ಹಾವೇರಿ ಜಿಲ್ಲೆಯ ಮಲ್ಲೂರು ಗ್ರಾಮದಲ್ಲಿ, ಜಾಗದ ವಿವಾದದಿಂದಾಗಿ ಸರ್ಕಾರಿ ಶಾಲೆಯೊಂದಕ್ಕೆ ಬೀಗ ಹಾಕಲಾಯಿತು. ದಾನ ನೀಡಿದ ಜಾಗಕ್ಕಿಂತ ಹೆಚ್ಚು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಈ ಕೃತ್ಯ ಎಸಗಿದ್ದು, ಇದರಿಂದ ಮಕ್ಕಳು ಶಾಲೆಯ ಹೊರಗೆ ಉಳಿಯುವಂತಾಯಿತು. 

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಜಾಗಕ್ಕೆ ಸಂಬಂಧಿಸಿದ ವಿವಾದದ ಪರಿಣಾಮವಾಗಿ ಸರ್ಕಾರಿ ಶಾಲೆಯ ಬಾಗಿಲಿಗೆ ಬೀಗ ಹಾಕಿದ ಘಟನೆ ನಡೆದಿದೆ. ಈ ಘಟನೆಯಿಂದ ಶಾಲಾ ಮಕ್ಕಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೇ, ಶಾಲೆಯ ಹೊರಗಡೆ ಬಿಸಿಲಲ್ಲೇ ಕುಳಿತುಕೊಳ್ಳುವಂತಾದ ಪರಿಸ್ಥಿತಿ ನಿರ್ಮಾಣವಾಯ್ತು.

ಮಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗೆ ಈರಪ್ಪ ಕುಲಕರ್ಣಿ ಎಂಬ ವ್ಯಕ್ತಿ ಬೀಗ ಜಡಿದು, ನಂತರ ಸ್ಥಳದಿಂದ ಪರಾರಿಯಾಗಿದ್ದರು. ಶಾಲೆಗೆ ಬಂದಿದ್ದ ಪುಟ್ಟ ಮಕ್ಕಳು ತರಗತಿಗಳಿಗೆ ಪ್ರವೇಶಿಸದೆ ಹೊರಗಡೆ ಕಾಯುವಂತಾದ ದೃಶ್ಯಗಳು ಕಂಡುಬಂತು. ಈ ವಿವಾದದ ಹಿನ್ನೆಲೆ ನೋಡಿದಾಗ ಈರಪ್ಪ ಕುಲಕರ್ಣಿ ಅವರ ತಂದೆ ಶಂಕ್ರಪ್ಪ ಕುಲಕರ್ಣಿ ಅವರು ಹಲವು ವರ್ಷಗಳ ಹಿಂದೆ ಶಾಲೆ ನಿರ್ಮಾಣಕ್ಕಾಗಿ ಸುಮಾರು ಐದು ಗುಂಟೆ ಜಾಗವನ್ನು ದಾನವಾಗಿ ನೀಡಿದ್ದರು. ಆದರೆ ಶಾಲೆ ಕಟ್ಟುವ ವೇಳೆ ದಾನವಾಗಿ ನೀಡಿದ ಜಾಗಕ್ಕಿಂತ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ ಎಂದು ಈರಪ್ಪ ಕುಲಕರ್ಣಿ ಆರೋಪಿಸಿದ್ದಾರೆ.

ನ್ಯಾಯಾಲಯದಲ್ಲಿ ವ್ಯಾಜ್ಯ

ಈ ವಿಚಾರವನ್ನು ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ಜಾಗ ಒತ್ತುವರಿ ಕುರಿತಂತೆ ಈಗಾಗಲೇ ವ್ಯಾಜ್ಯ ನಡೆಯುತ್ತಿದೆ. ಒತ್ತುವರಿ ಮಾಡಿಕೊಂಡಿರುವ ಹೆಚ್ಚುವರಿ ಜಾಗವನ್ನು ಬಿಟ್ಟುಕೊಡಬೇಕು ಎಂದು ಈರಪ್ಪ ಕುಲಕರ್ಣಿ ಪಟ್ಟು ಹಿಡಿದು ಬಂದಿದ್ದು, ಆಡಳಿತ ಮಂಡಳಿಯಿಂದ ಸ್ಪಷ್ಟ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಇಂದು ರೊಚ್ಚಿಗೆದ್ದು ಶಾಲೆಯ ಬಾಗಿಲಿಗೆ ಬೀಗ ಹಾಕಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬ್ಯಾಡಗಿ ತಹಶಿಲ್ದಾರ್ ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ (BEO) ಎಸ್.ಜಿ. ಕೋಟೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಿ, ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾದರು. ಜಾಗದ ವಿವಾದವನ್ನು ಸರ್ವೆ ಮೂಲಕ ಪರಿಶೀಲಿಸಿ ಸಮಸ್ಯೆಯನ್ನು ಕಾನೂನುಬದ್ಧವಾಗಿ ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಕುರಿತು ಶಾಲೆಯಲ್ಲೇ ಗ್ರಾಮಸ್ಥರು, ಶಾಲಾ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ನಡುವೆ ಸಭೆ ನಡೆಯಿತು.

