ಕುಶಾಲನಗರದ ಸುಂಟಿಕೊಪ್ಪ ಬಳಿಯ ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ನೀರಿನ ಆಳ ಅರಿಯದೆ ಮುಳುಗಿ ಸಾವನ್ನಪ್ಪಿದ್ದಾರೆ. ಕಾಲೇಜು ಮುಗಿಸಿ ಈಜಲು ಹೋಗಿದ್ದಾಗ ಈ ದುರಂತ ಸಂಭವಿಸಿದ್ದು, ಪೊಲೀಸರು, ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ.
ಕುಶಾಲನಗರ (ಜ.17): ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ಶನಿವಾರ ನಡೆದಿದೆ. ಮೃತರನ್ನು ಸುಂಟಿಕೊಪ್ಪದ ಪಂಪ್ ಹೌಸ್ ನಿವಾಸಿಗಳಾದ ಮಹಮ್ ರಹೀಜ್ (16) ಮತ್ತು ಮಹಮದ್ ನಿಹಾಲ್ (16) ಎಂದು ಗುರುತಿಸಲಾಗಿದೆ.
ಕಾಲೇಜು ಮುಗಿಸಿ ಈಜಲು ತೆರಳಿದ್ದ ಸ್ನೇಹಿತರು
ಮೃತಪಟ್ಟ ಇಬ್ಬರು ಬಾಲಕರು ಸುಂಟಿಕೊಪ್ಪದ ಚೆನ್ನಮ್ಮ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದರು. ಕಾಲೇಜು ಮುಗಿದ ನಂತರ ಸ್ನೇಹಿತರಿಬ್ಬರೂ ಸೇರಿ ಈಜಾಡಲು ಹಾರಂಗಿ ಹಿನ್ನೀರು ಹೊಳೆಗೆ ತೆರಳಿದ್ದರು. ನೀರಿನ ಆಳ ಅರಿಯದೆ ಇಬ್ಬರೂ ನೀರಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಮುಳುಗು ತಜ್ಞರು
ವಿಷಯ ತಿಳಿಯುತ್ತಿದ್ದಂತೆಯೇ ಸುಂಟಿಕೊಪ್ಪ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣವೇ ಮುಳುಗು ತಜ್ಞರನ್ನು ಕರೆಸಿ ಕಾರ್ಯಾಚರಣೆ ಆರಂಭಿಸಲಾಯಿತು. ಸುಮಾರು ಗಂಟೆಗಳ ಕಾಲ ನಡೆಸಿದ ಹುಡುಕಾಟದ ನಂತರ ಇಬ್ಬರು ಬಾಲಕರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.
ಮೃತ ಬಾಲಕರು ಸುಂಟಿಕೊಪ್ಪದ ಪಂಪ್ ಹೌಸ್ ಬಡಾವಣೆ ನಿವಾಸಿಗಳಾಗಿದ್ದು, ಮಕ್ಕಳ ಸಾವಿನ ಸುದ್ದಿ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈಜಲು ಹೋದ ಮಕ್ಕಳು ಹೆಣವಾಗಿ ಬಂದಿರುವುದನ್ನು ಕಂಡು ಗ್ರಾಮಸ್ಥರು ಮರುಗುತ್ತಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿದಂತೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ನದಿ ಅಥವಾ ಹಿನ್ನೀರಿನಂತಹ ಅಪಾಯಕಾರಿ ಪ್ರದೇಶಗಳಲ್ಲಿ ಈಜಲು ಇಳಿಯುವಾಗ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


