ದೇಶ, ಸಮಾಜದ ಅಭಿವೃದ್ಧಿಗೆ ಅಕ್ಷರಜ್ಞಾನ ಪೂರಕ
ವಿದ್ಯಾರ್ಥಿಗಳು ಓದುವ, ಬರೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ದೇಶದ ಪ್ರಗತಿಗೆ, ಸಮಾಜದ ಅಭಿವೃದ್ಧಿಗೆ ಅಕ್ಷರ ಜ್ಞಾನ ಪೂರಕವಾಗಿರಲಿ. ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು ಗುಣಾತ್ಮಕ ಶಿಕ್ಷಣ ಕೊಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಕರೆ ನೀಡಿದರು.
ಮಧುಗಿರಿ : ವಿದ್ಯಾರ್ಥಿಗಳು ಓದುವ, ಬರೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ದೇಶದ ಪ್ರಗತಿಗೆ, ಸಮಾಜದ ಅಭಿವೃದ್ಧಿಗೆ ಅಕ್ಷರ ಜ್ಞಾನ ಪೂರಕವಾಗಿರಲಿ. ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು ಗುಣಾತ್ಮಕ ಶಿಕ್ಷಣ ಕೊಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಕರೆ ನೀಡಿದರು.
ಭಾನುವಾರ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ವೀರಶೈವ ವಿದ್ಯಾರ್ಥಿ ನಿಲಯ, ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ, ವೀರಶೈವ ಲಿಂಗಾಯತ ಸೇವಾ ಟ್ರಸ್ಟ್ ಹಾಗೂ ಅಕ್ಕಮಹಾದೇವಿ ಸಮಾಜದ ವತಿಯಿಂದ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನ ಬಸವಣ್ಣರವರ ಕಾಯಕ ತತ್ವಕ್ಕೆ ಪ್ರಾಧಾನ್ಯ ನೀಡಿತ್ತು. ಆದರೆ ಇಂದು ಬಸವಣ್ಣನವರ ಆದರ್ಶ -ತತ್ವಗಳನ್ನು ಫಾಲಿಸದಿರುವುದು ವಿಷಾದದ ಸಂಗತಿ, ಅವರು ಹೇಳಿದಂತೆ ಇಂದಿನ ಸಮಾಜದಲ್ಲಿ ನಾವು ಬಾಳಿ ತೋರಿಸಬೇಕಿದೆ. ಶ್ರಮವಿಲ್ಲದೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಾಗದು. ಏಕಾಗ್ರತೆ, ಅಧ್ಯಯನ ಶೀಲತೆ ಗುರು -ಹಿರಿಯಿರಿಗೆ ಗೌರವ ಭಾವವನ್ನು ತಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬೇಕು. ನವ ಸಮಾಜ ನಿರ್ಮಾಣ ಯುವ ಜನಾಂಗದಿಂದ ಮಾತ್ರ ಸಾಧ್ಯ ಎಂದರು.
ಸಮುದಾಯದ ಹಾಸ್ಟೆಲ್ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಸಂಸದ ಜಿ.ಎಸ್. ಬಸವರಾಜು ಸಮುದಾಯದ ಏಳಿಗೆಗೆ ಸಹಕಾರ ನೀಡಲಿದ್ದು. ಸಿದ್ದರಬೆಟ್ಟ ಕ್ಷೇತ್ರದ ಕೀರ್ತಿ ನಾಡಿನಾದ್ಯಂತ ಹರಡುತ್ತಿದ್ದು ಕ್ಷೇತ್ರದ ಪ್ರಗತಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಸಹಕಾರ ನೀಡಿ ಸಮುದಾಯದ ಏಳಿಗೆಗೆ ಪ್ರೋತ್ಸಾಹಿಸಬೇಕು. ಎಲ್ಲರ ಸಹಕಾರದಿಂದ ಒಂದು ಬಲಿಷ್ಠ ಸಮಾಜ ಕಟ್ಟಲು ಸಾಧ್ಯ ಎಂದರು.
ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀಕ್ಷೇತ್ರ ಸಿದ್ಧರಬೆಟ್ಟದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕು. ಮಕ್ಕಳು ಪ್ರತಿದಿನ ಪೋಷಕರ ಚಟುವಟಿಕೆಗಳನ್ನು ಗಮನಿಸುತ್ತಾರೆ. ಉದ್ಯೋಗ ಕೇವಲ ಹಣ ಗಳಿಸಲಷ್ಠೇ ಸೀಮಿತವಾಗಬಾರದು. ಆಚಾರ-ವಿಚಾರ,ಶಿವಪೂಜೆ, ಲಿಂಗ ಧಾರಣೆ, ಭಸ್ಮಧಾರಣೆ ಜೊತೆಗೆ ನವು ಹೇಳಿದ್ದನ್ನು, ನೋಡಿದ್ದನ್ನು ಹೆಚ್ಚು ಅಳವಡಿಸಿಕೊಳ್ಳುತ್ತಾರೆ. ಆದ ಕಾರಣ ನಮ್ಮ ಭಾರತೀಯ ಸನಾತನ ಸಂಸ್ಕೃತಿ ಮರೆಯದೇ ಸಂಸ್ಕಾರವಂತರಾಗಬೇಕು. ಸಂಸ್ಕಾರದಿಂದ ಮಕ್ಕಳು ವಂಚಿತರಾದರೇ ಪೋಷಕರು ಕೂಡಿಟ್ಟ ಆಸ್ತಿ ಸಾಕಾಗುವುದಿಲ್ಲ, ಆದ್ದರಿಂದ ಪೋಷಕರು ಆಚಾರವಂತರಾದರೆ ಮಾತ್ರ ಮಕ್ಕಳು ಸಂಸ್ಕಾರವಂತರಾಗುತ್ತರೆ. ಶಿಕ್ಷಣಕ್ಕೆ ಉತ್ತೇಜನ ನೀಡಿದರೆ ಉತ್ತಮ ಪರಿಸರ ನಿರ್ಮಾಣವಾಗಲಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಬದ್ಧತೆ ಇರುವ ರಾಜಕಾರಣಿ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ ಮಾತನಾಡಿ, ಕ್ಷೇತ್ರದ ಜನತೆ ಕೆ.ಎನ್. ರಾಜಣ್ಣ ಅವರ ಅವಧಿಯಲ್ಲಿ ಕ್ಷೇತ್ರ ಸಮಗ್ರ ಅಭಿವೃದ್ಧಿಯಾಗಲಿದೆ. ಸಸ್ಯಕಾಶಿ ಸಿದ್ದರೆಟ್ಟ, ಗೊರವನಹಳ್ಳಿ ಲಕ್ಷ್ಮೀ ದೇಗುಲ ಸಮಗ್ರವಾಗಿ ಅಭಿವೃದ್ಧಿಯಾದರೆ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಕೆ ಯೋಜನೆ ಪ್ರಾರಂಭವಾದರೆ ಮಧುಗಿರಿ ಪ್ರವಾಸೋಧ್ಯಮಕ್ಕೆ ಪುಷ್ಟಿ ಬರಲಿದೆ ಎಂದರು.
ವೀರಶೈವ ಲಿಂಗಾಯಿತ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಎನ್. ಚಂದ್ರಮೌಳಿ ಮಾತನಾಡಿ,ಎಂಎಲ್ಸಿ ಆರ್. ರಾಜೇಂದ್ರ ಅವರು 5 ಲಕ್ಷ ರು. ವೆಚ್ಚದ ನೂತನ ಕೊಠಡಿ ನಿರ್ಮಿಸಿ ಕೊಟ್ಟಿದ್ದಾರೆ.ಈ ಹಿಂದೆ ಮೂರು ಕೊಠಡಿಗಳನ್ನು ಕೆ.ಎನ್ .ರಾಜಣ್ಣರವರು ನಿರ್ಮಿಸುವುದರ ಜೊತೆಯಲ್ಲಿ ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ .ಹಾಸ್ಟೆಲ್‌ನ ಸರ್ವತೋಮುಖ ಅಭಿವೃದ್ಧಿಗಾಗಿ 50 ಲಕ್ಷ ರು. ಅನುದಾನ ಹಾಗೂ ರುದ್ರಭೂಮಿ ಮಂಜೂರು ಮಾಡಿಸಿ ಕೊಡುವಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣನವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಅಧ್ಯಕ್ಷ .ಶಿವಾನಂದ್, ಬಿ.ಎಚ್. ಪಂಚಾಕ್ಷರಯ್ಯ, ಎಸ್,ರೇಣುಕಾಪ್ರಸಾದ್,ಎಂ.ಬಿ. ಮರಿಬಸಪ್ಪ,ಡಾ. ಸೋಮಶೇಖರ್, ಅಂಜಿನಪ್ಪ,ಎಸ್.ತೋಟದಪ್ಪ,ಎಂ.ವಿ. ರುದ್ರಾರಾಧ್ಯ,ಚಂದ್ರಶೇಖರ್, ಹೊಸಳ್ಳಯ್ಯ, ದೀಪಮಹೇಶ್,ರಂಗರಾಜು,ಎಂ.ಬಿ.ಮಹೇಶ್, ಫರ್ನಿಚರ್ ಮಂಜುನಾಥ್, ಎಂ.ಎನ್.ನಟರಾಜು, ಬಸವರಾಜು ಸಿದ್ದೇಶ್, ಆರ್.ಎಸ್.ಆರಾಧ್ಯ,ನಾಗಾರಜು .ದಾಕ್ಷಾಯಣಿ, ಗೀತಾ ನಾಗರಾಜು ಸೇರಿದಂತೆ ಸಮುದಾಯದ ಮುಖಂಡರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಇದ್ದರು.
ಹಾಸ್ಟೆಲ್‌ಗೆ ಮೂಳಭೂತ ಸೌಕರ್ಯ
ಸಮದಾಯದ ಮುಖಂಡರು ಸಂಘಟಿತರಾಗುವ ಮೂಲಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು.ಮುಂದಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರೂಪಿಸುವ ಒಳಗಾಗಿ ಹಾಸ್ಟೆಲ್‌ಗೆ ಅಗತ್ಯವಿರುವ ಸಿಸಿ ರಸ್ತೆ, ಮೇಲ್ಚಾವಣಿ, ಕಾಂಪೌಂಡ್ ನಿರ್ಮಾಣದ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡಿ ಕೊಡುವುದಾಗಿ ರಾಜಣ್ಣ ಭರವಸೆ ನೀಡಿದರು.