ಮಾಧ್ಯಮಗಳಿಗೆ ಈರಪ್ಪ ಕುಲಕರ್ಣಿ ಹೇಳಿಕೆ

ಶಾಲೆಗೆ ಬೀಗ ಹಾಕಿದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಈರಪ್ಪ ಕುಲಕರ್ಣಿ, “ನಮಗೆ ಮುಸ್ಲಿಂ ಸಮಾಜದಿಂದ ಅನ್ಯಾಯವಾಗಿದೆ. ನಮ್ಮ ತಂದೆ ಶಾಲೆಗೆ ಐದು ಗುಂಟೆ ಜಾಗ ನೀಡುವುದಾಗಿ ಹೇಳಿದ್ದೇ ಸತ್ಯ. ಆದರೆ ಅ ಖರಾಬ್ ಜಾಗದಲ್ಲಿ ನಮ್ಮ ಹೆಸರೇ ದಾಖಲಾಗಿದೆ” ಎಂದು ಹೇಳಿದರು.

“ನಾವು ಶಾಲಾ ಮಕ್ಕಳಿಗೆ ಯಾವುದೇ ಅನ್ಯಾಯ ಮಾಡುತ್ತಿಲ್ಲ. ನಮ್ಮ ತಂದೆಗೆ ಭರವಸೆ ನೀಡಿ, ನಂತರ ಕೆಲವರು ನಮಗೆ ಅನ್ಯಾಯ ಮಾಡಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಶಾಲೆಗೆ ಬೀಗ ಹಾಕುವ ಪರಿಸ್ಥಿತಿ ಬರುತ್ತದೆ. ಆದರೂ ನಾವು ಮಕ್ಕಳಿಗೆ ಅನ್ಯಾಯ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

“ನಾವು ಮೂರು ಜನ ಅಣ್ಣತಮ್ಮಂದಿರಿದ್ದೇವೆ. ಒಪ್ಪಂದದಂತೆ ಎಂಟು ಗುಂಟೆ ಜಾಗವನ್ನು ಶಾಲೆಗೆ ನೀಡಲು ಸಿದ್ಧರಿದ್ದೇವೆ. ಆದರೆ ಅನ್ಯಾಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಒಟ್ಟು 15 ಗುಂಟೆ ಖರಾಬ್ ಜಾಗ ನಮ್ಮದೇ ಎಂದು ದಾಖಲೆಗಳಿವೆ. ನಮಗೆ ಅನ್ಯಾಯವಾಗಿದೆ, ಅದಕ್ಕಾಗಿಯೇ ಬೀಗ ಹಾಕಬೇಕಾಯಿತು” ಎಂದು ಈರಪ್ಪ ಹೇಳಿದ್ದಾರೆ.

“ಈಗಲೂ ನಾವು ಮೂವರು ಅಣ್ಣತಮ್ಮಂದಿರು ಶಾಲೆಗೆ ಎಂಟು ಗುಂಟೆ ಜಾಗ ಕೊಡಲು ಸಿದ್ಧರಿದ್ದೇವೆ. ಮಾತುಕತೆಗೆ ಬನ್ನಿ ಎಂದರೂ ಎದುರಿನವರು ಒಪ್ಪಲು ತಯಾರಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ, ಮಲ್ಲೂರು ಗ್ರಾಮದ ಸರ್ಕಾರಿ ಶಾಲೆಯ ಜಾಗ ವಿವಾದವು ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟುಮಾಡುವ ಮಟ್ಟಿಗೆ ತೀವ್ರಗೊಂಡಿದ್ದು, ಆಡಳಿತವು ತ್ವರಿತವಾಗಿ ಸರ್ವೆ ನಡೆಸಿ ಶಾಶ್ವತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಧಕ್ಕೆ ಬಾರದಂತೆ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವುದೇ ಇದೀಗ ಪ್ರಮುಖ ಸವಾಲಾಗಿ ಪರಿಣಮಿಸಿದೆ.