ಕೆಆರ್‌ಎಸ್‌ ಅಣೆಕಟ್ಟೆಗೆ ಗಣಿಗಾರಿಕೆಯಿಂದ ಅಪಾಯವಿದೆಯೇ ಎನ್ನುವುದನ್ನು ತಿಳಿಯಲು ಸರ್ಕಾರ, ಜಿಲ್ಲಾಡಳಿತ ಟ್ರಯಲ್‌ ಬ್ಲಾಸ್ಟ್‌ ನಡೆಸಲು ಮುಂದಾಗಿರುವುದೇ ಮೂರ್ಖತನ ಮತ್ತು ಕ್ರಿಮಿನಲ್‌ ಅಪರಾಧ ಎಂದು ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಎಂ.ಲಕ್ಷ್ಮಣ್‌ ಆರೋಪಿಸಿದರು. 

ಮಂಡ್ಯ (ಜು.28): ಕೆಆರ್‌ಎಸ್‌ ಅಣೆಕಟ್ಟೆಗೆ ಗಣಿಗಾರಿಕೆಯಿಂದ ಅಪಾಯವಿದೆಯೇ ಎನ್ನುವುದನ್ನು ತಿಳಿಯಲು ಸರ್ಕಾರ, ಜಿಲ್ಲಾಡಳಿತ ಟ್ರಯಲ್‌ ಬ್ಲಾಸ್ಟ್‌ ನಡೆಸಲು ಮುಂದಾಗಿರುವುದೇ ಮೂರ್ಖತನ ಮತ್ತು ಕ್ರಿಮಿನಲ್‌ ಅಪರಾಧ ಎಂದು ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಎಂ.ಲಕ್ಷ್ಮಣ್‌ ಆರೋಪಿಸಿದರು. ದೇಶದಲ್ಲಿ ಒಂದು ಅಣೆಕಟ್ಟು ಅಥವಾ ಕನಿಷ್ಠ ಒಂದು ಸಣ್ಣ ಕೆರೆ ಕಟ್ಟಿಸಲು ಸಾಧ್ಯವಾಗದ ಬಿಜೆಪಿ ಸರ್ಕಾರ, ಮೈಸೂರು ಮಹಾರಾಜರು ಕಟ್ಟಿಸಿರುವ ಅಣೆಕಟ್ಟು ಉಳಿಸಿಕೊಳ್ಳಲು ನಿರ್ಲಕ್ಷೃತನ ತೋರುತ್ತಿರುವುದು ವಿಪರ್ಯಾಸ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಬೇರೆ ಜಾಗದಲ್ಲಿ ಮಾಡಿಕೊಳ್ಳಲಿ: ಪ್ರಾಯೋಗಿಕ ಪರೀಕ್ಷೆ ಮಾಡಲೇಬೇಕೆಂದರೆ ಹೊರಗೆ ಬೇಕಾದಷ್ಟುಜಾಗವಿದೆ. ಅಲ್ಲಿ ಪರೀಕ್ಷೆ ಮಾಡಿ ತಿಳಿದುಕೊಳ್ಳಲಿ. ಅಣೆಕಟ್ಟು ಭರ್ತಿಯಾಗಿರುವ ಸಮಯದಲ್ಲಿ ಟ್ರಯಲ್‌ ಬ್ಲಾಸ್ಟ್‌ನಿಂದ ಬ್ಲಾಸ್ಟ್‌ ವ್ಯತಿರಿಕ್ತವಾಗಿ ಪರಿಣಾಮ ಉಂಟಾಗಿ ಡ್ಯಾಂಗೆ ಅಪಾಯವಾದರೆ ಪರಿಸ್ಥಿತಿಯನ್ನು ಊಹಿಸುವುದಕ್ಕೂ ಸಾಧ್ಯವಾಗದು. ಸ್ಫೋಟ ಸಮಯದಲ್ಲಿ ಕೂದಲೆಳೆಯಷ್ಟುಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡರೂ, ಕೆಲವೊತ್ತಿನಲ್ಲಿ ಅದರಿಂದಾಗುವ ಸಮಸ್ಯೆ ಏನೆಂದು ಇವರಿಗೆ ಗೊತ್ತೇ ಎಂದು ವಾಗ್ದಾಳಿ ನಡೆಸಿದರು. ನ್ಯೂಕ್ಲಿಯರ್‌ ಬಾಂಬ್‌ ಸಿದ್ಧಪಡಿಸಿದಾಗ ನಿರ್ಜನ ಪ್ರದೇಶದಲ್ಲಿ ಪ್ರಯೋಗ ಮಾಡಲಾಗಿತ್ತೇ ಹೊರತು ಜನರಿರುವ ಪ್ರದೇಶದಲ್ಲಿ ಅಲ್ಲ. ಬ್ಲಾಸ್ಟ್‌ ಆದ ನಂತರ ನೋಡಿಕೊಳ್ಳೋಣವೆಂದು ಯಾರೂ ನಿರ್ಧಾರ ಮಾಡುವುದಿಲ್ಲ. ಹೀಗಿರುವಾಗ ಅಣೆಕಟ್ಟು ರಕ್ಷಣೆ ದೃಷ್ಟಿಯಿಂದ ಅದರ ಸಮೀಪವೇ ಟ್ರಯಲ್‌ ಬ್ಲಾಸ್ಟ್‌ ಮಾಡುತ್ತೇವೆಂದು ಹೇಳುತ್ತಿರುವುದು ದುರಂತ ಎಂದು ಹೇಳಿದರು.

