ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಮಡಿಕೇರಿಯ ರಾಜಾಸೀಟಿಗೆ ಹೊಂದಿಕೊಂಡಂತೆ ಇರುವ ಗ್ರೇಟರ್ ರಾಜಾಸೀಟಿನಲ್ಲಿ ನಡೆದಿರುವ ಅವ್ಯವಹಾರ ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿದೆ. ಹೌದು ಮಡಿಕೇರಿಯ..
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.07): ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಮಡಿಕೇರಿಯ ರಾಜಾಸೀಟಿಗೆ ಹೊಂದಿಕೊಂಡಂತೆ ಇರುವ ಗ್ರೇಟರ್ ರಾಜಾಸೀಟಿನಲ್ಲಿ ನಡೆದಿರುವ ಅವ್ಯವಹಾರ ಲೋಕಾಯುಕ್ತ ತನಿಖೆಯಲ್ಲಿ ಸಾಬೀತಾಗಿದೆ. ಹೌದು ಮಡಿಕೇರಿಯ ರಾಜಾಸೀಟಿನ ಮತ್ತೊಂದು ಭಾಗವಾಗಿರುವ ಗ್ರೇಟರ್ ರಾಜಾಸೀಟಿನಲ್ಲಿ 4.5 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ನಡೆಸಿದ ಕಾಮಗಾರಿಯಲ್ಲಿ ಹಣ ದುರುಪಯೋಗ ಆಗಿರುವುದನ್ನು ಉಲ್ಲೇಖಿಸಲಾಗಿದೆ. 2019 ರಲ್ಲಿ ಲೋಕೋಪಯೋಗಿ ಇಲಾಖೆ ಮಡಿಕೇರಿ ಉಪವಿಭಾಗ ಕಚೇರಿಯಿಂದ ಕಾಮಗಾರಿ ಮಾಡಲಾಗಿತ್ತು.
ಆದರೆ ಸಾಕಷ್ಟು ಕಾಮಗಾರಿಗಳನ್ನು ಮಾಡದೆ ಅಪೂರ್ಣ ಕಾಮಗಾರಿಯಾಗಿದ್ದರೂ 2023 ಮಾರ್ಚ್ 18 ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಗ್ರೇಟರ್ ಉದ್ಯಾನವನವನ್ನು ಉದ್ಘಾಟಿಸಲಾಗಿತ್ತು. ಬಳಿಕ ಇದರ ವಿರುದ್ಧ ತನ್ನೀರಾ ಮೈನಾ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ತನಿಖೆ ಮಾಡಿದ್ದು ಕಾಮಗಾರಿ ವೇಳೆ ಹಣ ದುರುಪಯೋಗ, ಅಪೂರ್ಣ ಕಾಮಗಾರಿ ಆಗಿರುವುದು ಪತ್ತೆಯಾಗಿದೆ. ಇದೀಗ ಲೋಕಾಯುಕ್ತ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಹೀಗಾಗಿ ಸರ್ಕಾರ ಅವ್ಯವಹಾರ ನಡೆಸಿರುವವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂದು ವರದಿ ನೀಡುವಂತೆ ಕೇಳಿದೆ. ಲೋಕಾಯುಕ್ತ ಪೊಲೀಸರಿಂದ ವರದಿ ಕೇಳಿದೆ. ತೋಟಗಾರಿಕೆ ಇಲಾಖೆಯ ಜಾಗದಲ್ಲಿ, ಪ್ರವಾಸೋದ್ಯಮ ಇಲಾಖೆ ಅನುದಾನದಿಂದ ಕಾಮಗಾರಿ ಮಾಡಲಾಗಿತ್ತು. ಉದ್ಯಾನವನ ಉದ್ಘಾಟನೆ ಆದ 6 ತಿಂಗಳ ಬಳಿಕ ಉಳಿದ ಕಾಮಗಾರಿಗಳ ಪೂರ್ಣಗೊಳಿಸಿ ಅದನ್ನು ತಮಗೆ ಹಸ್ತಾಂತರಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದಾರೆ.
ಆದರೆ ಇಂದಿಗೂ ಕಾಮಗಾರಿ ಪೂರ್ಣಗೊಳಿಸದೆ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಗೆ ಉದ್ಯಾನವನವನ್ನು ಹಸ್ತಾಂತರಿಸಿಲ್ಲ. ಗ್ರೇಟರ್ ರಾಜಾಸೀಟಿಗೆ ಅಲಂಕಾರಿಕ ವಿದ್ಯುತ್ ಅಳವಡಿಕೆ ಮಾಡಬೇಕಾಗಿತ್ತು, ವಿದೇಶಿ ತಳಿಯ ಗಿಡಗಳ ಬೆಳೆಸಬೇಕಾಗಿತ್ತು, ಅವುಗಳಿಗೆ ಬೇಕಾಗಿದ್ದ ನೀರು ಪೂರೈಕೆಗೆ ಪೈಪ್ ಲೈನ್ ಅವಳಡಿಸಬೇಕಾಗಿತ್ತು. ಅದ್ಯಾವ ಕಾಮಗಾರಿ ಮಾಡದೆ ಉದ್ಯಾನವನ್ನು ಅಧಿಕಾರಿಗಳು ಅಂದಿನ ಸಿಎಂ ಅವರಿಂದ ಉದ್ಘಾಟಿಸಿದ್ದರು.
ಸರ್ಕಾರಕ್ಕೆ ವರದಿ
ಹೀಗಾಗಿ ಮಡಿಕೇರಿಯ ತನ್ನೀರ ಮೈನಾ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ತನಿಖೆಗೆ ಆದೇಶಿಸಿದ್ದ ಇಂದಿನ ಸರ್ಕಾರ, ಲೋಕಾಯುಕ್ತ ಪೊಲೀಸರಿಂದ ಕಾಮಗಾರಿ ಕುರಿತು ತನಿಖೆ ಮಾಡಲಾಗಿತ್ತು. ತನಿಖೆಯಲ್ಲಿ ಕಾಮಗಾರಿ ಕಳಪೆ ಹಾಗೂ ಹಣ ದುರುಪಯೋಗವಾಗಿರುವುದು ಸಾಬೀತಾಗಿದೆ. ಅವ್ಯವಹಾರ ಆಗಿದ್ದು, ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ.
ಹೀಗಾಗಿ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬ ವರದಿ ಸಲ್ಲಿಸುವಂತೆ ಇಲಾಖೆ ಮುಖ್ಯ ಕಾರ್ಯದರ್ಶಿ ಕೇಳಿದ್ದಾರೆ. ಜೊತೆಗೆ ಅಂದಿನ ಎಂಜಿನಿಯರ್ ವಿರುದ್ಧ ವಿಚಾರಣೆಗೆ ಲೋಕಾಯುಕ್ತಕ್ಕೆ ವಹಿಸಿದೆ. ಈ ಕುರಿತು ಮಾತನಾಡಿರುವ ತನ್ನೀರಾ ಮೈನಾ ಅಂದಿನ ಸಿಎಂ ಅವರಿಗೆ ಸುಳ್ಳು ಮಾಹಿತಿ ನೀಡಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಉದ್ಘಾಟಿಸಿರುವ ಅಂದಿನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಅಂದಿನ ಶಾಸಕರು ಜಿಲ್ಲೆಯ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.


