ಹುಣಸೂರು(ಜೂ. 04): ಚಾಲಕನ ನಿಯಂತ್ರಣ ತಪ್ಪಿ ನೂರು ಅಡಿ ಆಳದ ಹಾರಂಗಿ ಮುಖ್ಯನಾಲೆಗೆ ಲಾರಿ ಬಿದ್ದ ಪರಿಣಾಮ ಸಂಪೂರ್ಣ ಜಖಂಗೊಂಡಿದ್ದರೂ ಚಾಲಕ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ.

ಮೈಸೂರು- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಕಲ್‌ಬೆಟ್ಟದ ಬಳಿಯಲ್ಲಿ ಸೋಮವಾರ ಮಧ್ಯರಾತ್ರಿ ಘಟನೆ ಸಂಭವಿಸಿದ್ದು, ಕೆ.ಆರ್‌. ನಗರದ ಮಹಮ್ಮದ್‌ ಇಲ್ಯಾಸರಿಗೆ ಸೇರಿದ ಲಾರಿ ಇದಾಗಿದೆ. ಚಾಲಕ ಅದೇ ಊರಿನ ಮಹಮ್ಮದ್‌ ವಾಸಿಂ ಸಣ್ಣಪುಟ್ಟಗಾಯಗಳೊಂದಿಗೆ ಬದುಕುಳಿದಿದ್ದಾರೆ. ಲಾರಿ ಸಂಪೂರ್ಣ ಹಾನಿಯಾಗಿದೆ.

ಹೋಂ ಕ್ವಾರಂಟೈನ್‌ನಲ್ಲಿದ್ದ ತಾಯಿ, ಮಗಳಿಗೆ ಸೋಂಕು

ಪಿರಿಯಾಪಟ್ಟಣದಲ್ಲಿ ಕಾಫಿ ಬೂಸಾ ಮೂಟೆ ಅನ್‌ಲೋಡ್‌ ಮಾಡಿ ಹುಣಸೂರು ಮಾರ್ಗವಾಗಿ ಕೆ.ಆರ್‌. ನಗರಕ್ಕೆ ವಾಪಾಸಾಗುವ ವೇಳೆ ಕಲ್‌ಬೆಟ್ಟಅರಣ್ಯದೆದುರಿನ ಹೆದ್ದಾರಿಯಲ್ಲಿ ಎದುರಿನಿಂದ ಬಂದ ವಾಹನದ ಪ್ರಖರ ಬೆಳಕಿಗೆ ವಿಚಲಿತಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಹನ್ನೆರಡು ಚಕ್ರಗಳುಳ್ಳ ದೊಡ್ಡ ಲಾರಿ ಕಾಲುವೆ ಕಡೆಗೆ ನುಗ್ಗುತ್ತಿರುವುದನ್ನು ಗಮನಿಸಿ ತಕ್ಷಣವೇ ಲಾರಿಯಿಂದ ಧುಮುಕಿ, ಪ್ರಾಣಪಾಯದಿಂದ ಪಾರಾಗಿದ್ದಾನೆ.

ಚಾಲಕ ಮಹಮ್ಮದ್‌ ವಾಸಿಂ ಮಾಲೀಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಡಿವೈಎಸ್ಪಿ ಸುಂದರ್‌ರಾಜ್, ಎಸ್‌ಐ ಶಿವಪ್ರಕಾಶ್‌ ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಎರಡು ಕ್ರೇನ್‌ ಕರೆಸಿ ಮೇಲೆತ್ತುವ ಪ್ರಯತ್ನ ವಿಫಲವಾಗಿದ್ದು, ದೊಡ್ಡ ಕ್ರೇನ್‌ ಬರಬೇಕಿದೆ ಎಂದು ಎಸ್‌ಐ ತಿಳಿಸಿದ್ದಾರೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.