ಮಂಗಳೂರು(ಅ.04): ತಾನು ಸುವರ್ಣ ನ್ಯೂಸ್‌ ಕ್ಯಾಮೆರಾಮೆನ್‌ ಎಂದು ಸುಳ್ಳು ಹೇಳಿ ಬಂಟ್ವಾಳದ ಎಸ್‌ವಿಎಸ್‌ ಆಂಗ್ಲ ಮಾಧ್ಯಮ ಶಾಲೆಯವರನ್ನು ಬ್ಲಾಕ್‌ಮೇಲ್‌ ಮಾಡಲು ಯತ್ನಿಸಿದ ನಕಲಿ ಪತ್ರಕರ್ತನ ವಿರುದ್ಧ ಶಾಲಾ ಆಡಳಿತ ಮಂಡಳಿ ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದೆ.

ಬಂಟ್ವಾಳ ಸಿದ್ದಕಟ್ಟೆನಿವಾಸಿ ಅಶೋಕ್‌ ಹಲಾಯಿ ಎಂಬಾತ ತಾನು ಸುವರ್ಣ ನ್ಯೂಸ್‌ ಕ್ಯಾಮರಾ ಮೆನ್‌ ಎಂದು ಹೇಳಿಕೊಂಡು ಗುರುವಾರ ಎಸ್‌ವಿಎಸ್‌ ಶಿಕ್ಷಣ ಸಂಸ್ಥೆಗೆ ತೆರಳಿದ್ದ. ಸಂಸ್ಥೆಗೆ ಸಂಬಂಧಿಸಿದ ಸುದ್ದಿಯೊಂದನ್ನು ಪ್ರಸಾರವಾಗದಂತೆ ಮಾಡಲು ತನಗೆ 50 ಸಾವಿರ ರು.ನೀಡುವಂತೆ ಬೇಡಿಕೆ ಇಟ್ಟಿದ್ದ.

ನಕಲಿ ಪತ್ರಕರ್ತರಿಗೆ ಗ್ರಾಮಸ್ಥರಿಂದ ಧರ್ಮದೇಟು

ಸಂಸ್ಥೆಯ ಆಡಳಿತ ಮಂಡಳಿಯವರು ಆತನ ಬ್ಲ್ಯಾಕ್‌ ಮೇಲ್‌ಗೆ ಮಣಿದು 50 ಸಾವಿರ ರು. ಚೆಕ್‌ ನೀಡಿದ್ದಾರೆ. ಬಳಿಕ ಶಿಕ್ಷಣ ಸಂಸ್ಥೆಯವರು ಸುವರ್ಣ ನ್ಯೂಸ್‌ನ ಮಂಗಳೂರು ವರದಿಗಾರರನ್ನು ಸಂಪರ್ಕಿಸಿದಾಗ ಅಶೋಕ್‌ ಹಲಾಯಿ ಎಂಬಾತ ನಕಲಿ ಪತ್ರಕರ್ತ ಎನ್ನುವುದು ಗೊತ್ತಾಗಿದೆ.

ಬಂಟ್ವಾಳ: ಸುವರ್ಣ ನ್ಯೂಸ್ ಹೆಸರಲ್ಲಿ 50 ಸಾವಿರಕ್ಕೆ ಬೇಡಿಕೆ ಇಟ್ಟ ನಕಲಿ ಪತ್ರಕರ್ತ

ಬಳಿಕ ಆತನ ಮಾಹಿತಿ ಕಲೆ ಹಾಕಿದಾಗ, ಈತ ಯಾವುದೋ ಯೂ ಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದು, ಅದರ ಹೆಸರಿನ ಜೊತೆ ಸುವರ್ಣ ನ್ಯೂಸ್‌ ಹೆಸರಲ್ಲೂ ಬ್ಲ್ಯಾಕ್‌ ಮೇಲ್‌ಗೆ ಇಳಿದಿದ್ದ ಎನ್ನುವುದು ಗೊತ್ತಾಗಿದೆ. ಹೀಗಾಗಿ ಎಸ್‌ವಿಎಸ್‌ ಆಡಳಿತ ಮಂಡಳಿಯಿಂದ ಆತನ ದೂರವಾಣಿ ಸಂಖ್ಯೆ ಪಡೆದ ಬಳಿಕ ಸುವರ್ಣ ನ್ಯೂಸ್‌ನ ಮಂಗಳೂರು ವರದಿಗಾರರು ಆತನಿಗೆ ಕರೆ ಮಾಡಿ ಪೊಲೀಸ್‌ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಕೆಐಒಸಿಎಲ್‌ ಗಣಿಗಾರಿಕೆ ಶೀಘ್ರ ಆರಂಭ

ಬಳಿಕ ಆತ ಆ 50 ಸಾವಿರದ ರು.ಚೆಕ್‌ನ್ನು ಶಿಕ್ಷಣ ಸಂಸ್ಥೆಗೆ ವಾಪಾಸ್‌ ಕೊಟ್ಟು ಕ್ಷಮೆ ಕೋರಿ ಪೊಲೀಸ್‌ ದೂರು ನೀಡದಂತೆ ಅಂಗಲಾಚಿ ಕಾಲ್ಕಿತ್ತಿದ್ದಾನೆ. ಈತನ ವಿರುದ್ಧ ಎಸ್‌ವಿಎಸ್‌ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದೆ.

ಶಿಕ್ಷಣ ಸಂಸ್ಥೆಯವರು ನೀಡಿದ ದೂರನ್ನು ಪರಿಶೀಲಿಸುತ್ತಿದ್ದೇನೆ. ಈ ಕೃತ್ಯದ ಹಿನ್ನೆಲೆಯನ್ನೂ ತಿಳಿದುಕೊಳ್ಳಲು ತನಿಖೆ ನಡೆಸುತ್ತೇನೆ ಎಂದು ನಗರ ಠಾಣಾಧಿಕಾರಿ ಚಂದ್ರಶೇಖರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

25 ವರ್ಷ ಹಳೆಯ ‘ಸುಜಾತ’ ಕೃಷಿ ಪತ್ರಿಕೆಗೆ ಬೀಗ! ಹೊರೆಯಾಯ್ತಾ GST ?