ಬೀದರ್: ಡಿಸಿ ಗ್ರಾಮ ವಾಸ್ತವ್ಯ ಯೋಜನೆ ಸದುಪಯೋಗವಾಗಲಿ, ಈಶ್ವರ ಖಂಡ್ರೆ
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ
ಬೀದರ್(ನ.20): ಅಧಿಕಾರಿಗಳು ಒಂದು ಕಡೆ ಸೇರಿ ಜನರ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ನೀಡುವುದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಪರಿಕಲ್ಪನೆ. ಆದ್ದರಿಂದ ಇದರ ಸದುಪಯೋಗವಾಗಲಿ ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ತಿಳಿಸಿದರು.
ಶನಿವಾರ ಜಿಲ್ಲೆಯ ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ಜನರಿಗೂ ತಲುಪಬೇಕೆಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಜನರ ಅನೇಕ ಸಮಸ್ಯೆಗಳಾದ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅಂಗವಿಕಲರ ಮಾಶಾಸನ, ವಿಧವಾ ವೇತನ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಪರಿಹಾರ ನೀಡಬೇಕೆಂದ ಅವರು ಭಾಲ್ಕಿ ತಾಲೂಕಿನಲ್ಲಿ ಜಲ ಜೀವನ ಮಿಷನ್ ಅಡಿಯಲ್ಲಿ ಎಲ್ಲಾ ಗ್ರಾಮಗಳಿಗೆ ಸ್ವಚ್ಛ ಕುಡಿಯುವ ನೀರು ಒದಗಿಸಲಾಗುವುದು ಎಂದು ಹೇಳಿದರು.
ಮನೆ ಕಸಿದ ಬಿಜೆಪಿಗರು: ಮತ ಕೇಳಲು ಬಂದ್ರೆ ಬಿಡದೇ ಪ್ರಶ್ನಿಸಿ: ಈಶ್ವರ ಖಂಡ್ರೆ
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಪ್ರತಿ ತಿಂಗಳ ಮೂರನೇ ಶನಿವಾರ ಡಿಸಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಇದರಿಂದ ಜನರ ಸಮಸ್ಯೆಗಳನ್ನು ಅರಿಯುವದರ ಜೊತೆಗೆ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ತಿಳಿಯಲು ಸಹಕಾರಿಯಾಗುತ್ತದೆ ಇದು 8ನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮವಾಗಿದ್ದು, ಲಂಜವಾಡ ಗ್ರಾಮಸ್ಥರು ತೋರಿಸಿದ ಪ್ರೀತಿ ಮತ್ತು ಕಾಳಜಿಗಾಗಿ ತಮಗೆ ಅಭಿನಂದನೆಗಳು ಹಾಗೂ ತಮ್ಮ ಗ್ರಾಮದ ಯಾವುದೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರಬೇಕೆಂದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರಿಂದ ಬಂದ ಅಹವಾಲುಗಳಿಗೆ ಸಂಬಂಧಿಸಿದ ಅಧಿಕಾರಿಗಳು ಅವುಗಳಿಗೆ ಇಂದೇ ಪರಿಹಾರ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ನಂತರ ವಿವಿಧ ಯೋಜನೆಗಳ ಹಕ್ಕು ಪತ್ರಗಳನು ಫಲಾನುಭವಿಗಳಿಗೆ ವಿತರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಲಂಜವಾಡ ಗ್ರಾಮಸ್ಥರು ಮೆರವಣಿಗೆ ಮೂಲಕ ಗ್ರಾಮಕ್ಕೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಶಿಲ್ಪಾ ಎಂ., ಸಹಾಯಕ ಆಯುಕ್ತರಾದ ರಮೇಶ ಕೋಲಾರ, ಭಾಲ್ಕಿ ತಹಸೀಲ್ದಾರ್ ಕೀರ್ತಿ ಚಾಲಕ್, ಗ್ರಾಪಂ ಅಧ್ಯಕ್ಷ ಸೂರ್ಯಕಾಂತ ಸೂರ್ಯವಂಶಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಲಂಜವಾಡ ಗ್ರಾಮಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.