ಮನೆ ಕಸಿದ ಬಿಜೆಪಿಗರು: ಮತ ಕೇಳಲು ಬಂದ್ರೆ ಬಿಡದೇ ಪ್ರಶ್ನಿಸಿ: ಈಶ್ವರ ಖಂಡ್ರೆ
- ಮನೆ ಕಸಿದ ಬಿಜೆಪಿಗರು: ಮತ ಕೇಳಲು ಬಂದ್ರೆ ಬಿಡದೇ ಪ್ರಶ್ನಿಸಿ
- ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸಿಡಿದೆದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ
ಭಾಲ್ಕಿ (ನ.17) : ಈ ಬಿಜೆಪಿ ಸರ್ಕಾರ ಮುಂಬರುವ ಚುನಾವಣೆ ಒಳಗಾಗಿ ವಸತಿ ಯೋಜನೆಯ ಫಲಾನುಭವಿಗಳಿಗೆ ಬಾಕಿ ಕಂತಿನ ಹಣ ಬಿಡುಗಡೆ ಮಾಡದೇ ಇದ್ದಲ್ಲಿ, ಕಚೇರಿಗೆ ಮುತ್ತಿಗೆ ಹಾಕುವದಷ್ಟೇ ಅಲ್ಲ ಮತ ಕೇಳಲು ಬರುವ ಪ್ರತಿಯೊಬ್ಬ ಬಿಜೆಪಿಗರನ್ನು ಬಿಡದೇ ಪ್ರಶ್ನಿಸಿ ಎಂದು ಕರೆ ನೀಡಿದರು.
ಶುಕ್ರವಾರ ಭಾಲ್ಕಿ ಪಟ್ಟಣದಲ್ಲಿ ವಸತಿ ಇಲಾಖೆಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಮಂಜೂರಾದ ಮನೆಗಳ ಅನುದಾನದ ಬಾಕಿ ಕಂತು ಬಿಡುಗಡೆಗೆ ಬ್ರೇಕ್ ಹಾಕಿರುವ ಸರ್ಕಾರದ ಕ್ರಮ ಖಂಡಿಸಿ ಆಕ್ರೋಷ ವ್ಯಕ್ತಪಡಿಸಿ, ಸಾವಿರಾರು ಸಂಖ್ಯೆಯಲ್ಲಿ ಫಲಾನುಭವಿ ಪ್ರತಿಭಟನಾಕಾರರೊಂದಿಗೆ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಅಪರ ಜಿಲ್ಲಾಧಿಕಾರಿಗಳಿಗೆ ಫಲಾನುಭವಿಗಳಿಂದಲೇ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಾರ್ಖಾನೆಗಳಿಗೆ ಭಾರಿ ಸಾಲ: ಡಿಸಿಸಿ ದಿವಾಳಿ ಅಂಚಲ್ಲಿ, ಆತಂಕ
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಬಡ, ನಿರ್ಗತಿಕರಿಗೆ ಮಂಜೂರು ಮಾಡಲಾದ ಮನೆಗಳ ನಿರ್ಮಾಣಕ್ಕೆ ಬಿಡುಗಡೆ ಮಾಡಬೇಕಾದ ಹಣ ಬಿಜೆಪಿ ಸರ್ಕಾರದ ಕಪಟ ನೀತಿಯಿಂದ, ರಾಜಕೀಯ ದುರುದ್ದೇಶದಿಂದ ನಿಂತು ಹೋಗಿದೆ. ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ದಪ್ಪ ಚರ್ಮದ ಅವರಿಗೆ ಅರಿವೇ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜೀವ್ ಗಾಂಧಿ ವಸತಿ ನಿಗಮದಿಂದ ಡಾ. ಅಂಬೇಡ್ಕರ್ ವಸತಿ ಯೋಜನೆ ಹೀಗೆಯೇ ವಿವಿಧ ಯೋಜನೆಗಳಡಿ ಸುಮಾರು 26 ಸಾವಿರ ಮನೆಗಳನ್ನು ನಮ್ಮ ಅಧಿಕಾರವಧಿಯಲ್ಲಿ ಮಂಜೂರಿಸಿ 14 ಸಾವಿರ ಮನೆಗಳಿಗೆ ಹಣ ಬಿಡುಗಡೆ ಮಾಡಿದರೆ, ಇನ್ನುಳಿದ 12 ಸಾವಿರ ಮನೆಗಳಿಗೆ ಈ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಡೆಯೊಡ್ಡಲಾಗಿದೆ ಎಂದು ದೂರಿದರು.
ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಡಿ.ಕೆ ಸಿದ್ರಾಮ್ ಅವರು ವಸತಿ ಸಚಿವ ಸೋಮಣ್ಣ ಅವರನ್ನು ಹಿಡಿದುಕೊಂಡು ಭ್ರಷ್ಟಅಧಿಕಾರಿಯನ್ನು ತನಿಖೆಗೆ ನೇಮಕ ಮಾಡಿ 7 ಸಾವಿರ ಜನರ ಮನೆಗಳು ಅಕ್ರಮ, ಇವರೆಲ್ಲ ಸಿರಿವಂತರು ಎಂದು ಘೋಷಿಸಿ ಕಂತು ಬಿಡುಗಡೆಗೆ ಅಡ್ಡಗಾಲು ಹಾಕಿದರು. ಬಡವರ ಸೂರು ಕಸಿದುಕೊಳ್ಳಲು ಯತ್ನಿಸಿದ ಇವರಿಬ್ಬರೂ ರಾಜಕೀಯದಲ್ಲಿ ಇರಲು ಲಾಯಕ್ಕಿಲ್ಲ ಎಂದರು. ಬಿಜೆಪಿಗರಲ್ಲಿ ರಾಜಕೀಯ ದುರುದ್ದೇಶ ತುಂಬಿ ತುಳುಕುತ್ತಿದೆ. ಇವರಿಗೆ ಮನುಷ್ಯರ ಇಂಜಕ್ಷನ್ ಅಲ್ಲ ದನದ ಇಂಜಕ್ಷನ್ ಕೊಡುವಷ್ಟುಚರ್ಮ ದಪ್ಪ ಆಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮಂಜೂರಾತಿ ಪತ್ರದ ಜೊತೆ ನಾನು ಭ್ರಷ್ಟರಿಂದ ಎಚ್ಚರದಿಂದಿರಿ ಎಂದು ನನ್ನ ಪತ್ರ ನೀಡಿದ್ದೆ. ಒಂದು ವೇಳೆ ಬೋಗಸ್ ಇದ್ರೆ ಒಂದು ಕಂತು ಹೇಗೆ ಹಣ ಬಿಡುಗಡೆ ಮಾಡಿತು ತಿಳಿಸಲಿ. ಅಷ್ಟಕ್ಕೂ ಆಗ ಖೂಬಾ ಏನು ಗೆಣಸು ತಿನ್ನುತ್ತಿದ್ದರಾ ಎಂದು ಖಾರವಾಗಿ ಪ್ರಶ್ನಿಸಿದ ಖಂಡ್ರೆ ನನ್ನ ಮೇಲೆ ಆರೋಪ ಮಾಡುವ ಬಿಜೆಪಿಗರು ಒಂದೇ ಒಂದು ಬೋಗಸ್ ಮನೆ ಆದೇಶ ಪತ್ರ ಕೊಟ್ಟಿದ್ದನ್ನು ಸಾಬೀತುಪಡಿಸಲಿ ನಾನು ರಾಜಕೀಯ ಬಿಡುತ್ತೇನೆ ಎಂದು ಸವಾಲೊಡ್ಡಿದರು. ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮೊದಲ ಸಂಪುಟದಲ್ಲೇ ಕಂತು ಬಿಡುಗಡೆ ಆದೇಶ:
ಕಂತು ಬಿಡುಗಡೆ ಮಾಡುವವರೆಗೆ ಈ ಹೋರಾಟ ನಿಲ್ಲಿಸುವುದಿಲ್ಲ. ನಿಮ್ಮ ಕಂತು ಬಿಡುಗಡೆ ಮಾಡಿಯೇ ಮಾಡಿಸುತ್ತೇನೆ. ವಸತಿ ರಹಿತರಿಗೆ ಪಕ್ಕಾ ಮನೆ ಕೊಡಿಸುವದು ನನ್ನ ಗುರಿ. ಇವರು ಕೊಡದಿದ್ದಲ್ಲಿ ನಮ್ಮ ಸರ್ಕಾರ ಬಂದ ಮೇಲೆ ಮೊದಲ ಸಚಿವ ಸಂಪುಟದಲ್ಲಿಯೇ ಕಂತು ಬಿಡುಗಡೆ ಆದೇಶ ಮಾಡಿಸುವ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಸತಿ ಕಂತು ಬಾಕಿ ಇರುವ ವಸತಿ ಫಲಾನುಭವಿಗಳಿಂದ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹಾಗೂ ತಹಸೀಲ್ದಾರ್ ಕೀರ್ತಿ ಚಾಲಕ್ ಅವರಿಗೆ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಸಲ್ಲಿಸಲಾಯಿತು.
ಮೈಷುಗರ್‌ನಂತೆಯೇ ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಮುಂದಾಗಿ: ಈಶ್ವರ ಖಂಡ್ರೆ
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಡಿ. ಶ್ರೀಧರ್ ಬಾಬು, ಶಾಸಕರಾದ ರಹೀಮ್ ಖಾನ್, ಭೀಮರಾವ್ ಪಾಟೀಲ್, ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ…, ಅಶೋಕ ಖೇಣಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ಮೋದಿ, ಆನಂದ ದೇವಪ್ಪ, ಮೀನಾಕ್ಷಿ ಸಂಗ್ರಾಮ, ಗೀತಾ ಚಿದ್ರಿ, ಅಮೃತರಾವ್ ಚಿಮಕೋಡೆ, ಪುರಸಭೆ ಅಧ್ಯಕ್ಷ ಅನೀಲ್ ಸುಂಟೆ, ಉಪಾಧ್ಯಕ್ಷ ಅಶೋಕ್ ಗಾಯಕವಾಡ್ ಇದ್ದರು