕುಷ್ಟಗಿ ತಾಲೂಕಿನ ಮನ್ನೇರಾಳ ಗ್ರಾಮದ ಆರು ವರ್ಷದ ಅನುಶ್ರಿ ದುರಂತ ಅಂತ್ಯಕಂಡಿದ್ದಾಳೆ. ಇತ್ತ ಪೋಷಕರು ಕಣ್ಣೀರು ನೋಡಲು ಅಸಾಧ್ಯವಾಗಿದೆ. ಪೋಷಕರು ಹಾಗೂ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ.
ಹನುಮಸಾಗರ ಸರ್ಕಾರಿ ಆಸ್ಪತ್ರೆ ವಿರುದ್ದ ಆಕ್ರೋಶ
ಮಹಾಂತೇಶ್ ಕರಡಿ ಎಂಬುವವರ ಪುತ್ರಿ ಅನುಶ್ರೀ (6) ಮೇಲೆ ನೀರು ತುಂಬುದ ದೋಣಿ ಬಿದ್ದಿದೆ. ಇದರ ಪರಿಣಾಮ ಮಗು ಗಂಭೀರವಾಗಿ ಗಾಯಗೊಂಡಿದೆ. ತುರ್ತು ಚಿಕಿತ್ಸೆಗಾಗಿ ತಕ್ಷಣವೇ ಹನುಮಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ ಹನುಮಸಾಗರ ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ತುರ್ತು ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದ ಕಾರಣ ಪೋಷಕರು ಕಂಗಾಲಾಗಿದ್ದಾರೆ.
ಇಳಕಲ್ ಆಸ್ಪತ್ರೆಗೆ ಕರೆದೊಯ್ದ ಪೋಷಕರು
ಹನುಮಸಾಗರ ಆಸ್ಪತ್ರೆ ಸಿಬ್ಬಂದಿಗಳು ಸೂಚನೆಯಂತೆ ಇಳಕಲ್‌ಗೆ ಮಗುವನ್ನು ಕರೆದೊಯ್ದಿದ್ದಾರೆ. ಹನುಮಸಾಗರದಿಂದ ಇಳಕಲ್ ಸಾಗುವ ಮಾರ್ಗ ಮಧ್ಯೆ ಮಗು ಮೃತಟ್ಟಿದೆ. ಮಗುವನ್ನು ಉಳಿಸಿಕೊಳ್ಳಲು ಪೋಷಕರು ಇನ್ನಿಲ್ಲದ ಪ್ರಯತ್ನ ಮಾಡಿದ್ದರೆ. ಆದರೆ ಸಾಧ್ಯವಾಗಿಲ್ಲ. ಹನುಮಸಾಗರದಲ್ಲಿ ತುರ್ತು ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕುಳಿಯುತ್ತಿತ್ತು ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ. ಸಾಮಾನ್ಯನಿಗೆ ತುರ್ತು ಚಿಕಿತ್ಸೆ ಸಿಗದಷ್ಟು ಬಡವಾಯ್ತಾ ಕರ್ನಾಟಕ ಅನ್ನೋ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಸಿಐಎಸ್‌ಎಫ್ ಯೋಧನ ಮೇಲೆ ಬಿದ್ ಗೇಟು
ಕಾರವಾರದ ಕೈಗಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಐಎಸ್‌ಎಫ್ ಯೋಧ ದುರಂತ ಅಂತ್ಯಕಂಡಿದ್ದಾರೆ. ಬೃಹತ್ ಗೇಟ್ ಬಿದ್ದು ಗಂಭೀರವಾಗಿ ಗಾಯಗೊಂಡ ಸಿಐಎಸ್‌ಎಫ್ ಹೆಡ್ ಕಾನ್ಸ್‌ಸ್ಟೇಬಲ್ ಭೀಮರಾವ್ ಜಗದಾಲೆ (42) ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಮಹಿಮಾನಗಢ್ ಮೂಲದ ಶೇಖರ ಭೀಮರಾವ್ ಜಗದಾಲೆ ಕಾರವಾರ ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ ಒಳ ಆವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಗೇಟ್ ಬಳಿಕ ನಿಂತಿದ್ದಾಗ ಯೋಧನ ಮೇಲೆ ಏಕಾಏಕಿ ಗೇಟ್ ಬಿದ್ದಿದೆ. ಅಣು ತ್ಯಾಜ್ಯ ವಿಲೇವಾರಿ ಘಟಕದ ಬಳಿ ಕಾವಲಿನಲ್ಲಿ ನಿಂತಿದ್ದ ವೇಳೆ ಆಕಸ್ಮಿಕವಾಗಿ ಗೇಟ್ ಕುಸಿದಿದೆ. ಘಟನೆಯಿಂದ ಶೇಖರ್ ಗಂಭೀರವಾಗಿ ಗಾಯಗೊಂಡಿದ್ದರು.ಸಹೋದ್ಯೋಗಿಗಳು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಕೈಗಾದ ಕೆಜಿಎಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಯೋಧ ಮೃತಪಟ್ಟಿದ್ದಾರೆ.
