Asianet Suvarna News Asianet Suvarna News

ಶಂಕಿತ ಕೆಎಫ್‌ಡಿಗೆ ಮತ್ತೊಂದು ಬಲಿ : ನಾಲ್ಕೂವರೆ ವರ್ಷದ ಮಗುವಿಗೂ ಸೋಂಕು

ಮಂಗನ ಕಾಯಿಲೆ ಶಂಕೆ ಇದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ಇದರಿಂದ ಸಾವಿಗೀಡದವರ ಸಂಖ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ ಮೂರಕ್ಕೇರಿದೆ. ಇನ್ನು ಸೋಂಕಿತರ ಸಂಖ್ಯೆ 101ಕ್ಕೇರಿದೆ. 

Man dies of KFD in Shivamogga
Author
Bengaluru, First Published Mar 20, 2020, 8:51 AM IST

ಶಿವಮೊಗ್ಗ [ಮಾ.20]:  ಶಂಕಿತ ಮಂಗನ ಕಾಯಿಲೆಯಿಂದ ತಾಲೂಕಿನ ಬಿದರೂರು ಗ್ರಾಮದ ಈಶ್ವರ (65) ಎಂಬವರು ಬುಧವಾರ ಮೃತಪಟ್ಟಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಈಶ್ವರ್‌ ಸಾಗರದಲ್ಲಿ ಚಿಕಿತ್ಸೆ ಪಡೆದು, ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಇವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾರೆ.

ಇದರಿಂದಾಗಿ ಶಂಕಿತ ಮಂಗನ ಕಾಯಿಲೆಯಿಂದ ಸಾಗರ ತಾಲೂಕಿನಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದೆ. ಇದರ ಜೊತೆಗೆ ಮಂಡವಳ್ಳಿ ಗ್ರಾಮದ 50 ವರ್ಷದ ಸುಮಿತ್ರ ಅವರು ಚಿಕಿತ್ಸೆ ಪಡೆದು ಮನೆಗೆ ವಾಪಾಸ್‌ ಹೋದವರು ಪುನಃ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾನೂರು ಗ್ರಾಮದ 25 ವರ್ಷದ ಜಯಕುಮಾರ್‌ ಎಂಬುವವರಲ್ಲಿ ಸಹ ಮಂಗನ ಕಾಯಿಲೆ ವೈರಾಣು ಪತ್ತೆಯಾಗಿದೆ.

ಒಟ್ಟಾರೆ ದಿನದಿಂದ ದಿನಕ್ಕೆ ಮಂಗನ ಕಾಯಿಲೆ ಸೋಂಕಿಗೆ ಸಿಲುಕುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ತುಮರಿ ಭಾಗದಲ್ಲಿ ಸಹ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿದೆ. ಜೊತೆಗೆ ಮಂಗಗಳು ಸಹ ಸಾಯುತ್ತಿರುವ ಸಂಖ್ಯೆ ಜಾಸ್ತಿ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಆರ್ಭಟ : ಆರೋಗ್ಯ ಸಚಿವರಿಂದ ಅಗತ್ಯ ಕ್ರಮದ ಭರವಸೆ..

ತೀರ್ಥಹಳ್ಳಿಯಲ್ಲಿ ಗುರುವಾರ ನಾಲ್ಕೂವರೆ ವರ್ಷದ ಮಗುವೊಂದರಲ್ಲಿ ಕೆಎಫ್‌ಡಿ ವೈರಾಣು ಪತ್ತೆಯಾಗಿದ್ದು, ಇದರೊಂದಿಗೆ ಈವರೆಗೆ ತೀರ್ಥಹಳ್ಳಿಯಲ್ಲಿ 81, ಸಾಗರದಲ್ಲಿ 20 ಸೇರಿದಂತೆ ಜಿಲ್ಲೆಯಲ್ಲಿ ಈ ವರ್ಷದಲ್ಲಿ ಒಟ್ಟು 101 ಕೆಎಫ್‌ಡಿ ಪ್ರಕರಣ ದಾಖಲಾದಂತಾಗಿದೆ. ಜಿಲ್ಲೆಯಲ್ಲಿ ಒಬ್ಬರು ಮಾತ್ರ ಕೆಎಫ್‌ಡಿ ಸೋಂಕಿನಿಂದ ಮೃತಪಟ್ಟಿದ್ದಾರೆ ಜಿಲ್ಲಾಡಳಿತ ಹೇಳಿದೆ.

ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ತೀರ್ಥಹಳ್ಳಿ ತಾಲೂಕಿನ ತನಿಕಲ್‌ ಗ್ರಾಮದ ನಾಲ್ಕೂವರೆ ವರ್ಷದ ನಯನ್‌ಕುಮಾರ್‌ ಎಂಬ ಮಗು ಜ್ವರದಿಂದ ಬಳಲುತ್ತಿದ್ದು, ಈ ಮಗುವಿನ ರಕ್ತ ಮಾದರಿಯಲ್ಲಿ ಕೆಎಫ್‌ಡಿ ವೈರಾಣು ಪತ್ತೆಯಾಗಿದೆ.

ಜಿಲ್ಲೆಯಲ್ಲಿ 101 ಪ್ರಕರಣ ದಾಖಲಾಗಿದ್ದರೂ, ಈವರೆಗೆ ಕೆಎಫ್‌ಡಿ ವೈರಾಣು ಸೋಂಕಿತರಲ್ಲಿ 88 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈವರೆಗೆ ದಾಖಲಾದ ಮತ್ತು ಮರಣ ಹೊಂದಿದ ಪ್ರಕರಣಗಳಲ್ಲಿ ತೀವ್ರ ಇಳಿಮುಖ ಕಂಡು ಬಂದಿದೆ. ಮಲೆನಾಡಿನ ಎಲ್ಲ ತಾಲೂಕುಗಳಲ್ಲಿ ಮುಂಜಾಗರುಕತಾ ಕ್ರಮವಾಗಿ ವ್ಯಾಕ್ಸಿನೇಶನ್‌ ನೀಡಲಾಗಿದೆ. ಹೀಗೆ ನೀಡಿದ ಬಳಿಕವೂ ಶೇ. 15 ಮಂದಿಯಲ್ಲಿ ಕೆಎಫ್‌ಡಿ ಪ್ರಕರಣ ಕಾಣಿಸಿಕೊಂಡಿದೆ ಎಂಬುದು ನಿಜ ಎಂದರು.

ಕಳೆದ ವರ್ಷ ಒಟ್ಟು 343 ಕೆಎಫ್‌ಡಿ ಪ್ರಕರಣ ದಾಖಲಾಗಿದ್ದರೆ, ಈ ಬಾರಿ ಈವರೆಗೆ ಒಟ್ಟು 101 ಪ್ರಕರಣ ಮಾತ್ರ ದಾಖಲಾಗಿದೆ. ಕಳೆದ ವರ್ಷ ತೀರ್ಥಹಳ್ಳಿ, ಸಾಗರ, ಹೊಸನಗರ, ಶಿವಮೊಗ್ಗ ಮತ್ತು ಸೊರಬ ತಾಲೂಕಿನಲ್ಲಿ ಪ್ರಕರಣಗಳು ಕಂಡು ಬಂದಿದ್ದರೆ, ಈ ವರ್ಷ ತೀರ್ಥಹಳ್ಳಿ ಮತ್ತು ಸಾಗರದಲ್ಲಿ ಮಾತ್ರ ಪ್ರಕರಣ ಕಂಡು ಬಂದಿದೆ. ಜೊತೆಗೆ ಈಗ ಕಂಡು ಬರುತ್ತಿರುವ ಕೆಎಫ್‌ಡಿ ವೈರಾಣುವಿನ ರಚನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ ಈಗ ನೀಡುತ್ತಿರುವ ವ್ಯಾಕ್ಸಿನೇಶನ್‌ ಸಾಕಾಗುತ್ತದೆ ಎಂದು ವಿವರಿಸದರು.

ತಪ್ಪಿಸಿಕೊಂಡ ಕೆಎಫ್‌ಡಿ ಪೀಡಿತೆ ಪತ್ತೆ:

ಸಾಗರ ತಾಲೂಕಿನ ಅರಳಗೋಡು ಗ್ರಾಮದ ಸುಮಿತ್ರಮ್ಮ ಎಂಬುವವರು ಕೆಎಫ್‌ಡಿ ವೈರಾಣುವಿನಿಂದ ಬಾಧಿತರಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಬುಧವಾರ ಸಂಜೆ ಇಲ್ಲಿನ ಮೆಗ್ಗಾನ್‌ ಆಸ್ಪತ್ರೆಯಿಂದ ಯಾರ ಗಮನಕ್ಕೂ ಬಾರದಂತೆ ತಪ್ಪಿಸಿಕೊಂಡು ಹೋಗಿದ್ದರು. ಇವರನ್ನು ಹುಡುಕಿದಾಗ ಮನೆಯಲ್ಲಿ ಇರುವುದು ಪತ್ತೆಯಾಯಿತು. ಇವರ ಮನವೊಲಿಸಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಡಾ.ಕಿರಣ್‌, ಶಿಮ್ಸ್‌ ನಿರ್ದೇಶಕ ಡಾ.ಲೇಪಾಕ್ಷಿ ಉಪಸ್ಥಿತರಿದ್ದರು.

Follow Us:
Download App:
  • android
  • ios