ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ರಸ್ತೆ ಬದಿಯ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು ಸ್ಕೂಟರ್‌ನಲ್ಲಿ ಹೋಗುತ್ತಿದ್ದವರಿಗೆ ಬೆಂಕಿ ತಾಕಿದ ಪರಿಣಾಮ ತಂದೆ ಮೃತಪಟ್ಟು, ಮಗಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಗರದ ಉಲ್ಲಾಳ ಬಳಿಯ ಮಂಗನಹಳ್ಳಿ ಕ್ರಾಸ್‌ ಸಮೀಪ ಬುಧವಾರ ನಡೆದಿದೆ.

ಬೆಂಗಳೂರು (ಮಾ.24): ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ರಸ್ತೆ ಬದಿಯ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು (Transformer Explodes)ಸ್ಕೂಟರ್‌ನಲ್ಲಿ ಹೋಗುತ್ತಿದ್ದವರಿಗೆ ಬೆಂಕಿ ತಾಕಿದ ಪರಿಣಾಮ ತಂದೆ ಮೃತಪಟ್ಟು (Death), ಮಗಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಗರದ (Bengaluru) ಉಲ್ಲಾಳ ಬಳಿಯ ಮಂಗನಹಳ್ಳಿ ಕ್ರಾಸ್‌ ಸಮೀಪ ಬುಧವಾರ ನಡೆದಿದೆ.

ಮಂಗನಹಳ್ಳಿ ನಿವಾಸಿ ಶಿವರಾಜ್‌ (55) ಮೃತ ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಮೃತರ ಪುತ್ರಿ ಚೈತನ್ಯ (19) ವಿಕ್ಟೋರಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ನಿಶ್ಚಿತಾರ್ಥಕ್ಕೆ ಕಲ್ಯಾಣ ಮಂಟಪ ಬುಕ್‌ ಮಾಡಿ ಮಗಳ ಜತೆ ಶಿವರಾಜ್‌ ಮನೆಗೆ ಮರಳುವಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನು ರಕ್ಷಿಸಿ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಗಳ ಮದುವೆ ಸಂಭ್ರಮ: ಸೆಕ್ಯೂರಿಟಿ ಗಾರ್ಡ್‌ ಶಿವರಾಜ್‌ ಅವರು, ತಮ್ಮ ಪತ್ನಿ ಮತ್ತು ಮಗಳ ಜತೆ ಮಂಗನಹಳ್ಳಿಯಲ್ಲಿ ನೆಲೆಸಿದ್ದರು. ದ್ವಿತೀಯ ಪಿಯುಸಿ ಓದುತ್ತಿದ್ದ ಚೈತನ್ಯಳಿಗೆ ಇತ್ತೀಚಿಗೆ ಮದುವೆ ನಿಶ್ಚಯವಾಗಿತ್ತು. ಶಿವರಾಜ್‌ ದಂಪತಿಗೆ ಚೈತನ್ಯ ಒಬ್ಬಳೇ ಮಗಳು. ಪುತ್ರಿ ಮದುವೆಯನ್ನು ಸಡಗರದಿಂದ ಮಾಡಲು ಯೋಜಿಸಿದ್ದ ಅವರು, ಬುಧವಾರ ಮಧ್ಯಾಹ್ನ ಮನೆ ಹತ್ತಿರ ನಿಶ್ಚಿತಾರ್ಥಕ್ಕಾಗಿ ಕಲ್ಯಾಣ ಮಂಟಪ ಬುಕ್‌ ಮಾಡಲು ಮಗಳನ್ನು ಕರೆದುಕೊಂಡು ಹೋಗಿದ್ದರು. ಮುಂದಿನ ತಿಂಗಳ ಮೊದಲ ವಾರದಲ್ಲಿ ನಿಶ್ಚಿತಾರ್ಥದ ದಿನಾಂಕ ಸಹ ಗೊತ್ತಾಗಿತ್ತು. ಕಲ್ಯಾಣ ಮಂಟಪ ಬುಕ್‌ ಮಾಡಿ ಸ್ಕೂಟರ್‌ನಲ್ಲಿ ತಂದೆ-ಮಗಳು ಮನೆಗೆ ಮರಳುತ್ತಿದ್ದರು. 

ACB Raids ಬಿಡಿಎ ಬ್ರೋಕರ್‌ಗಳಿಗೆ ಮತ್ತೊಂದು ಸಂಕಷ್ಟ, ಐಟಿ, ಇಡಿ ಉರುಳು?

ಆ ವೇಳೆ ರಸ್ತೆ ಬದಿಯ ಟ್ರಾನ್ಸ್‌ಫಾರ್ಮರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಟ್ರಾನ್ಸ್‌ಫಾರ್ಮರ್‌ನಿಂದ ಸ್ಫೋಟದಿಂದ ಸಿಡಿದ ಬೆಂಕಿ ಕಿಡಿಗಳು ತಂದೆ-ಮಗಳಿಗೆ ತಾಕಿದೆ. ಇದರಿಂದ ಅವರಿಗೆ ಬೆಂಕಿ ಹೊತ್ತಿಕೊಂಡು ಅಗ್ನಿ ಜ್ವಾಲೆಗೆ ಶಿವರಾಜ್‌ ಹಾಗೂ ಚೈತನ್ಯ ಸಿಲುಕಿದ್ದಾರೆ. ಕೂಡಲೇ ತಂದೆ-ಮಗಳ ಚೀರಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಬೆಡ್‌ಶೀಟ್‌ ಅನ್ನು ಹೊದಿಸಿ ತಂದೆ-ಮಗಳಿಗೆ ಹೊತ್ತಿದ್ದ ಬೆಂಕಿಯನ್ನು ಆರಿಸಿದ ಸಾರ್ವಜನಿಕರು, ಬಳಿಕ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ನಾಗರಬಾವಿ ಅಗ್ನಿಶಾಮಕ ದಳ ಠಾಣೆ ಸಿಬ್ಬಂದಿ, ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಈ ದುರಂತದಲ್ಲಿ ಶಿವರಾಜ್‌ ಅವರ ದೇಹ ಶೇ.70ರಷ್ಟುಹಾಗೂ ಅವರ ಪುತ್ರಿ ಚೈತನ್ಯಳ ದೇಹವು ಶೇ.50ರಷ್ಟು ಸುಟ್ಟಿದೆ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಶಿವರಾಜ್‌ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಅಂಜನಾಪುರ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಥಳೀಯ ಶಾಸಕರೂ ಆಗಿರುವ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Bengaluru Crime: ಟೀ ಕುಡಿಯಲು ಹೋದಾಗ ಬೈಕ್‌ ಡಿಕ್ಕಿಯಲ್ಲಿದ್ದ 2.75 ಲಕ್ಷ ಕಳವು

ಬೆಂಕಿ ಕಾಣಿಸಿದಾಗಲೇ ಬೆಸ್ಕಾಂಗೆ ಮಾಹಿತಿ: ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಿಡಿ ಕಾಣಿಸಿದ ಕೂಡಲೇ ಸಾರ್ವಜನಿಕರು ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಆ ಭಾಗದ ವಿದ್ಯುತ್‌ ಸಂಪರ್ಕ ಕಡಿತಗೊಳಿಸದೆ ಬೆಸ್ಕಾಂ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದ ತಂದೆ-ಮಗಳು ಜೀವ ಅಪಾಯಕ್ಕೆ ಸಿಲುಕಿದೆ ಎಂದು ಪೊಲೀಸರು ಹೇಳಿದ್ದಾರೆ.