ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ: ಸಚಿವ ಪರಮೇಶ್ವರ
ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಹೊಂದಿ ಉನ್ನತ ಅಧಿಕಾರಿಗಳಾಗಿ ಈ ರಾಷ್ಟ್ರದ ಸೇವೆ ಮಾಡುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಕರೆ ನೀಡಿದರು.
ತುಮಕೂರು : ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಹೊಂದಿ ಉನ್ನತ ಅಧಿಕಾರಿಗಳಾಗಿ ಈ ರಾಷ್ಟ್ರದ ಸೇವೆ ಮಾಡುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಕರೆ ನೀಡಿದರು.
ಜಿಲ್ಲಾಡಳಿತ, ಜಿ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಗೆದ್ದಲಹಳ್ಳಿ ಬಳಿಯ ಬಾಲಕಿಯರ ವಸತಿ ನಿಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಯೋಜನೆ ರೂಪಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಆರಂಭಿಸಿದೆ. ವಿದ್ಯಾರ್ಥಿಗಳಿಗೆ ತಂದೆ-ತಾಯಿಯರು ಪಡುವ ಕಷ್ಟದ ಅರಿವು ಇರಬೇಕು. ದೀಪದ ಬೆಳಕಿನಲ್ಲಿ ಓದಿದ ಸರ್ ಎಂ.ವಿಶ್ವೇಶ್ವರಯ್ಯ ಜಗತ್ತಿನ ಗಮನ ಸೆಳೆದರು. ಸಮಾಜದಲ್ಲಿನ ಶೋಷಿತರು ಸಮಾನರಂತೆ ಬದುಕಲು ಅವರ ಸಬಲೀಕರಣಕ್ಕಾಗಿ ಅಂಬೇಡ್ಕರ್ ಸಾಕಷ್ಟು ಶ್ರಮಿಸಿದ್ದಾರೆ. ಕಾನೂನುಗಳ ಮೂಲಕ ಮಹಿಳಾ ಸಬಲೀಕರಣವಾಗುತ್ತಿದೆ. ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರು ಪಂ.ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗಾಗಿ ಮೀಸಲಾತಿ ತಂದರು.ಈ ಮೂಲಕ ಸಾಮಾನ್ಯ ಒಬ್ಬ ಮಹಿಳೆಯೂ ಕೂಡ ಪಂಚಾಯತಿ ಅಧ್ಯಕ್ಷರಾಗಿ ಅಧಿಕಾರ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಗಮನಿಸಿ ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ವಿವಿಧ ಸವಲತ್ತು ವಿತರಣೆ ಮಾಡುತ್ತಿರುವುದು ರಾಜ್ಯದಲ್ಲಿಯೇ ವಿಶೇಷ ಕಾರ್ಯ ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಕೆಡಿಪಿ ಸಭೆಯಲ್ಲಿ ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯ ಕೊರತೆ. ಜಿಲ್ಲೆಯ 100 ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 12 ಸಾವಿರ ವಿದ್ಯಾರ್ಥಿಗಳಲ್ಲಿ ಕೊರತೆಯಾಗಿದ್ದ 4 ಸಾವಿರ ಹಾಸಿಗೆ ಹಾಗೂ 3 ಸಾವಿರ ವಿದ್ಯಾರ್ಥಿಗಳು ಉಪಯೋಗಿಸುವ ಎರಡು ಅಂತಸ್ತಿನ 1500 ಮಂಚಗಳು, ಹೊದಿಕೆ, ಸಿಸಿ ಟಿವಿ ವ್ಯವಸ್ಥೆ, ಕುಡಿವ ನೀರಿನ ಘಟಕ, ಅಗತ್ಯ ಮೂಲಭೂತ ಸೌಕರ್ಯ ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿಗಳು ಒದಗಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಆರ್. ಗಂಗಪ್ಪ, ರವಿಕುಮಾರ್, ನಿರ್ಮಿತಿ ಕೇಂದ್ರದ ರಾಜಶೇಖರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜ್, ತಹಶೀಲ್ದಾರ್ ಸಿದ್ದೇಶ್, ನಿಲಯ ಪಾಲಕಿ ತನುಜ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.