ಕೋಲಾರ (ಮೇ.31):  ಕೋಲಾರ ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್‌ಗೂ ಕೊರೋನಾ ಸೋಂಕು ಜಗ್ಗುತ್ತಿಲ್ಲ, ಸರಣಿಯಂತೆ ಆಗುತ್ತಿರುವ ಸಾವುಗಳೂ ನಿಲ್ಲುತ್ತಿಲ್ಲ.

ಜಿಲ್ಲೆಯಲ್ಲಿ ಎರಡನೇ ಹಂತದ ಲಾಕ್‌ಡೌನ್‌ ಕೂಡಾ ಭಾನುವಾರ ಅಂತ್ಯಗೊಂಡಿದೆ. ಆದರೆ ಸೋಂಕು ಹರಡುತ್ತಲೇ ಇದೆ. ಸೋಂಕಿನ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ತಗ್ಗದ ಕಾರಣ ಕಠಿಣ ಲಾಕ್‌ಡೌನ್‌ನ್ನು ಮತ್ತೇ ಮುಂದುವರೆಸುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಇದುವರೆಗೆ 38 ಸಾವಿರ ಮಂದಿಗೆ ಕೊರೋನಾ ಹಬ್ಬಿದ್ದು ಸೋಂಕಿಗೆ 376 ಮಂದಿ ಮೃತಪಟ್ಟಿದ್ದಾರೆ. 7400 ಮಂದಿ ಸಕ್ರಿಯ ಪ್ರಕರಣಗಳಿವೆ. ಸೋಂಕಿನ ಶೇಕಡವಾರು ಪ್ರಮಾಣ ಶನಿವಾರ 32.72 ರಷ್ಟಿತ್ತು. ಸೋಂಕಿನ ಶೇಕಡವಾರು ಪ್ರಮಾಣದಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ.

ಟೊಮ್ಯಾಟೊ ಮಣ್ಣುಪಾಲು: ಸರ್ಕಾರದ ಪರಿಹಾರ ಅರೆಕಾಸಿನ ಮಜ್ಜೆಗೆ ಎಂದ ಅನ್ನದಾತ

ಮತ್ತೆ ಲಾಕ್‌ಡೌನ್‌ ಅನಿವಾರ್ಯತೆ? :  ಜನತಾ ಕಫ್ರ್ಯೂ, ಸೆಮಿ ಲಾಕ್‌ಡೌನ್‌ ಹಾಗು ಎರಡು ಬಾರಿ ಕಠಿಣ ಲಾಕ್‌ಡೌನ್‌ಗೂ ಸೋಂಕು ಜಗ್ಗುತ್ತಿಲ್ಲ. ಮತ್ತೊಂದು ಜಿಲ್ಲಾ ಮಟ್ಟದ ಸಂಪೂರ್ಣ ಲಾಕ್‌ಡೌನ್‌ ಮಾಡುವ ಅನಿವಾರ್ಯತೆ ಉಂಟಾಗಿದೆ. ಜಿಲ್ಲೆಯಲ್ಲಿ ಇವತ್ತಿಗೂ ಸೋಂಕಿತರ ಸಂಖ್ಯೆ 680 ಕ್ಕೂ ಹೆಚ್ಚು ಸಂಖ್ಯೆಯಲ್ಲಿದೆ.

ಜಿಲ್ಲೆಯಲ್ಲಿ ಹೆಚ್ಚಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಹರಡುತ್ತಿರುವುದರಿಂದ ಹಿಡಿತಕ್ಕೆ ಸಿಗುತ್ತಿಲ್ಲ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಸೋಂಕಿತರು ಕಂಡು ಬಂದಿದ್ದು ಸೋಂಕು ಇಂತಹ ಗ್ರಾಮದಲ್ಲಿ ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.

ಗ್ರಾಮಗಳಲ್ಲಿ ನಿಯಮ ಉಲ್ಲಂಘನೆ :  ಹಳ್ಳಿಗಳಲ್ಲಿ ಅಂಗಡಿಗಳು ತೆರೆದು ವಹಿವಾಟು ನಡೆಸುತ್ತಿವೆ, ಹಳ್ಳಿ ಜನ ಮಾಸ್ಕ್‌ ಧರಿಸದೆ, ದೈಹಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ಸ್ಯಾನಿಟೈಸರ್‌ ಬಳಕೆ ಮಾಡಿಕೊಳ್ಳದೆ ಇರುವುದು ಮತ್ತು ಹಳ್ಳಿ ಮಟ್ಟದ ಸಭೆ ಸಮಾರಂಭ, ಮದುವೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ಬಿಗಿ ಕ್ರಮವನ್ನು ಅನುಸರಿಸದೆ ಇರುವುದರಿಂದ ಸೋಂಕನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಕೋವಿಡ್‌ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುತ್ತಿಲ್ಲ. ಇದರಿಂದಾಗಿ ಮೃತರ ಸಂಖ್ಯೆಯೂ ಹೆಚ್ಚಿದೆ.

