ದಾಳಿ ವೇಳೆ ಬಿಡಿಎ ಬ್ರೋಕರ್‌ಗಳ ಬಳಿ ಪತ್ತೆಯಾದ ಚಿನ್ನಾಭರಣ, ಹಣ, ಆಸ್ತಿ ತನಿಖಾ ಸಂಸ್ಥೆಗಳಿಗೆ ಶೀಘ್ರ ಎಸಿಬಿ ವರದಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಪ್ರತ್ಯೇಕವಾಗಿ ಎಫ್‌ಐಆರ್‌

ಬೆಂಗಳೂರು(ಮಾ.23): ಭೂ ಹಗರಣದ ಸುಳಿಗೆ ಸಿಲುಕಿ ಎಸಿಬಿ ಗಾಳಕ್ಕೆ ಬಿದ್ದಿರುವ ಒಂಭತ್ತು ಮಂದಿ ಬಿಡಿಎ ದಲ್ಲಾಳಿಗಳಿಗೆ ಈಗ ಆದಾಯ ತೆರಿಗೆ(ಐಟಿ) ಹಾಗೂ ಜಾರಿ ನಿರ್ದೇಶನಾಲಯದ(ಇಡಿ) ತನಿಖೆಯ ಉರುಳು ಸುತ್ತಿಕೊಳ್ಳುವ ಸಾಧ್ಯತೆಯಿದೆ.

ದಲ್ಲಾಳಿಗಳ ಮನೆಗಳ ಮೇಲೆ ನಡೆದ ದಾಳಿ ವೇಳೆ ಪತ್ತೆಯಾಗಿರುವ ಚಿನ್ನಾಭರಣ ಹಾಗೂ ಹಣದ ಸಂಬಂಧ ಕೇಂದ್ರ ತನಿಖಾ ಸಂಸ್ಥೆಗಳಿಗೆ ಎಸಿಬಿ ವರದಿ ಸಲ್ಲಿಸಲಿದೆ. ಈ ಮಾಹಿತಿ ಆಧರಿಸಿ ಕೇಂದ್ರ ತನಿಖಾ ಸಂಸ್ಥೆಗಳು ಪ್ರತ್ಯೇಕವಾಗಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ACB Raids: ಲಂಚಬಾಕರ ಬಳಿ ಇನ್ನೂ ಇದೆ ಬೆಟ್ಟದಷ್ಟು ಆಸ್ತಿ..!

ನಾವು ಬಿಡಿಎ ಅವ್ಯವಹಾರಕ್ಕೆ ಸಂಬಂಧಪಟ್ಟದಾಖಲೆಗಳನ್ನು ಮಾತ್ರ ಬಿಡಿಎ ದಲ್ಲಾಳಿಗಳ ಮನೆಯಲ್ಲಿ ಜಪ್ತಿ ಮಾಡಿದ್ದೇವೆ. ನಮ್ಮ ಕಾರ್ಯಾಚರಣೆ ವೇಳೆ ಸಿಕ್ಕಿದ ಚಿನ್ನ, ಬೆಳ್ಳಿ ಹಾಗೂ ಹಣದ ಕುರಿತು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗುತ್ತದೆ. ಮುಂದಿನ ಕಾನೂನು ಕ್ರಮವನ್ನು ಆ ಇಲಾಖೆಗಳು ಜರುಗಿಸಲಿವೆ ಎಂದು ಎಸಿಬಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಾಯ್ದೆ ಅನ್ವಯ ಆಗಲ್ಲ:
ಅಲ್ಲದೆ ಸರ್ಕಾರಿ ಅಧಿಕಾರಿಗಳ ಮನೆಗಳಲ್ಲಿ ಹಣ ಹಾಗೂ ಚಿನ್ನ ಜಪ್ತಿಯಾದರೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಅಧಿಕಾರವು ಎಸಿಬಿಗೆ ಇದೆ. ಆದರೆ, ದಲ್ಲಾಳಿಗಳು ಖಾಸಗಿ ವ್ಯಕ್ತಿಗಳಾಗಿರುವ ಕಾರಣಕ್ಕೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯವಾಗುವುದಿಲ್ಲ. ಹೀಗಾಗಿ ದಲ್ಲಾಳಿಗಳ ಬಳಿ ದಾಖಲೆಗಳನ್ನು ಮಾತ್ರ ಜಪ್ತಿ ಮಾಡಲಾಗಿದೆ ಎಂದಿರುವ ಎಸಿಬಿ, ಇನ್ನುಳಿದ ಹಣ, ಕಾರು, ಚಿನ್ನ, ಬೆಳ್ಳಿ ಹಾಗೂ ವಜ್ರ ವಶಪಡಿಸಿಕೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಲು ಹಿಂದೇಟು ಹಾಕಿದೆ ಎಂದು ತಿಳಿದು ಬಂದಿದೆ.