Mandya: ಬೇಬಿ ಬೆಟ್ಟದಲ್ಲಿ ಏಳು ದಿನ ನಡೆಯಬೇಕಿದ್ದ ಟ್ರಯಲ್ ಬ್ಲಾಸ್ಟ್ ಒಂದೇ ದಿನಕ್ಕೆ ಅಂತ್ಯ

ಡ್ಯಾಂ ಆಯಸ್ಸೇ 120 ವರ್ಷ: ಕೆಆರ್‌ಎಸ್‌ ಡ್ಯಾಂನ ಆಯುಷ್ಯವೇ 120 ವರ್ಷ. ಈಗಾಗಲೇ 92 ವರ್ಷ ಕಳೆದಿದೆ. ಹೀಗಿರುವಾಗ ಪ್ರಾಯೋಗಿಕ ಪರೀಕ್ಷೆ ಮಾಡಬೇಕೇ ಎಂದು ಪ್ರಶ್ನಿಸಿದ ಅವರು, ಗಣಿಗಾರಿಕೆ ಮಾಡಲು ಬೇಕಾದಷ್ಟುಜಾಗವಿದೆ. ಅಲ್ಲಿಗೆ ಹೋಗಿ ಮಾಡಲಿ. ಒಂದು ವೇಳೆ ಕಾಂಗ್ರೆಸ್‌ ಮುಖಂಡರು ಗಣಿಗಾರಿಕೆ ಮಾಡುತ್ತಿದ್ದರೂ ಅಷ್ಟೇ. ನಮಗೆ ಡ್ಯಾಂ ಸುರಕ್ಷಿತವಾಗಿರುವುದಷ್ಟೇ ಮುಖ್ಯ. ಇನ್ನು ಜಿಲ್ಲಾಡಳಿತ ಮತ್ತೆ ಗಣಿಗಾರಿಕೆಗೆ ಅವಕಾಶ ಕೊಡಬಾರದು. ಮತ್ತೆಂದು ಅಂತಹ ಪರಿಕಲ್ಪನೆ ಮಾಡಿಕೊಳ್ಳುವುದು ಬೇಡ. ನಾವು ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ವೈಜ್ಞಾನಿಕ: ಟ್ರಯಲ್‌ ಬ್ಲಾಸ್ಟ್‌ಗೆಂದು ಜಾರ್ಖಂಡ್‌ನಿಂದ ಬಂದಿರುವ ವಿಜ್ಞಾನಿಗಳ ಯಾರು?. ಅವರನ್ನು ಅಲ್ಲಿನ ಸರ್ಕಾರ ಕಳಿಸಿದೆಯೇ? ಗಣಿ ಮಾಲೀಕರು ತಮಗೆ ಬೇಕಾದವರನ್ನು ಕರೆಸಿಕೊಂಡಿರಬಹುದು. ಆ ರಾಜ್ಯದ ಸಂಘ ಸಂಸ್ಥೆಯೊಂದರ ಸದಸ್ಯರನ್ನು ವಿಜ್ಞಾನಿಗಳೆಂದು ಕರೆಸಿದ್ದಾರೆ. ರಾಜ್ಯದ ಕಂದಾಯ ಇಲಾಖೆಯ ಅಧೀನದಲ್ಲಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವೇ ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯವಿದೆ ಎಂದು ವರದಿ ನೀಡಿದೆ. 2018 ಹಾಗೂ 2020ರಲ್ಲಿಯೂ ಮತ್ತೆ ವರದಿ ಕೊಟ್ಟಿದೆ. ಅದರಲ್ಲಿರುವಂತೆ ಗಣಿಗಾರಿಕೆ ನಿಲ್ಲಿಸಬೇಕು. ಸುಮಾರು 37 ಕಿ.ಮೀ ಏಕಬಂಡೆಯ ಮೇಲೆ ಡ್ಯಾಂ ನಿರ್ಮಾಣ ಮಾಡಲಾಗಿದೆ. ನೀರು ಸಂಗ್ರಹವಾಗುತ್ತದೆ ಎನ್ನುವ ಕಾರಣಕ್ಕೆ ಅಂದು ಕಾಮಗಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಮಾಡುತ್ತಿರುವ ಹಾಗೂ ಡ್ಯಾಂ ಕೆಳಗಿರುವ ಸ್ಥಳ ಒಂದೇ ಬಂಡೆಯ ಮೇಲಿದೆ. ಇದನ್ನು ಹಿಂದೆಯೇ ಸ್ಪಷ್ಟಪಡಿಸಲಾಗಿದೆ. ಹೀಗಿರುವಾಗ ಪರೀಕ್ಷೆ ಮಾಡುವ ಅವಶ್ಯಕತೆಯಾದರೂ ಏನಿದೆ ಎಂದು ಪ್ರಶ್ನಿಸಿದರು.

Mandya: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಡೇಟ್ ಫಿಕ್ಸ್: ರೈತರು, ಭೂ ವಿಜ್ಞಾನಿಗಳ ವಿರೋಧ

ಟ್ರಯಲ್‌ ಬ್ಲಾಸ್ಟ್‌ಗೆ ಡೀಸಿ ಆಸಕ್ತಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್‌.ಎನ್‌.ರವೀಂದ್ರ ಮಾತನಾಡಿ, ಟ್ರಯಲ್‌ ಬ್ಲಾಸ್ಟ್‌ನಿಂದ ಅನಾಹುತವಾದರೆ ಬರೋಬರಿ 32 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರು ಇರುವುದಿಲ್ಲ. ಬೆಂಗಳೂರಿನ ಜನರು ಬಾಟಲಿ ನೀರಿಗಾಗಿ ಪರದಾಡಬೇಕಾಗುತ್ತದೆ. ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಸಮೀಪ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸುವಂತೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಗಿದೆ. ಈವರೆಗೂ ಸ್ಥಳ ಪರಿಶೀಲನೆಯನ್ನೂ ಮಾಡದ ಡಿಸಿ, ಟ್ರಯಲ್‌ ಬ್ಲಾಸ್ಟ್‌ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ವಿಪರ್ಯಾಸ. ಡ್ಯಾಂ ಸಮೀಪ ಸಂಪೂರ್ಣ ಗಣಿಗಾರಿಕೆ ನಿಂತಿಲ್ಲ. ಬ್ಲಾಸ್ಟ್‌ ನಡೆಸಲು ಮುಂದಾಗಿದ್ದ ಜಾಗದಿಂದ 50 ರಿಂದ 100 ಮೀಟರ್‌ ಅಂತರದಲ್ಲಿಯೇ ಸ್ಫೋಟ ನಡೆಯುತ್ತಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸುತ್ತಿಲ್ಲ. ಡಿಸಿ ಎಸ್‌.ಅಶ್ವಥಿ ಅವರು ಮಹಾರಾಣಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೋಮು ಸ್ವರ್ಣಸಂದ್ರ, ರಾಮಲಿಂಗಯ್ಯ, ಸಂಪಳ್ಳಿ ಉಮೇಶ್‌, ಆನಂದ್‌ ಇದ್ದರು.