ಕೋಲಾರದಲ್ಲಿ ತಗ್ಗದ ಸೋಂಕು :  ಇಡೀ ರಾಜ್ಯದಲ್ಲಿಯೇ ಹೆಚ್ಚಿಗೆ ಹರಡಿದ್ದು ಬೆಂಗಳೂರಿನಲ್ಲಿ, ಬೆಂಗಳೂರು ಜನತಾ ಕಫ್ರ್ಯೂ ಮತ್ತು ಲಾಕ್‌ಡೌನ್‌ಗೆ ಒಳಗಾದ ನಂತರ ಬೆಂಗಳೂರಿನಲ್ಲಿ ವಾಸವಿದ್ದ ಜಿಲ್ಲೆಯ ಸಾವಿರಾರು ಮಂದಿ ಅಲ್ಲಿಂದ ಕೋಲಾರ ಜಿಲ್ಲೆಗೆ ಬಂದರು, ಅಲ್ಲದೆ ಯುಗಾದಿ ಹಬ್ಬದ ವೇಳೆ ಹಬ್ಬ ಆಚರಣೆಗಾಗಿ ಜಿಲ್ಲೆಗೆ ಬಂದವರಿಂದಲೂ ಸೋಂಕು ಹರಡಿತ್ತು.ಇದರಿಂದಾಗಿ ಬೆಂಗಳೂರಿನಲ್ಲಿ ಸೋಂಕು ತಗ್ಗಿದರೂ ಕೋಲಾರದಲ್ಲಿ ತಗ್ಗುತ್ತಿಲ್ಲ.

ಈ ನಡುವೆ ಜನತಾ ಕಫ್ರ್ಯೂ ವಿಫಲವಾದ ಹಿನ್ನೆಲೆಯಲ್ಲಿಯೂ ಜಿಲ್ಲೆಯಲ್ಲಿ ಸೋಂಕಿನ ವೇಗ ಏರಲು ಸಾಧ್ಯವಾಗಿತ್ತು.ಜಿಲ್ಲೆಯಲ್ಲಿ ಸಧ್ಯ ಜಾರಿಗೆ ತಂದಿರುವ ಕಠಿಣ ಲಾಕ್‌ಡೌನ್‌ನಿಂದ ಸ್ವಲ್ಪ ಇಳಿಕೆ ಕಂಡಿದೆಯಾದರೂ ಸಾವಿನ ಸಂಖ್ಯೆ ಇಳಿಮುಖವಾಗಿಲ್ಲ.

ಬ್ಲ್ಯಾಕ್‌ ಫಂಗಸ್‌ ಆತಂಕ:  ಈ ನಡುವೆ ಬ್ಲಾಕ್‌ ಫಂಗಸ್‌ ಆತಂಕವೂ ಹೆಚ್ಚಿದೆ, ಇತ್ತೀಚೆಗೆ ಜಿಲ್ಲೆಯಲ್ಲಿ 30 ಮಂದಿ ಬ್ಲಾಕ್‌ ಫಂಗಸ್‌ಗೆ ಒಳಗಾಗಿರುವುದು ಮತ್ತಷ್ಟುಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ನಿಂದ ಕೊರೋನಾ ಸೋಂಕಿನ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದೆಯಾದರೂ ಇನ್ನೂ ತಗ್ಗಬೇಕಾಗಿದೆ. ಇದರಿಂದಾಗಿ ಇನ್ನೂ ಎರಡು ಮೂರು ದಿವಸ ನೋಡಿಕೊಂಡು ಅಗತ್ಯ ಬಿದ್ದರೆ ಮತ್ತೆ ಕೆಲವು ದಿನಗಳ ಮಟ್ಟಿಗೆ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುವುದು. ಜನರು ತಮ್ಮ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗುವುದು. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟುಇಳಿಯಬೇಕಾಗಿದೆ. ಇದನ್ನೆಲ್ಲಾ ನೋಡಿಕೊಂಡು ಲಾಕ್‌ಡೌನ್‌ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು.

ಡಾ.ಸೆಲ್ವಮಣಿ, ಜಿಲ್ಲಾಧಿಕಾರಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona