'ಎಂಇಎಸ್ ಏಜೆಂಟರಂತೆ ಶಾಸಕ ಯತ್ನಾಳ ವರ್ತನೆ'
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ವಾಗ್ದಾಳಿ| ಶಾಸಕರಿಂದ ವ್ಯಾಪಾರಸ್ಥರಿಗೆ ಭಯ| ಹುಲಿ ಎಂದು ಕರೆಯಲ್ಪಡುವ ಯತ್ನಾಳ ಘರ್ಜಿಸಬೇಕು ಹೊರತು ಬೊಗಳಬಾರದು|
ವಿಜಯಪುರ(ಡಿ.03): ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಂಇಎಸ್ ಏಜೆಂಟರಂತೆ ವರ್ತಿಸುತ್ತಿದ್ದು, ಡಿ.5ರ ಬಂದ್ ವಿಫಲಗೊಳಿಸಲು ಸರ್ವ ವಿಧದಲ್ಲೂ ಪ್ರಯತ್ನಿಸುತ್ತಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ವಿಷ ಬೀಜ ಬಿತ್ತಿ, ಕೋಮು ಗಲಭೆ ಸೃಷ್ಟಿಸಿ ಹಾಗೂ ಪ್ರಚಾರಕ್ಕೆ ಹಾತೊರೆಯುವ ವಿಜಯಪುರ ನಗರ ಶಾಸಕರು ಬಂದ್ ವಿಫಲಗೊಳಿಸಲು ಸರ್ವವಿಧದಲ್ಲೂ ಪ್ರಯತ್ನಿಸುತ್ತಿದ್ದಾರೆ. ಒಂದು ರೀತಿ ಎಂಇಎಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಬಂದ್ ವಿಫಲಗೊಳಿಸುವಂತೆ ವ್ಯಾಪಾರಸ್ಥರಿಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕರವೇ ಬಗ್ಗೆ ಹೆದರಿದ್ದಾರೆ. ಈ ಕಾರಣಕ್ಕಾಗಿಯೇ ಬಂದ್ ವಿಫಲಗೊಳಿಸಲು ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ ಎಂದರು.
ಯತ್ನಾಳ ಮತ್ತೆ ಕನ್ನಡಪರ ಸಂಘಟನೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇಷ್ಟೊಂದು ಏಕೆ ಭಯ ಪಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಕನ್ನಡ ಪರ ಸಂಘಟನೆಗಳ ಬಂದ್ ವಿಫಲ ಮಾಡಲು ಎಲ್ಲ ರೀತಿಯಿಂದ ಪ್ರಯತ್ನಿಸುತ್ತಿದ್ದಾರೆ. ಹೋರಾಟ ಮನೋಭಾವದಿಂದ ಬಂದ ವ್ಯಕ್ತಿಯೇ ಪೂರ್ವಭಾವಿ ಸಭೆ ಕರೆದು ಬಂದ್ ವಿಫಲ ಮಾಡುವಂತೆ ಕೋರಿರುವುದು ಖೇದಕರ ಎಂದರು.
ಇದು ಕರವೇ ಅಲ್ಲ, ಕಳ್ಳರ ವೇದಿಕೆ: ಶಾಸಕ ಕೆಂಡಾಮಂಡಲ
ಕರವೇ ಕಳ್ಳರ ರಕ್ಷಣಾ ವೇದಿಕೆ ಎಂದು ಹೇಳಿದ್ದಾರೆ. ಹೋರಾಟಗಾರರನ್ನು ಕಳ್ಳ, ಭ್ರಷ್ಟಾಚಾರಿ ಎಂದು ಹೇಳುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡುವ ವಿಜಯಪುರ ನಗರ ಶಾಸಕರು ತಾವು ಎಷ್ಟು ಪ್ರಾಮಾಣಿಕರು ಎಂಬುದನ್ನು ಎದೆ ಮುಟ್ಟಿ ಹೇಳಿಕೊಳ್ಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಬಂದ್‌ಗೆ ಬೆಂಬಲ:
ಡಿ.5ರಂದು ಕನ್ನಡ ಪರ ಸಂಘಟನೆಗಳ ಬಂದ್‌ಗೆ ಅನೇಕ ವ್ಯಾಪಾರಸ್ಥರು ಸ್ವಯಂಪ್ರೇರಿತ ಬೆಂಬಲಿಸಿದ್ದಾರೆ. ಆದರೆ ಕೆಲವು ವ್ಯಾಪಾರಸ್ಥರು ಬಂದ್‌ಗೆ ಸ್ಪಂದಿಸುವ ಇರಾದೆ ಇದ್ದರೂ ನಗರ ಶಾಸಕರ ಒತ್ತಡದಿಂದ ಬೆಂಬಲಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಶಾಸಕರು ಪೊಲೀಸ್ ಬಲ ಪ್ರಯೋಗಿಸಿ, ಸರ್ಕಾರಿ ಯಂತ್ರ ಬಳಸಿ ವ್ಯಾಪಾರಸ್ಥರಲ್ಲಿ ಭಯ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಬಂದ್‌ಗೆ ಕರವೇ (ನಾರಾಯಣಗೌಡ ಬಣ) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ನಗರದ ಎಲ್ಲ ವ್ಯಾಪಾರಸ್ಥರು ತಮ್ಮ ವ್ಯಾಪಾರ-ವಹಿವಾಟು ಬಂದ್ ಮಾಡಿ ಬಂದ್ ಯಶಸ್ವಿಗೊಳಿಸಬೇಕು ಎಂದರು.
'ಸಿದ್ದರಾಮಯ್ಯ ಕ್ರಾಸ್‌ಬ್ರೀಡ್ ಹಿಂದೂ'
ನಿಗಮ ರಚನೆ ಚುನಾವಣಾ ಗಿಮಿಕ್!:
ಮರಾಠಿಗರು ಕನ್ನಡಿಗರು, ನಮ್ಮ ಸಹೋದರರು. ನಮ್ಮ ಹೋರಾಟ ಮರಾಠ ಸಮುದಾಯದ ವಿರೋಧವಿಲ್ಲ. ಮರಾಠ ಸಮಾಜದ ಏಳ್ಗೆಗಾಗಿ ನಮ್ಮ ಹಿತಚಿಂತನೆಯೂ ಇದೆ. ಅವರ ಅಭಿವೃದ್ಧಿಗಾಗಿ ಹೆಚ್ಚೆಚ್ಚು ಅನುದಾನ ಕೊಡಿ. ವಿನಾಕಾರಣ ನಿಗಮ ರಚಿಸಿ ಆ ಸಮುದಾಯಕ್ಕೆ ಮೋಸ ಮಾಡಬೇಡಿ. ಚುನಾವಣಾ ಗಿಮಿಕ್‌ಗಾಗಿ ನಿಗಮ ರಚನೆಯನ್ನು ನಾವು ವಿರೋಧಿಸುತ್ತಿದ್ದೇವೆ ಎಂದರು.
ಆರೋಗ್ಯ ಸಚಿವರಿಗೆ ಮನವಿ:
ವಿಜಯಪುರ ನಗರ ಶಾಸಕರಿಗೆ ಮಾನಸಿಕ ಸ್ಥಿತಿಗತಿ ಸರಿಯಲ್ಲ. ಈ ಕಾರಣಕ್ಕಾಗಿ ನಿಮ್ಹಾನ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಂತೆ ಆರೋಗ್ಯ ಸಚಿವರಿಗೆ ಶೀಘ್ರ ಮನವಿ ಸಲ್ಲಿಸಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ವ್ಯಂಗ್ಯವಾಡಿದರು.
ಶಾಸಕರು ತಮ್ಮ ಪಕ್ಷದವರನ್ನೇ ಜರಿಯುತ್ತಾರೆ. ಹುಲಿ ಎಂದು ಕರೆಯಲ್ಪಡುವ ಅವರು ಘರ್ಜಿಸಬೇಕು ಹೊರತು ಬೊಗಳಬಾರದು. ನನ್ನ ಮಕ್ಕಳನ್ನು ವೇದಿಕೆಯಲ್ಲಿ ನಿಲ್ಲಿಸಿ ನಾಡಗೀತೆಯನ್ನು ಬಾಯಿಪಾಠವಾಗಿ ಹಾಡಿಸುವೆ. ಅವರ ಮಕ್ಕಳು ಅದೇ ವೇದಿಕೆಯಲ್ಲಿ ನಾಡಗೀತೆ ಬಾಯಿಪಾಠ ಹಾಡಬೇಕು ಈ ಚಾಲೆಂಜ್ ಸ್ವೀಕರಿಸಬೇಕು ಎಂದಿದ್ದಾರೆ.
ಕರವೇ ಮುಖಂಡ ಪ್ರಕಾಶ ಕುಂಬಾರ ಮಾತನಾಡಿ, ಈ ಹೋರಾಟ ಮರಾಠಿಗರ ವಿರುದ್ಧ ಅಲ್ಲ, ಕರವೇ ಸಂಘಟನೆ ಕನ್ನಡಪರ ಅನೇಕ ಯಶಸ್ವಿ ಹೋರಾಟ ಮಾಡಿದೆ. ಅದು ಜನತೆಗೆ ಗೊತ್ತಿದೆ, ಇಂತಹ ಮಹತ್ವದ ಸಂಘಟನೆಯನ್ನು ಕಳ್ಳರ ರಕ್ಷಣಾ ವೇದಿಕೆ ಎಂದು ದೂರಿರುವ ವಿಜಯಪುರ ನಗರ ಶಾಸಕರ ಬಾಯಿಗೆ ಬೀಗವಿಲ್ಲ ಎಂದು ಟೀಕಿಸಿದರು. ಮಹಾದೇವ ರಾವಜಿ, ಫಯಾಜ್ ಕಲಾದಗಿ, ದಸ್ತಗೀರ ಸಾಲೋಟಗಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.