Asianet Suvarna News Asianet Suvarna News

ಪರ ಬಂದರೆ ವಿಜಯೋತ್ಸವ, ವಿರುದ್ಧ ಎಂದರೆ ಹೋರಾಟ!

ಮಹದಾಯಿಗಾಗಿ ಮಹಾವೇದಿಕೆಯು ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಲ್ಕು ಜಿಲ್ಲೆ ಒಂಭತ್ತು ತಾಲೂಕಿನ ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರು, ಕನ್ನಡಪರ, ರೈತಪರ, ದಲಿತಪರ,ಕಾರ್ಮಿಕಪರ ಸಭೆಯಲ್ಲಿ ಮಹದಾಯಿ-ಮುಂದಿನ ನಡೆ ಕುರಿತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 

Mahadayi Crisis : Protester Decide after verdict
Author
Bengaluru, First Published Aug 11, 2018, 5:31 PM IST

ಧಾರವಾಡ[ಆ.11]: ಸುದೀರ್ಘ ಹೋರಾಟದ ಫಲವಾಗಿ ಮಹದಾಯಿ ನದಿ ತಿರುವಿನ ಕುರಿತು ನ್ಯಾಯಾಧಿಕರಣ ಆ. 20ರಂದು ತೀರ್ಪು ನೀಡುತ್ತಿರುವ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರ ಪರವಾಗಿ ತೀರ್ಪು ಬಂದರೆ ವಿಜಯೋತ್ಸವ,ವಿರುದ್ಧವಾಗಿ ಬಂದರೆ ಹೋರಾಟ ನಡೆಸಲು ಹೋರಾಟಗಾರರು ತೀರ್ಮಾನಿಸಿದ್ದಾರೆ.

ಮಹದಾಯಿಗಾಗಿ ಮಹಾವೇದಿಕೆಯು ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಲ್ಕು ಜಿಲ್ಲೆ ಒಂಭತ್ತು ತಾಲೂಕಿನ ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರು, ಕನ್ನಡಪರ, ರೈತಪರ, ದಲಿತಪರ,ಕಾರ್ಮಿಕಪರ ಸಭೆಯಲ್ಲಿ ಮಹದಾಯಿ-ಮುಂದಿನ ನಡೆ ಕುರಿತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 

ತೀರ್ಪು ಪರ ಬಂದರೆ ಆಯಾ ತಾಲೂಕುಗಳಲ್ಲಿಯೇ ವಿಜಯೋತ್ಸವ ಮಾಡುವುದು ಹಾಗೂ ವಿರೋಧ ಬಂದರೆ ಕಾನೂನು ರೀತಿಯಲ್ಲಿ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಚಿಂತನೆ ಜೊತೆಗೆ ಶಾಂತಿಯುತ ಹೋರಾಟ ಮಾಡ ಬೇಕೆಂಬ ಸಲಹೆಯನ್ನು ರೈತ ಸೇನಾ ಕರ್ನಾಟಕ ಸಂಘಟನೆಯ ಶಂಕರ ಅಂಬಲಿ ನೀಡಿದರು. ರಾಜ್ಯದ ಪರವಾಗಿಯೇ ತೀರ್ಪು ಬರುವ ನಿರೀಕ್ಷೆ ಜಾಸ್ತಿ ಇದೆ. ಮಹದಾಯಿಗೆ ಸೇರುವ ನೀರನ್ನು ಹೇಗೆ ಸದ್ಭಳಕೆ ಮಾಡಬೇಕು
ಎಂಬುದನ್ನು ಈಗಿನಿಂದಲೇ ಚಿಂತನೆ ಮಾಡಬೇಕು.

ಜೊತೆಗೆ ವಿರುದ್ಧ ತೀರ್ಪು ಬಂದಾಗ ರಾಜ್ಯ ಸರ್ಕಾರ ಯಾವ ಕಾನೂನು ಸಲಹೆ ಪಡೆಯಬೇಕು ಎಂಬುದನ್ನೂ ಈಗಲೇ ಚರ್ಚೆ ಮಾಡಬೇಕು. ಈ ಕುರಿತು ಶೀಘ್ರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದ ಅಂಬಲಿ ಅವರು, ಮಹದಾಯಿ ವಿಷಯವಾಗಿ ಇನ್ಮುಂದೆ ಕೇಂದ್ರ, ರಾಜ್ಯ ಸರ್ಕಾರಗಳನ್ನು ದೂರುವ ಬದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮದೇ ರೀತಿಯಾದ ಹೋರಾಟ ಮಾಡುವ ಮೂಲಕ ಆದಷ್ಟು ಬೇಗ ನೀರು ಪಡೆಯುವತ್ತ ಹೋರಾಟಗಾರರು ಚಿಂತನೆ ಮಾಡಬೇಕು. ಸುಖಾಸುಮ್ಮನೆ ಗದ್ದಲ, ಗೊಂದಲಗಳಿಂದ ಹೋರಾಟಗಾರರಿಗೆ ತೊಂದರೆ ಆಗುವ ಸಾಧ್ಯತೆಗಳಿವೆ ಎಂಬ ಎಚ್ಚರಿಕೆ
ಯನ್ನು ಅಂಬಲಿ ನೀಡಿದರು.

