ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿ, ಅತ್ಯಾ೧ಚಾರ ಹಾಗೂ ಜೀವ ಬೆದರಿಕೆ ಹಾಕಿದ ನಟ ದರ್ಶನ್‌ ಅಭಿಮಾನಿಗಳ ವಿರುದ್ಧ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ನಟಿ ರಮ್ಯಾ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ದಾಖಲಿಸಿದ್ದಾರೆ. ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕುವವರಿಗೆ ಭಯ ಬರಬೇಕು ಹೀಗಾಗಿ ಈ ಕೇಸ್ ಎಂದಿದ್ದಾರೆ.

ಜಾಲತಾಣದಲ್ಲಿ ನಟಿಗೆ ಅಶ್ಲೀಲ ಸಂದೇಶ ಕಳಿಸಿದ ಕೇಸ್‌

ಬೆಂಗಳೂರು (ಮಾ.11): ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿ, ಅತ್ಯಾ೧ಚಾರ ಹಾಗೂ ಜೀವ ಬೆದರಿಕೆ ಹಾಕಿದ ನಟ ದರ್ಶನ್‌ ಅಭಿಮಾನಿಗಳ ವಿರುದ್ಧ ದಾಖಲಿಸಿದ್ದ ದೂರು ಸಂಬಂಧ ನಟಿ ರಮ್ಯಾ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ದಾಖಲಿಸಿದರು.

Add Asianetnews Kannada as a Preferred SourcegooglePreferred

ಪ್ರಕರಣ ಸಂಬಂಧ ರಮ್ಯಾ ದಾಖಲಿಸಿರುವ ಪ್ರಕರಣದ ವಿಚಾರಣೆ ಮಂಗಳವಾರದಿಂದ ನಗರದ 46ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟಲ್ಲಿ ಆರಂಭಗೊಂಡಿತು. ನ್ಯಾಯಾಧೀಶ ರಾಜೀವ್ ಗೌಡ ಅವರು ವಿಚಾರಣೆ ನಡೆಸಿದರು. ರಮ್ಯಾ ಹಾಗೂ ಪ್ರಕರಣದ 12 ಆರೋಪಿಗಳು ಸಹ ಮಂಗಳವಾರ ಕೋರ್ಟ್‌ಗೆ ಹಾಜರಾಗಿದ್ದರು.

ಪ್ರಕರಣದಲ್ಲಿ ಆರೋಪಿಗಳಿಂದ ಅತ್ಯಾ೧ಚಾರ ಮತ್ತು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಇನ್‌-ಕ್ಯಾಮಾರಾ ಪ್ರೊಸೀಡಿಂಗ್ಸ್‌ (ಗೌಪ್ಯ ವಿಚಾರಣೆ) ನಡೆಸಲು ನ್ಯಾಯಾಧೀಶರು ನಿರ್ಧರಿಸಿದರು. ಅದರಂತೆ ರಮ್ಯಾ, ಆರೋಪಿಗಳು ಮತ್ತವರಿಗೆ ಸಂಬಂಧಿಸಿದ ವಕೀಲರನ್ನು ಹೊರತುಪಡಿಸಿ ಉಳಿದವರನ್ನು ಕೋರ್ಟ್‌ನಿಂದ ಹೊರ ಕಳುಹಿಸಿ, ರಮ್ಯಾ ಅವರ ಸಾಕ್ಷ್ಯ ದಾಖಲಿಸಿಕೊಂಡರು. ಬಳಿಕ ವಿಚಾರಣೆಯನ್ನು ಮಾ.26ಕ್ಕೆ ಮುಂದೂಡಿದರು.

ಸುಮ್ಮನೆ ಬಿಟ್ಟರೆ ಚಾಳಿ ಮುಂದುವರಿಕೆ: ರಮ್ಯಾ

ವಿಚಾರಣೆ ನಂತರ ಕೋರ್ಟ್‌ ಹೊರಗಡೆ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, ಇಂದು ನನ್ನ ಸಾಕ್ಷ್ಯ ದಾಖಲಿಸಬೇಕಿತ್ತು. ಅದಕ್ಕಾಗಿ ಕೋರ್ಟ್‌ಗೆ ಹಾಜರಾಗಿದ್ದೆ. ಸಾಕ್ಷ್ಯ ದಾಖಲಿಸಿದೆ. ಆರೋಪಿಗಳನ್ನು ನೋಡಿದರೆ, ಬೇಸರ ಆಗುತ್ತದೆ. ಹೆಣ್ಣುಮಕ್ಕಳ ವಿಚಾರದಲ್ಲಿ ಎಲ್ಲರೂ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು. ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕುವವರಿಗೆ ಭಯ ಬರಬೇಕು ಎಂಬ ಕಾರಣಕ್ಕೆ ದೂರು ದಾಖಲಿಸಿದೆ. ಇಂಥ ವಿಚಾರ ಸುಮ್ಮನೆ ಬಿಟ್ಟರೆ ಮುಂದೆ ಜನ ಅದೇ ಚಾಳಿ ಮುಂದುವರಿಸುತ್ತಾರೆ. ಇಂಥ ಬೆಳವಣಿಗೆ ತಡೆಯಲು ಎಲ್ಲ ಹೆಣ್ಣುಮಕ್ಕಳ ಪರ ಕೇಸ್‌ ಮುಂದುವರಿಸುತ್ತೇನೆ ಎಂದರು

ತಮಗೆ ಅಶ್ಲೀಲ ಸಂದೇಶ ಕಳುಹಿಸಿದ ಮತ್ತು ಬೆದರಿಕೆ ಹಾಕಿದ ಆರೋಪ ಸಂಬಂಧ ಸೈಬರ್‌ ಠಾಣಾ ಪೊಲೀಸರಿಗೆ ರಮ್ಯಾ 2025ರಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಬೆಂಗಳೂರಿನ ಸೈಬರ್ ಪೊಲೀಸರು 11 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.