ಕೋಲಾರ(ಮೇ 16): ಲಾಕ್‌ಡೌನ್‌ ಸಡಿಲಗೊಳಿಸುವ ಮೂಲಕ ರಾಜ್ಯ ಸರ್ಕಾರವು ಹಸಿರು ವಲಯದಲ್ಲಿದ್ದ ಕೋಲಾರ ಜಿಲ್ಲೆಯಲ್ಲಿ ಕೊರೋನಾ ತಂದು ಬಿಟ್ಟಿದ್ದು ಜಿಲ್ಲೆಯ ಜನತೆ ಭಯಭೀತರಾಗಿದ್ದಾರೆ ಎಂದು ಶಾಸಕ ನಂಜೇಗೌಡ ಹೇಳಿದರು.

ಅವರು ಮಾಲೂರು ಪಟ್ಟಣದ ಶ್ರೀ ಶಂಕರನಾರಾಯಣಸ್ವಾಮಿ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಮುಜರಾಯಿ ದೇವಾಲಯ ಅರ್ಚಕರಿಗೆ ದಿನಸಿ ಕಿಟ್‌ ವಿತರಣೆ ಕಾರ‍್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಡನೆ ಮಾತನಾಡುತ್ತಿದ್ದರು. ಸರ್ಕಾರದ ಅವಸರದ ಲಾಕ್‌ ಡೌನ್‌ ಸಡಿಲಿಕೆಯಿಂದ ಜಿಲ್ಲೆ ಆತಂಕಕ್ಕೆ ಒಳಗಾಗಿದೆ ಎಂದ ಶಾಸಕರು, ಲಾಕ್‌ ಡೌನ್‌ ಇನ್ನಷ್ಟುದಿನ ಮುಂದುವರೆಯಬೇಕಾಗಿತ್ತು ಎಂದರು.

ದಿನವೂ ಕಾರ್ಮಿಕರ ಜಾತ್ರೆ

ಇದಲ್ಲದೇ ರಾಜ್ಯ ಸರ್ಕಾರದ ಆದೇಶದಿಂದ ಪ್ರತಿನಿತ್ಯ ಐದಾರು ಸಾವಿರ ವಲಸೆ ಕಾರ್ಮಿಕರನ್ನು ಇಲ್ಲಿಂದ ರೈಲಿನ ಮೂಲಕ ಕಳುಹಿಸಲಾಗುತ್ತಿದೆ. ಇದು ಪಟ್ಟಣದ ಜನತೆಯಲ್ಲಿ ಆತಂಕ ಮೂಡಿಸಿದೆ. ರೈಲಿನಲ್ಲಿ ತೆರಳಲು ಬರುವ ಕಾರ್ಮಿಕರ ಬಸ್‌ಗಳನ್ನು ಸಾಲಾಗಿ ಪಟ್ಟಣ ಪ್ರವೇಶದಲ್ಲಿ ನಿಲ್ಲಿಸುತ್ತಿದ್ದು, ಅದರಿಂದ ಕೆಳಗೆ ಇಳಿಯುವ ಕಾರ್ಮಿಕರಿಂದಾಗಿ ಈ ಜಾಗವು ಕಾರ್ಮಿಕರ ಜಾತ್ರೆಯಂತಾಗುತ್ತಿದೆ ಎಂದರು.

'ಪ್ರಧಾನಿ ಮೋದಿ ಆಶ್ವಾಸನೆ ಬರೀ ಸುಳ್ಳು, ಯಾವುದೂ ಈಡೇರಿಲ್ಲ'..!

ವಸತಿ ವಲಯ ಇಲ್ಲದ ದೇವನಗೂಂದಿ ರೈಲ್ವೆ ನಿಲ್ದಾಣ ಇದ್ದರೂ ನಮ್ಮಲ್ಲಿಗೆ ಏಕೆ ಕರೆ ತರುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದ ಶಾಸಕರು, ಈ ಬಗ್ಗೆ ನಿರ್ಣಯ ಕೈಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಾಧ್ಯ ಇಲ್ಲದ ಕಾರಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೂಲಕ ಮುಖ್ಯ ಕಾರ‍್ಯದರ್ಶಿಗಳಿಗೆ ಈ ಬಗ್ಗೆ ಮನವಿ ಮಾಡಲಾಗಿದೆ ಎಂದರು.

ರೈತರ ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರ್‌ಗೆ 15 ಸಾವಿರ ನೀಡುತ್ತಿರುವುದು ಯಾವುದಕ್ಕೂ ಸಾಕಾಗುವುದಿಲ್ಲ ಎಂದ ನಂಜೇಗೌಡ ಅವರು, ಒಂದು ವೇಳೆ ರೈತರಿಗೆ ಸ್ಪಂದಿಸುವ ಮನಸ್ಸು ರಾಜ್ಯ ಸರ್ಕಾರಕ್ಕೆ ಇದ್ದರೆ ಬೆಳೆ ಸಾಲ ಪಡೆದು ಕೊರೋನಾದಿಂದ ಬೆಳೆ ಮಾರಾಟ ಮಾಡಲು ಆಗದೆ ನಷ್ಟಅನುಭವಿಸುತ್ತಿರುವ ರೈತರ ಬೆಳೆ ಸಾಲವನ್ನು ಮನ್ನಾ ಮಾಡಲಿ ಎಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿ ವಾಹನ ಕಳೆದುಕೊಂಡವರಿಗೆ ಗುಡ್‌ ನ್ಯೂಸ್..!

ಕಾಂಗ್ರೆಸ್‌ನ ಶಾಸಕರು ತಮ್ಮ ಕ್ಷೇತ್ರದಲ್ಲಿ ರೈತರ, ಶ್ರಮಿಕರ ಸಹಾಯಕ್ಕೆ ನಿಂತಿದ್ದಾರೆ. ಮಾಲೂರು ತಾಲೂಕಿನಲ್ಲಿ 56 ಸಾವಿರ ಕುಟುಂಬಗಳಿಗೆ ಪಕ್ಷದ ವತಿಯಿಂದ ದಿನಸಿ ಕಿಟ್‌ ನೀಡಲಾಗಿದೆ ಎಂದರು. ಕೆಪಿಸಿಸಿ ಉಪಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ್‌, ವಿಜಯಾನಾರಸಿಂಹ, ನವೀನ್‌, ಹರೀಶ್‌, ಶಬ್ಬೀರ್‌, ನವೀನ್‌ ಇದ್ದರು.