97 ಲಕ್ಷ ಕೊಟ್ಟು ಖರೀದಿಸಿದ ಯಂತ್ರ ನಿಷ್ಕ್ರಿಯ
- 97 ಲಕ್ಷ ಕೊಟ್ಟು ಖರೀದಿಸಿದ ಯಂತ್ರ ನಿಷ್ಕ್ರಿಯ
- ಹಣ ವ್ಯರ್ಥ ಮಾಡಿದ ಪಾಲಿಕೆ
- ಥರ್ಮಲ್ ರೋಡ್ ರಿಪೇರರ್ ಯಂತ್ರ
- ಗುಂಡಿ- ಹೊಂಡ ರಿಪೇರಿಗೆಂದು ಖರೀದಿಸಿದ ಯಂತ್ರ ನಿರುಪಯುಕ್ತ
ಶಿವಾನಂದ ಗೊಂಬಿ
ಹುಬ್ಬಳ್ಳಿ (ಸೆ.22) : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಾಲ್ಕು ವರ್ಷದ ಹಿಂದೆ ಖರೀದಿಸಿದ್ದ . 97 ಲಕ್ಷ ಮೌಲ್ಯದ ‘ಥರ್ಮಲ್ ರೋಡ್ ರಿಪೇರರ್’ ಯಂತ್ರ ಪಾಲಿಕೆ ಆವರಣದಲ್ಲಿ ತುಕ್ಕು ಹಿಡಿದಿದೆ. ಈ ಯಂತ್ರವನ್ನು ಇಲ್ಲಿನ ಪಾಲಿಕೆ ಹೊರತುಪಡಿಸಿದರೆ ದೇಶದಲ್ಲಿ ಯಾವ ಸಂಸ್ಥೆಯೂ ಖರೀದಿಸಿಲ್ಲ. ಇದೀಗ ಯಂತ್ರವನ್ನು ಮಾರಾಟ ಮಾಡಿದ್ದ ಕಂಪನಿಗೆ ಪಾಲಿಕೆ ನೋಟಿಸ್ ನೀಡಲು ಮುಂದಾಗಿದೆ.
ಸಮಯಕ್ಕೆ ಸರಿಯಾಗಿ ಬಾರದ ಆಂಬ್ಯುಲೆನ್ಸ್, ಅಪಘಾತದಲ್ಲಿ ಗಾಯಗೊಂಡಾತ ನರಳಾಡಿ ಪ್ರಾಣಬಿಟ್ಟ!
ಏನಿದು ಯಂತ್ರ?: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಗುಂಡಿ (ಪಾಟ್‌ಹೋಲ್)ಗಳದ್ದೆ ದರ್ಬಾರು. ಪಾಲಿಕೆ ಲೆಕ್ಕ ಹಾಕಿದಾಗ ಲಕ್ಷಗಟ್ಟಲೇ ಹೊಂಡಗಳಿರುವುದು ಬೆಳಕಿಗೆ ಬಂದಿತ್ತು. ಹಾಗಂತ ಪಾಲಿಕೆ ಈ ಗುಂಡಿಗಳನ್ನು ಮುಚ್ಚುವುದೇ ಇಲ್ಲ ಅಂತೇನೂ ಇಲ್ಲ. ಆಗಾಗ ಪ್ಯಾಚ್ ವರ್ಕ್ ಮಾಡುತ್ತದೆ. ಇದಕ್ಕಾಗಿ ಕೋಟಿಗಟ್ಟಲೇ ಹಣವನ್ನು ಸುರಿಯುತ್ತಿದೆ. ಹೀಗಾಗಿ ಗುಂಡಿಗಳನ್ನು ಯಂತ್ರದ ಮೂಲಕ ಮುಚ್ಚಿದರೆ ಅತ್ತ ಕಾರ್ಮಿಕರಿಗೂ ಹೆಚ್ಚಿನ ಒತ್ತಡ ಬೀಳುವುದಿಲ್ಲ. ಆಗಿಂದಾಗೆ ಮುಚ್ಚಬಹುದಾದ್ದರಿಂದ ನಾಗರಿಕರಿಂದಲೂ ಆಕ್ರೋಶ ವ್ಯಕ್ತವಾಗುವುದಿಲ್ಲ ಎಂಬ ಕಾರಣಕ್ಕೆ ಚೈನ್ನೈನ ಕಂಪನಿಯೊಂದರಿಂದ ಪಾಟ್‌ಹೋಲ್ ಮುಚ್ಚಲೆಂದೆ ‘ಥರ್ಮಲ್ ರೋಡ್ ರಿಪೇರರ್’ ಎಂಬ ಯಂತ್ರವನ್ನು 2018ರಲ್ಲೇ . 97 ಲಕ್ಷ ಕೊಟ್ಟು ಖರೀದಿಸಿತ್ತು. ಆದರೆ ಈ ಯಂತ್ರದ ಬಳಕೆಯನ್ನು ಮಾತ್ರ ಪಾಲಿಕೆ ಮಾಡಿಲ್ಲ. ಯಂತ್ರವನ್ನು ಪಾಲಿಕೆ ಆವರಣದಲ್ಲಿ ಇಟ್ಟಪರಿಣಾಮ ಮಳೆಯಿಂದ ತುಕ್ಕು ಹಿಡಿದಿದೆ. ಇಡೀ ದೇಶದಲ್ಲಿ ಯಾವ ಸಂಸ್ಥೆಯೂ ಈ ಯಂತ್ರವನ್ನು ಖರೀದಿಸುವ ಗೋಜಿಗೆ ಹೋಗಿಲ್ಲ. ಆದರೆ ಇಲ್ಲಿನ ಪಾಲಿಕೆ ಅಧಿಕಾರಿಗಳು ಮಾತ್ರ ಸರಿಯಾಗಿ ಪರೀಕ್ಷಿಸದೇ ಖರೀದಿಸಿ ಮೂಲೆ ಸೇರಿಸಿದ್ದಾರೆ. ಇದರ ಖರೀದಿಯಲ್ಲಿ ಕೆಲ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ ಎಂಬ ಅನುಮಾನ ಇದೀಗ ಹುಟ್ಟುಕೊಂಡಿದೆ.