ಮಹದಾಯಿ ಕೊಳ್ಳ:
ನಾಲ್ಕು ದಶಕಗಳ ಕಾಲ ನಡೆದ ಹೋರಾಟದ ಹಾದಿಯನ್ನು ನರಗುಂದ ತಾಲೂಕಿನ ಯಾವಗಲ್ ಗ್ರಾಮದ ರಂಗಪ್ಪ ದಾಸರ ಎಂಬುವರು ಕವಿವಿ
ಯ ಎಸ್.ಎಸ್. ಶೆಟ್ಟರ್ ಮಾರ್ಗದರ್ಶನದಲ್ಲಿ ಮಹ ದಾಯಿ ಕೊಳ್ಳ ಮಹಾಪ್ರಬಂಧ ರಚಿಸಿದ್ದಾರೆ. ಮಹದಾಯಿ ಇದೀಗ ಸಾಹಿತ್ಯ ರೂಪದಲ್ಲಿ ಬರುತ್ತಿದೆ. ಇದೇ ರೀತಿ ಕಲಬುರ್ಗಿ ವಿವಿಯಲ್ಲಿ ಒಬ್ಬ ವಿದ್ಯಾರ್ಥಿ ಅಧ್ಯಯನ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಅಂಬಲಿ ಸಭೆಗೆ ನೀಡಿದರು.

ಹೋರಾಟಗಾರ ನರಗುಂದದ ಬಸವರಾಜ ಸಾಬಳೆ ಮಾತನಾಡಿ, ತೀರ್ಪು ನಮ್ಮ ಉರ ಬಂದಾಗ ಆಯಾ ಕ್ಷೇತ್ರ ದಲ್ಲಿ ವಿಜಯೋತ್ಸವದ ಜೊತೆಗೆ ನಂತರದಲ್ಲಿ ನರಗುಂದ ದಲ್ಲಿ ಬೃಹತ್ ಪ್ರಮಾಣದ ವಿಜಯೋತ್ಸವ ಆಚರಿಸೋಣ. ತೀರ್ಪು ವಿರುದ್ಧವಾಗಿದ್ದರೆ ಒಂಭತ್ತು ತಾಲೂಕು ರೈತರು,ಹೋರಾಟಗಾರರು ಜೈಲ ಭರೋ ಹೋರಾಟ ಮಾಡೋಣ ಎಂಬ ಸಲಹೆಗಳನ್ನು ನೀಡಿದರು.

ಹೋರಾಟಗಾರ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಇಷ್ಟು ವರ್ಷ ಬರೀ ಹೋರಾಟ ಮಾಡಲಾಗಿದ್ದು, ಇನ್ಮುಂದೆ ಜಾಣತನದ ನಡೆ ಇಡುವ ಮೂಲಕ ನೀರನ್ನು
ವ್ಯವಸ್ಥಿತವಾಗಿ ಪಡೆಯುವತ್ತ ಯೋಚಿಸಬೇಕು. ಪ್ರತಿಯಾಗಿ ಸರ್ಕಾರ ಏನು ಮಾಡಬೇಕು ಎಂಬುದನ್ನು ತಿಳಿಸುವ ಮೂಲಕ ಶಾಶ್ವತ ಕುಡಿಯುವ ಹಾಗೂ ಹೊಲಗಳಿಗೆ ನೀರು ಪಡೆಯಲು ಮಾಡಬೇಕಾದ ಕಾರ್ಯಯೋಜನೆಗಳನ್ನು ಹಾಕಬೇಕಿದೆ. ನಮ್ಮಲ್ಲಿ ಹಲವು ಸಂಘಟನೆಗಳಿದ್ದರೂ ಒಗ್ಗಟ್ಟಾಗಿ ಹೆಜ್ಜೆ ಇಡಬೇಕು. ಜನಪ್ರತಿನಿಧಿಗಳು ನಮ್ಮ ಸೇವೆಗಾಗಿಯೇ ಇದ್ದಾರೆ ಎಂಬುದನ್ನು ಅರಿಯಬೇಕು. ಅಂದಾಗ ಅಭಿವೃದ್ಧಿ ಸಾಧ್ಯ. ತೀರ್ಪು ಪರವಾಗಿ ಬಂದಾಗ ರಾಜ್ಯ ಸರ್ಕಾರ ಕೂಡಲೇ ತಜ್ಞರ ಸಭೆ ನಡೆಸಿ ಯೋಜನೆ ಯಶಸ್ವಿಯಾಗಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಒತ್ತಡ ಹೇರಬೇಕು ಎಂದರು.

