Asianet Suvarna News Asianet Suvarna News

ಕಾವೇರಿ ತೀರ್ಥೋದ್ಭವ: ಮಧ್ಯರಾತ್ರಿ 1.27ಕ್ಕೆ ತೀರ್ಥ ರೂಪಿಣಿಯಾದ ಕಾವೇರಿ, ಪುನೀತರಾದ ಭಕ್ತಗಣ

ಕೊಡಗಿನಲ್ಲಿ ಹುಟ್ಟಿ ನಾಡಿನುದ್ಧಕ್ಕೂ ಹರಿದು ಅರ್ಧ ರಾಜ್ಯಕ್ಕೆ ಜೀವ ಕಳೆ ನೀಡುವ ಕೊಡಗಿನ ಕುಲದೇವಿ ಮಾತೆ ಕಾವೇರಿ ತೀರ್ಥ ರೂಪಿಣಿಯಾಗಿ ಸಾವಿರಾರು ಭಕ್ತರಿಗೆ ದರ್ಶನ ನೀಡಿದ್ದಾಳೆ. ಕಾವೇರಿ ಮಾತೆಯ ಬರುವಿಕೆಗಾಗಿ ಜೈ ಜೈ ಮಾತಾ ಕಾವೇರಿ ಮಾತಾ ಎಂದು ಕಾವೇರಿ ಮಾತೆಯನ್ನು ಭಜಿಸುತ್ತಾ ಭಕ್ತ ಗಣ ಆಹ್ವಾನಿಸಿತು. 

Thousands Of Devotees Witness Cauvery Theerthodbhava In Tala Kaveri gvd
Author
First Published Oct 18, 2023, 7:23 AM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಅ.18): ಕೊಡಗಿನಲ್ಲಿ ಹುಟ್ಟಿ ನಾಡಿನುದ್ಧಕ್ಕೂ ಹರಿದು ಅರ್ಧ ರಾಜ್ಯಕ್ಕೆ ಜೀವ ಕಳೆ ನೀಡುವ ಕೊಡಗಿನ ಕುಲದೇವಿ ಮಾತೆ ಕಾವೇರಿ ತೀರ್ಥ ರೂಪಿಣಿಯಾಗಿ ಸಾವಿರಾರು ಭಕ್ತರಿಗೆ ದರ್ಶನ ನೀಡಿದ್ದಾಳೆ. ಕಾವೇರಿ ಮಾತೆಯ ಬರುವಿಕೆಗಾಗಿ ಜೈ ಜೈ ಮಾತಾ ಕಾವೇರಿ ಮಾತಾ ಎಂದು ಕಾವೇರಿ ಮಾತೆಯನ್ನು ಭಜಿಸುತ್ತಾ ಭಕ್ತ ಗಣ ಆಹ್ವಾನಿಸಿತು. ಕಾವೇರಿ ಬರುವಿಕೆಗಾಗಿ ಉಕ್ಕಿ ಬಾ ತಾಯಿ ಎಂದು ಪ್ರಾರ್ಥಿಸಿದರು. ಅರ್ಚಕರ ತಂಡ ಕುಂಕುಮಾರ್ಚನೆ, ಪುಷ್ಪಾರ್ಚನೆ ಮತ್ತು ಮಹಾಪೂಜೆ ನೆರವೇರಿಸಿತು. ಕಾವೇರಿ ಮಾತೆಯನ್ನು ಕಣ್ತುಂಬಿಕೊಂಡು ತಮ್ಮ ಮನೆಗೂ ಕೊಂಡೊಯ್ಯಲು ಮಧ್ಯರಾತ್ರಿಯಾದರೂ ಕದಡದೆ ಕಾತರರಾಗಿ ತುದಿಗಾಲಿನಲ್ಲಿ ನಿಂತು ಜನರು ಕಾವೇರಿ ದರ್ಶನ ಪಡೆದರು. 

ತೀರ್ಥ ರೂಪಿಣಿಯಾಗುತ್ತಿದ್ದಂತೆ ಅರ್ಚಕರ ತಂಡ ಬ್ರಹ್ಮ ಕುಂಡಿಕೆಯಿಂದ ತೀರ್ಥ ತೆಗೆದು ನೆರೆದಿದ್ದ ಭಕ್ತ ವೃಂದ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿತು. ಭಕ್ತರೆಲ್ಲರೂ ಧನ್ಯರಾದೆವೆಂದು ಜಯಘೋಷಗಳನ್ನು ಹಾಕಿ ಸಂಭ್ರಮಿಸಿದರು. ಇದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಪವಿತ್ರ ತೀರ್ಥ ಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ಇಂದು ಮಧ್ಯರಾತ್ರಿ ಕಂಡು ಬಂದ ದೃಶ್ಯ. ಹೌದು ಪ್ರತೀ ವರ್ಷದಂತೆ ಈ ವರ್ಷವೂ ತುಲಾ ಸಂಕ್ರಮಣದಂದು ಕಾವೇರಿ ಮಾತೆ ತೀರ್ಥ ರೂಪಿಣಿಯಾಗುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ನೆರೆದಿದ್ದರು. ಬ್ರಹ್ಮ ಕುಂಡಿಕೆ ಮುಂಭಾಗದಲ್ಲೇ ಇರುವ ಕೊಳದ ಸುತ್ತಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾವೇರಿ ಮಾತೆಯನ್ನು ನೆನೆಯುತ್ತಾ ಭಕ್ತಿ ಭಾವ ಮೆರೆದರು. 

ಭ್ರಷ್ಟಾಚಾರಿ ಕಾಂಗ್ರೆಸ್‌ ನಾಯಕರಿಗೆ ತಿಹಾರ್‌ ಜೈಲು ಸಿದ್ಧ: ನಳಿನ್‌ ಕುಮಾರ್‌ ಕಟೀಲ್‌

ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳಲು ಒಂದೆಡೆ ಭಕ್ತ ಸಾಗರ ಸೇರಿದಂತೆ, ಮತ್ತೊಂದೆಡೆ ತಮ್ಮ ಕುಲದೇವಿಯಿಂದ ಆಶೀರ್ವಾದ ಪಡೆದುಕೊಳ್ಳಲು ವಿವಿಧ ಕೊಡವ ಸಂಘಟನೆಗಳು ಭಾಗಮಂಡಲದಿಂದ ತಲಕಾವೇರಿವರೆಗೆ ಆ ಮಧ್ಯರಾತ್ರಿಯಲ್ಲೂ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಕಾವೇರಿ ಮಾತೆಯನ್ನು ನೆನೆಯುತ್ತಾ ತಲಕಾವೇರಿಗೆ ತಲುಪಿದರು. ಈ ವೇಳೆ ವಿರಾಜಪೇಟೆ ಶಾಸಕ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಕೂಡ ಕುಲದೇವಿಯನ್ನು ನೆನೆಯುತ್ತಾ ಸರಿ ರಾತ್ರಿಯಲ್ಲಿ ತಲಕಾವೇರಿವರೆಗೆ ಪಾದಯಾತ್ರೆಯಲ್ಲೇ ಬಂದರು. 

ಬಳಿಕ ತೀರ್ಥ ರೂಪಿಣಿಯಾದ ಕಾವೇರಿ ಮಾತೆಯನ್ನು ಕಣ್ತುಂಬಿಕೊಂಡರು. ಭಕ್ತ ವೃಂದ ಹೀಗೆ ಭಜಿಸುತ್ತಿದ್ದರೆ ನಿಗಧಿತ ಸಮಯಕ್ಕೆ ಅಂದರೆ ಕರ್ಕಾಟಕ ಲಗ್ನದಲ್ಲಿ ಮಧ್ಯರಾತ್ರಿ 1 ಗಂಟೆ 27 ನಿಮಿಷಕ್ಕೆ ಮಾತೆ ಕಾವೇರಿ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾದಳು. ತೀರ್ಥ ರೂಪಿಣಿಯಾಗುತ್ತಿದ್ದಂತೆ ಸಾವಿರಾರು ಭಕ್ತರು ಬ್ರಹ್ಮ ಕುಂಡಿಕೆ ಬಳಿಗೆ ಸರದಿಯಲ್ಲಿ ಹೋಗಿ ವಿಶೇಷ ಪೂಜೆ ಸಲ್ಲಿಸಿದರು. ಕೊಳದ ಪಕ್ಕದಲ್ಲಿಯೇ ಸಿದ್ಧಮಾಡಲಾಗಿದ್ದ ಸರದಿಯಲ್ಲಿ ನಿಂತು ಭಕ್ತರು ತೀರ್ಥ ಪಡೆದು ಕೊಂಡೊಯ್ದರು. ತೀರ್ಥೋದ್ಭವದಲ್ಲಿ ಮಡಿಕೇರಿ ಶಾಸಕ ಮಂತರ್ ಗೌಡ, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಭಾಗವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಕೊಡಗು ಉಸ್ತುವಾರಿ ಸಚಿವ ಭೋಸರಾಜ್ ಕಾವೇರಿ ತುಲಾ ಸಂಕ್ರಮಣ ಎಲ್ಲವೂ ಸುಸೂತ್ರವಾಗಿ ನೆರವೇರಿದೆ. ಕಾವೇರಿ ಮಾತೆ ಇನ್ನಾದರೂ ರಾಜ್ಯದ ಜನತೆಯ ಮೇಲೆ ಕರುಣೆ ತೋರಿಸಲಿ ಎಂದು ಬೇಡಿಕೊಂಡರು. ಇನ್ನು ಶಾಸಕ ಪೊನ್ನಣ್ಣ ಅವರು ಮಾತನಾಡಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗುವುದನ್ನು ಕಣ್ತುಂಬಿಕೊಳ್ಳಲು ಅನುಕೂಲವಾಗುವಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಬಹುತೇಕ ಗ್ರಾಮಗಳಿಗೆ ಉಚಿತವಾಗಿ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲೂ ಭಾಗಮಂಡಲದಿಂದ ತಲಕಾವೇರಿಗೆ ಓಡಾಡಲು ಯಾವುದೇ ಅಡಚಣೆ ಆಗದಂತೆ ಸಾಕಷ್ಟು ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು. 

ಕೋಟಿ ನಗದು ಪತ್ತೆ ಬಗ್ಗೆ ಸಿಬಿಐ ತನಿಖೆ ನಡೆಸಿ: ಬಿ.ಎಸ್‌.ಯಡಿಯೂರಪ್ಪ

ಇದರಿಂದ ಬರುವ ಭಕ್ತರಿಗೆ ಅನುಕೂಲವಾಗಿದೆ ಎನ್ನುವುದು ನನ್ನ ಅಭಿಪ್ರಾಯ ಎಂದರು. ಸಂಸದ ಪ್ರತಾಪ್ ಸಿಂಹ ಕಾವೇರಿ ಮಾತೆ ಎಲ್ಲರಿಗೆ ಒಳ್ಳೆಯದನ್ನು ಕರುಣಿಸಲಿ ಎಂದರು. ಇನ್ನು ಕಾವೇರಿ ತೀರ್ಥೋದ್ಭವ ಜಾತ್ರೆಗೆ ಬರುವ ಎಲ್ಲಾ ಭಕ್ತರಿಗೆ ಅನುಕೂಲವಾಗಲೆಂದು ದೇವಾಲಯದಲ್ಲಿ ಕೊಡಗು ಏಕೀಕರಣ ರಂಗದ ನೇತೃತ್ವದಲ್ಲಿ ರಾತ್ರೀ ಇಡೀ ಅನ್ನದಾನ ಏರ್ಪಡಿಸಲಾಗಿತ್ತು. ಒಟ್ಟಿನಲ್ಲಿ ತೀರ್ಥ ರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ ಮಾತೆಯನ್ನು ಭಕ್ತರು ಕಣ್ತುಂಬಿಕೊಂಡು ಭಕ್ತಿ ಭಾವ ಮೆರೆದು ಪುನೀತರಾದರು. ಕಾವೇರಿ ತೀರ್ಥವನ್ನು ಪಡೆದು ತಮ್ಮ ಮನೆಗಳಿಗೂ ಕೊಂಡೊಯ್ದರು.

Follow Us:
Download App:
  • android
  • ios