ಹೋಂ ಕ್ವಾರಂಟೈನ್‌ನಲ್ಲಿದ್ದ ತಾಯಿ ಮತ್ತು ಗರ್ಭಿಣಿಯಾಗಿದ್ದ ಮಗಳಿಗೂ ಕೊರೋನಾ ಸೋಂಕು ತಗುಲಿದ್ದು, ರಾಮಕಷ್ಣನಗರ ಜಿ.ಬ್ಲಾಕ್‌ನ 7ನೇ ಕ್ರಾಸ್‌ ಅನ್ನು ಈಗ ಸೀಲ್ಡೌನ್‌ ಮಾಡಲಾಗಿದೆ.

ಮೈಸೂರು(ಜೂ.04): ಹೋಂ ಕ್ವಾರಂಟೈನ್‌ನಲ್ಲಿದ್ದ ತಾಯಿ ಮತ್ತು ಗರ್ಭಿಣಿಯಾಗಿದ್ದ ಮಗಳಿಗೂ ಕೊರೋನಾ ಸೋಂಕು ತಗುಲಿದ್ದು, ರಾಮಕಷ್ಣನಗರ ಜಿ.ಬ್ಲಾಕ್‌ನ 7ನೇ ಕ್ರಾಸ್‌ ಅನ್ನು ಈಗ ಸೀಲ್ಡೌನ್‌ ಮಾಡಲಾಗಿದೆ.

ಮೂಲತಃ ಮೈಸೂರಿನ ರಾಮಕೃಷ್ಣನಗರದ ‘ಜಿ’ ಬ್ಲಾಕ್‌ 7ನೇ ಕ್ರಾಸ್‌ ನಿವಾಸಿ ತಾಯಿ(50 ವರ್ಷ) ಮತ್ತು ಆರು ತಿಂಗಳ ಗರ್ಭಿಣಿ ಮಗಳಲ್ಲಿ (27 ವರ್ಷ) ಕರೋನಾ ಸೋಂಕು ಪತ್ತೆಯಾಗಿದೆ. ತಾಯಿ-ಮಗಳಿಬ್ಬರೂ ಹೋಮ್ ಕ್ವಾರಂಟೈನ್‌ನಲ್ಲಿದ್ದ ಕಾರಣ ಅಕ್ಕಪಕ್ಕದ ನಿವಾಸಿಗಳಿಗೆ ಯಾವುದೇ ಆತಂಕವಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಜಿ ಬ್ಲಾಕ್‌ನ 7ನೇ ಕ್ರಾಸ್‌ ಅನ್ನು ಅನ್ನು ಸೀಲ್‌ಡೌನ್‌ ಮಾಡಿ, ಕಂಟೈನ್ಮೆಂಟ್‌ ಝೋನ್‌ ಎಂದು ಗುರುತಿಸಲಾಗಿದೆ.

ಬಿಎಸ್‌ವೈ ರಾಜಾಹುಲಿ ಎಂದು ಸಿದ್ದುಗೆ ಆಶೋಕ್‌ ಟಾಂಗ್‌!

ರಾಮಕೃಷ್ಣನಗರದ ಜಿ ಬ್ಲಾಕ್‌ ನಿವಾಸಿ ದಂಪತಿ ಮಗಳು ಹಾಗೂ ಅಳಿಯ ಮಹಾರಾಷ್ಟ್ರದ ಥಾಣೆಯಲ್ಲಿ ನೆಲೆಸಿದ್ದರು. ಮಗಳು ಗರ್ಭಿಣಿಯಾದ ಹಿನ್ನೆಲೆಯಲ್ಲಿ ತವರು ಮನೆಗೆ ಕರೆತರಲು ಲಾಕ್‌ಡೌನ್‌ಗೂ ಮುನ್ನ ಮೈಸೂರಿಂದ ತಾಯಿ ಮಹಾರಾಷ್ಟ್ರಕ್ಕೆ ತೆರಳಿದ್ದರು. ಲಾಕ್‌ಡೌನ್‌ ನಿಯಮ ಸಡಿಲಿಕೆಯಿಂದಾಗಿ ಅನುಮತಿ ಪಡೆದು ಮೇ 31ರಂದು ಸಂಜೆ ಮಹಾರಾಷ್ಟ್ರದಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು.

ನಿಯಮಾನುಸಾರ ವಿಮಾನದಲ್ಲಿ ಬಂದ ಎಲ್ಲರನ್ನೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ, ಕೋವಿಡ್‌ ನಿಯಮದಲ್ಲಿ ಗರ್ಭಿಣಿಯರಿಗೆ ಹೋಮ್ ಕ್ವಾರಂಟೈನ್‌ನಲ್ಲಿಡಲು ವಿನಾಯಿತಿ ನೀಡಿದ್ದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿನ ನಿವಾಸಕ್ಕೆ ಹೋಗಲು ಅನುಮತಿ ನೀಡಲಾಗಿತ್ತು.