ಹೋರಾಟಗಾರರು ತಂಡ-ತಂಡವಾಗಿ ಹೋರಾಟ ಮಾಡದೇ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಒಳಿತು. ಭಾರತೀಯರನ್ನು ಬ್ರಿಟಿಷರು ಒಡೆದು ಆಳಿದ ಹಿನ್ನೆಲೆ ಯಲ್ಲಿ ಸ್ವಾತಂತ್ರ ಸಿಗುವುದು ವಿಳಂಬವಾದಂತೆ ಮಹದಾಯಿಯೂ ವಿಳಂಬವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಭಿಕರಾದ ಶಿವಲಿಂಗಪ್ಪ ಗೋಪಾಲಪುರ ಅಭಿಪ್ರಾಯ ಹಂಚಿಕೊಂಡರು. ಇದೇ ರೀತಿ ರಾಮದುರ್ಗದ ಶಂಕರಗೌಡ ಪಾಟೀಲ ಅವರು, ಮಹದಾಯಿ ನೀರಿಗಾಗಿ ಹೋರಾಟ ಅಂತ್ಯ ಆಗುವಂತೆ ತೀರ್ಪು ನೀಡಬೇಕು. ಹೋರಾಟದಲ್ಲಿ ಸಾಕಷ್ಟು ಜನ ಪೆಟ್ಟು ತಿಂದಿದ್ದಾರೆ. ಸಾವೂ ಆಗಿವೆ. ಆದ್ದರಿಂದ ಹೋರಾಟದ ಮೂಲಕ ಪಡೆದ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈಗಾಗಲೇ ಸರ್ಕಾರ ದಿಂದ ಹನಿ ನೀರಾವರಿ ಯೋಜನೆ ಇದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.

1970ರಿಂದಲೂ ಮಹದಾಯಿಗೆ ಹೋರಾಟ ನಡೆಯುತ್ತಿದೆ. ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಸೇರಿದಂತೆ ಎಲ್ಲ ಮುಖ್ಯಮಂತ್ರಿಗಳು ಬರೀ ಭರವಸೆ ಮಾತ್ರ ನೀಡುತ್ತಿದ್ದಾರೆ. ಇದು ರೈತ ಸಮುದಾಯಕ್ಕೆ ಮಾಡಿದ ಅನ್ಯಾಯ. ಶೇ. 90ರಷ್ಟು ಶಾಸಕರು ರೈತರೇ ಆಗಿದ್ದರೂ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ. ಇದೀಗ ಮಹದಾಯಿ ಕುರಿತು ತೀರ್ಪು ಬರಲಿದ್ದು ಇದೇ ಅಂತಿಮವಲ್ಲ. ನೀರು ಪಡೆಯುವಲ್ಲಿ
ಹೋರಾಟ ನಿರಂತರವಾಗಿರಬೇಕು ಎಂದು ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ ಅಭಿಪ್ರಾಯಿಸಿದರು.

ಸಭೆಯಲ್ಲಿ ಉತ್ತರ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ, ಕನಸೇ ಅಧ್ಯಕ್ಷ ಗಿರೀಶಪೂಜಾರ, ಮಹಾದೇವಿ ಪಾಳಾರಶೆಟ್ಟರ್, ಜಯಕರ್ನಾಟಕದ
ಮುತ್ತು ಬೆಳ್ಳಕ್ಕಿ, ಮೊಹಮ್ಮದ ಸಂಗನಮುಲ್ಲಾ ಮತ್ತಿತರರು ಇದ್ದರು.

Follow Us:
Download App:
  • android
  • ios