ಕೋಲಾರ(ಜು.30): ರೈತರೊಬ್ಬರು ಸಾಗಿಸುತ್ತಿದ್ದ ಜಾನವಾರುಗಳ ವಾಹನ ಅಡ್ಡಗಟ್ಟಿದ ನಾಲ್ವರು ನಕಲಿ ಪತ್ರಕರ್ತರು ಹಣ ನೀಡುವಂತೆ ರೈತರನ್ನು ಬೆದರಿಸಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ನಕಲಿ ಪತ್ರಕರ್ತರಿಗೆ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.

ದಾಖಲೆ ತೋರಿಸುವಂತೆ ಬೆದರಿಕೆ:

ಆಂಧ್ರಪ್ರದೇಶದ ತಂಬಾಳ್ಳಪಲ್ಲಿ ಮಂಡಲ್‌ ಪೆದ್ದವಾದ್ಯಂ ಗ್ರಾಮದ ರೆಡ್ಡಪ್ಪ, ರೆಡ್ಡಿಭಾಷ, ಬಾಬು ಎಂಬ ಮೂವರು ರೈತರು ನಾಲ್ಕು ರಾಸುಗಳನ್ನು ಚಿಂತಾಮಣಿ ದನಗಳ ಸಂತೆಗೆ ಮಾರಾಟ ಮಾಡಲು ತಂದಿದ್ದರು.

ಆದರೆ ರಾಸುಗಳು ಮಾರಾಟವಾಗದ ಕಾರಣ ವಾಪಸ್‌ ಕೊಂಡೊಯ್ಯುತ್ತಿದ್ದ ವೇಳೆ ಪತ್ರಕರ್ತರ ಸೋಗಿನಲ್ಲಿ ಬೈಕ್‌ನಲ್ಲಿ ಬಂದಿಳಿದ ತಾಲೂಕಿನ ಕೊಡದವಾಡಿ ಗ್ರಾಮದ ಸಮೀಪದ ಶ್ರೀನಿವಾಸಪುರದ ರಾಘವೇಂದ್ರ, ಸೂರ್ಯನಾರಾಯಣ, ಮುರಳಿಕೃಷ್ಣ, ನಂದೀಶ್‌ ವಾಹನ ಅಡ್ಡಗಟ್ಟಿದ್ದಾರೆ. ರಾಸುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಿಯಾ, ಅದಕ್ಕೆ ಸಂಬಂಧಪಟ್ಟ ದಾಖಲೆ ತೋರಿಸು ಎಂದು ರೈತರನ್ನು ಬೆದರಿಸಿದ್ದಾರೆ.

ನಕಲಿ ಪತ್ರಕರ್ತರಿಗೆ ಗೂಸಾ:

ಮಾರಾಟಕ್ಕೆ ತಂದಿದ್ದ ಎತ್ತುಗಳನ್ನು ವಾಪಸ್‌ ಕೊಂಡೊಯ್ಯುತ್ತಿದ್ದು ಇದಕ್ಕೆ ಯಾವುದೇ ದಾಖಲೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ದುಷ್ಕರ್ಮಿಗಳು ಹಣ ನೀಡುವಂತೆ ರೈತರನ್ನು ಒತ್ತಾಯಿಸಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ಅವರನ್ನು ಹಿಡಿದು ಕಟ್ಟಿಹಾಕಿ ಗೂಸಾ ನೀಡಿದ್ದಾರೆ. ನಂತರ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಚಿಂತಾಮಣಿಯಲ್ಲಿ ನಕಲಿ ಪತ್ರಕರ್ತರ ಹಾವಳಿ:

ಇತ್ತೀಚಿಗೆ ಚಿಂತಾಮಣಿ ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿರ ಸುಲಿಗೆ ಮಾಡುವ ದಂಧೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೆ ತಮ್ಮ ವಾಹನಗಳಿಗೆ ಪ್ರೆಸ್‌ ಎಂಬ ಸ್ಟಿಕ್ಕರ್‌ ಅಂಟಿಸಿಕೊಂಡು ನಕಲಿ ಕ್ಲಿನಿಕ್‌, ಗ್ರಾಪಂ ಕಚೇರಿಗಳು, ಅಕ್ರಮ ಜೂಜು ಅಡ್ಡೆಗಳಿಗೆ ಭೇಟಿ ನೀಡಿ ಹಣ ವಸೂಲಿ ಮಾಡುವುದು ಸಾಮಾನ್ಯವಾಗಿದೆ ಎಂದು ಆರೋಪಿಸಿದ್ದಾರೆ.

'ದೇಶದ ಕಥೆ ಇಷ್ಟೇ ಕಣಣ್ಣೊ..’ ; ಸೋಷಿಯಲ್ ಮೀಡಿಯಾದಲ್ಲಿ ಪತ್ರಕರ್ತೆಯರ ವಿಡಿಯೋಗೆ ಮೆಚ್ಚುಗೆ

ಭಾನುವಾರ ಸಂಜೆ ನಡೆದ ಘಟನೆಯೂ ಇದೇ ರೀತಿಯದ್ದಾಗಿದ್ದು, ಗ್ರಾಮಸ್ಥರು ಮುಂದಾಗದಿದ್ದರೆ ಬೆಳಕಿಗೆ ಬರುತ್ತಿರಲಿಲ್ಲ ಎಂಬುದು ಪ್ರತ್ಯಕ್ಷ ದರ್ಶಿಗಳ ಅಭಿಪ್ರಾಯವಾಗಿದೆ. ಕೂಡಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಇತ್ತ ಗಮನ ಹರಿಸಿ, ನಕಲಿ ಪತ್ರಕರ್ತರು ಮತ್ತು ಪ್ರೆಸ್‌ ಸ್ಟಿಕ್ಕರ್‌ ಹಾಕಿಕೊಂಡಿರುವ ನಕಲಿ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