ಕಾಂಗ್ರೆಸ್‌ ಶಾಸಕರ ಉಳಿಸಿಕೊಳ್ಳದ ಸಿದ್ದರಾಮಯ್ಯ ಜತೆ ಯಾರು ಹೋಗ್ತಾರೆ?: ಈಶ್ವರಪ್ಪ

ಅಲ್ಲದೆ ಅನುಮಾನ ಬಂದವರಿಂದ ಸ್ವ್ಯಾಬ್ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ತಾಯಿ ಮತ್ತು ಗರ್ಭಿಣಿಯನ್ನು ಮೈಸೂರಿಗೆ ಕಳುಹಿಸಿದ್ದರೆ, ಅಳಿಯನನ್ನು ಬೆಂಗಳೂರಲ್ಲೇ ಕ್ವಾರಂಟೈನ್‌ ಕೇಂದ್ರದಲ್ಲಿಡಲಾಗಿತ್ತು. ಭಾನುವಾರ ಸಂಜೆ ಸಂಗ್ರಹಿಸಿದ್ದ ಸ್ವ್ಯಾಬ್ ಸ್ಯಾಂಪಲ್ ಪರೀಕ್ಷಾ ವರದಿ ಕಳೆದ ರಾತ್ರಿ ಬಂದಿದ್ದು, ತಾಯಿ, ಮಗಳು ಹಾಗೂ ಅಳಿಯ ಮೂವರಲ್ಲೂ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜಿಲ್ಲಾಡಳಿತ ಮೈಸೂರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ರಾಮಕೃಷ್ಣನಗರದ ಜಿ ಬ್ಲಾಕ್‌ 7ನೇ ಕ್ರಾಸ್‌ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದ ತಾಯಿ ಹಾಗೂ ಆಕೆ ಮಗಳನ್ನು ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಬೆಂಗಳೂರಿಂದ ತಾಯಿ ಮತ್ತು ಮಗಳನ್ನು ಮೈಸೂರಿಗೆ ಕರೆತಂದ ಟ್ಯಾಕ್ಸಿ ಚಾಲಕನನ್ನೂ ಸಂಪರ್ಕಿಸಿ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ. ರಾಮಕೃಷ್ಣನಗರದ ಮನೆಯಲ್ಲಿ ಗರ್ಭಿಣಿಯ ತಂದೆಗೂ ಮನೆಯಲ್ಲಿಯೇ 14 ದಿನ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ.

ಪ್ರತ್ಯೇಕವಾಗಿದ್ದರು:

ಮಹಾರಾಷ್ಟ್ರದಿಂದ ಮೈಸೂರಿಗೆ ಬಂದ ತಾಯಿ ಮಗಳು ಭಾನುವಾರ ರಾತ್ರಿಯಿಂದ ಮೇಲ್ಮಹಡಿಯಲ್ಲಿರುವ ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುತ್ತಿದ್ದರು. ನೆಲಮಹಡಿಯಲ್ಲಿರುವ ತಂದೆಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಮಹಾರಾಷ್ಟ್ರದಲ್ಲಿ ಸೋಂಕು ವ್ಯಾಪಿಸಿರುವುದರಿಂದ ನಿಮಗೂ ಸೋಂಕು ತಗುಲಿರುವ ಶಂಕೆ ಇದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ತಾಯಿ ಮತ್ತು ಮಗಳಿಗೆ ವಿಮಾನ ನಿಲ್ದಾಣದಲ್ಲಿಯೇ ಆರೋಗ್ಯ ಸಿಬ್ಬಂದಿ ಎಚ್ಚರಿಸಿದ್ದರು. ಆದ್ದರಿಂದ ಷರತ್ತಿಗೆ ಒಪ್ಪಿದ್ದಲ್ಲದೆ, ಪ್ರತ್ಯೇಕವಾಗಿರುವ ಮೂಲಕ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಿದ್ದರು.

ಜಿಲ್ಲೆಯಲ್ಲಿ 866 ಮಂದಿ ಕ್ವಾರಂಟೈನ್‌:

ಕೋವಿಡ್‌-19 ಸಂಬಂಧ ಜಿಲ್ಲೆಯಲ್ಲಿ ಬುಧವಾರದವರೆಗೆ ಒಟ್ಟು 6441 ಜನರ ಮೇಲೆ ನಿಗಾ ವಹಿಸಲಾಗಿದ್ದು, ಇದರಲ್ಲಿ 5569 ಮಂದಿ 14 ದಿನಗಳ ಐಸೋಲೇಶನ್‌ ಮುಗಿಸಿದ್ದಾರೆ. ಇನ್ನೂ 866 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

866 ಮಂದಿಯ ಪೈಕಿ 729 ಮಂದಿಯನ್ನು 14 ದಿನಗಳ ಹೋಂ ಐಸೋಲೇಶನ್‌ನಲ್ಲಿ ಇರಿಸಲಾಗಿದೆ. ಉಳಿದ 137 ಮಂದಿಯನ್ನು 7 ದಿನಗಳ ಫೆಸಿಲಿಟಿ ಕ್ವಾರಂಟೈನ್‌ ಇರಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೂ 98 ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಇದರಲ್ಲಿ 92 ಮಂದಿ ಗುಣಮುಖರಾಗಿದ್ದು, 6 ಮಂದಿಗೆ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಈವರೆಗೂ 9734 ಜನರ ಸ್ಯಾಂಪಲ್‌ ಪರೀಕ್ಷಿಸಲಾಗಿದ್ದು, ಇದರಲ್ಲಿ 9636 ಜನರದ್ದು ನೆಗೆಟಿವ್‌ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಕೊರೋನಾ

ಸೋಂಕಿತರು- 98

ಗುಣಮುಖ- 92

ಸಕ್ರಿಯ- 6