ಕಾರಣವೇನು? ಹೀಟ್ ಮಾಡುವ ಮೂಲಕ ಗುಂಡಿ- ಹೊಂಡ ಮುಚ್ಚುವ ಸಾಮರ್ಥ್ಯದ ಯಂತ್ರ ಇದು ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿ ಖರೀದಿಸಿರುವ ಯಂತ್ರ 5 ಟನ್ ತೂಕದ ಯಂತ್ರ. ಈ ಭಾರವನ್ನು ಹಾಕಿ ಗುಂಡಿ ಮುಚ್ಚುತ್ತದೆ. ಆದರೆ ಹುಬ್ಬಳ್ಳಿ-ಧಾರವಾಡದಲ್ಲಿ 50 ಟನ್ ಸಾಮರ್ಥ್ಯದ ಒತ್ತಡದಿಂದ ಪಾಟ್‌ಹೋಲ್ ಮುಚ್ಚುವಂತಹ ಯಂತ್ರ ಅಗತ್ಯವಿದೆ. ಇಲ್ಲಿ ಲಾರಿ, ಬಸ್ ಸೇರಿದಂತೆ ಅಧಿಕ ಭಾರದ ವಾಹನಗಳು ಸಂಚರಿಸುವುದರಿಂದ 5 ಟನ್ ಸಾಮರ್ಥ್ಯದ ಯಂತ್ರದಿಂದ ಮುಚ್ಚುವುದರಿಂದ ಪ್ರಯೋಜನವಿಲ್ಲ. ಜತೆಗೆ 5 ಟನ್ ಸಾಮರ್ಥ್ಯದ ಗುಂಡಿಗಳನ್ನು ಸಹ ಇದು ಸರಿಯಾಗಿ ಮುಚ್ಚುವುದಿಲ್ಲವಂತೆ. ಈ ಕಾರಣಕ್ಕಾಗಿ ಈ ಯಂತ್ರವನ್ನು ಬಳಸಿಯೇ ಇಲ್ಲ.
ಈ ಯಂತ್ರ ಖರೀದಿಸುವಾಗ ಸರಿಯಾಗಿ ಪ್ರಯೋಗಿಸಲಾಗಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಯಂತ್ರದಿಂದ ಪ್ರಯೋಜನ ಮಾತ್ರ ಆಗಿಲ್ಲ. ಹೀಗಾಗಿ ಈ ಯಂತ್ರದಿಂದ ನಮಗೆ ಪ್ರಯೋಜನವಾಗಿಲ್ಲ ಎಂದು ಕಂಪನಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
Hubballi; ಶ್ರಾವಣ ಮಾಸದಲ್ಲಿ ದಾಖಲೆ ಬಿಯರ್ ಮಾರಾಟ, ಮದ್ಯಪ್ರಿಯರ ಮೂಡ್ ಬದಲಾಗಿದ್ದು ಹೇಗೆ?
ಥರ್ಮಲ್ ರೋಡ್ ರಿಪೇರರ್ ಯಂತ್ರ ನಿರುಪಯುಕ್ತವಾಗಿದೆ. ಯಂತ್ರ ವಿಫಲವಾಗಿದ್ದು ದುರಸ್ತಿಗೆ . 2 ಲಕ್ಷ ಖರ್ಚು ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಪಾಲಿಕೆಗೆ ಮಾರಾಟ ಮಾಡಿದ ಕಂಪನಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದೆ. ಕಂಪನಿಯೂ ಇಡೀ ದೇಶದಲ್ಲಿ ಒಂದೇ ಒಂದು ಥರ್ಮಲ್ ರೋಡ್ ರಿಪೇರರ್ ಯಂತ್ರವನ್ನು ಮಾರಾಟ ಮಾಡಿದೆ. ಅದು ನಮ್ಮ ಪಾಲಿಕೆಗೆ ಮಾತ್ರ.
ಈರೇಶ ಅಂಚಟಗೇರಿ, ಮೇಯರ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