ಎಸಿಬಿ ತನಿಖೆ ತಪ್ಪಿಸೋದಾಗಿ ಲಕ್ಷಾಂತರ ರೂ. ಟೋಪಿ..!

ಕೆಂಪೇಗೌಡ, ವಿಶ್ವೇಶ್ವರಯ್ಯ ಲೇಔಟಲ್ಲೇ ಹೆಚ್ಚು ಅವ್ಯವಹಾರ?
ಬಿಡಿಎ ಅಭಿವೃದ್ಧಿ ಪಡಿಸಿದ ಕೆಂಗೇರಿ ಹೋಬಳಿ ವ್ಯಾಪ್ತಿಯ ನಾಡಪ್ರಭು ಕೆಂಪೇಗೌಡ ಹಾಗೂ ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಬಿಡಿಎ ಅಧಿಕಾರಿಗಳು ಹಾಗೂ ದಲ್ಲಾಳಿಗಳು ಹೆಚ್ಚಿನ ಅವ್ಯವಹಾರ ನಡೆಸಿರುವ ಬಗ್ಗೆ ಎಸಿಬಿ ಶಂಕೆ ವ್ಯಕ್ತಪಡಿಸಿದೆ.

ಈ ಬಡಾವಣೆಗಳ ಅಭಿವೃದ್ಧಿ ಸಲುವಾಗಿ ವಶಪಡಿಸಿಕೊಂಡ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಹತ್ತಾರು ಕೋಟಿ ರು.ಗಳನ್ನು ಸರ್ಕಾರದಿಂದ ಭೂ ಪರಿಹಾರ ಪಡೆಯಲಾಗಿದೆ. ಅಲ್ಲದೆ ಸರ್ಕಾರಿ ಭೂಮಿಯನ್ನು ಕೂಡಾ ಖಾಸಗಿ ಜಮೀನು ಎಂದು ತೋರಿಸಿದ್ದಾರೆ. ಇನ್ನು ಬದಲಿ ನಿವೇಶನ, ಡಿನೋಟಿಫಿಕೇಷನ್‌ ಹಾಗೂ ನಿವೇಶನ ಮಂಜೂರಾತಿ ಸೇರಿದಂತೆ ಭೂ ವ್ಯವಹಾರದಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬ್ರೋಕರ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಎ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿ ನಷ್ಟವನ್ನು ಉಂಟು ಮಾಡುವ ಬ್ರೋಕರ್‌ಗಳ ಮೇಲೆ ಎಸಿಬಿ ದಾಳಿ ನಡೆಸಿರುವುದು ಸ್ವಾಗತಾರ್ಹ. ನಾನು ಬಿಡಿಎ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಬಿಡಿಎ ಆವರಣದೊಳಕ್ಕೆ ಏಜೆಂಟರಿಗೆ ನಿರ್ಬಂಧ ವಿಧಿಸಿದ್ದೇನೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಏಜೆಂಟ್‌ಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದರು.

ಈ ಹಿಂದೆ ಬಿಡಿಎಗೆ ರೈತರು ಮತ್ತು ಜನಸಾಮಾನ್ಯರು ಬಂದರೆ ಯಾವುದೇ ಕೆಲಸ ಆಗುವುದಿಲ್ಲ. ಏಜೆಂಟರು ಬಂದರೆ ಕೆಲಸ ಆಗುತ್ತದೆ ಎಂಬ ಭಾವನೆ ಇತ್ತು. ಆಗಿನ ಪರಿಸ್ಥಿತಿಯೂ ಅದೇ ರೀತಿ ಇತ್ತು. ಆದರೆ, ನಾನು ಅಧ್ಯಕ್ಷನಾದ ಬಳಿಕ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದು, ಸಾರ್ವಜನಿಕರು ಮುಕ್ತವಾಗಿ ಬಿಡಿಎಗೆ ಬಂದು ಕೆಲಸ ಮಾಡಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಮತ್ತಷ್ಟುಸುಧಾರಣೆಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.