Asianet Suvarna News Asianet Suvarna News

ಶಿವಮೊಗ್ಗ: 21ನೇ ಬಾರಿ ಭರ್ತಿಯಾದ ಲಿಂಗನಮಕ್ಕಿ ಡ್ಯಾಂ, ನದಿಪಾತ್ರದ ಜನರಿಗೆ ಆತಂಕ..!

ಗರಿಷ್ಠ 1819 ಅಡಿಗಳಷ್ಟಿರುವ ಜಲಾಶಯದಲ್ಲಿ ನೀರಿನ ಮಟ್ಟ ಶುಕ್ರವಾರ 1815 ಅಡಿಗೆ ತಲುಪಿದ ಹಿನ್ನೆಲೆಯಲ್ಲಿ ಎಲ್ಲ 11 ರೇಡಿಯಲ್ ಗೇಟ್‍ಗಳ ಮೂಲಕ ಸುಮಾರು 40 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ.

Linganamakki dam filled for 21st time at Sagar in Shivamogga grg
Author
First Published Aug 3, 2024, 5:00 AM IST | Last Updated Aug 5, 2024, 4:19 PM IST

ಸಾಗರ(ಆ.03): ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾಗೂ ವಿದ್ಯುತ್ ಉತ್ಪಾದನೆಯ ಉದ್ದೇಶದಿಂದ ನಿರ್ಮಿಸಲಾಗಿರುವ ಲಿಂಗನಮಕ್ಕಿ ಜಲಾಶಯ 21ನೇ ಬಾರಿ ಭರ್ತಿಯಾಗಿದೆ. ಗರಿಷ್ಠ 1819 ಅಡಿಗಳಷ್ಟಿರುವ ಜಲಾಶಯದಲ್ಲಿ ನೀರಿನ ಮಟ್ಟ ಶುಕ್ರವಾರ 1815 ಅಡಿಗೆ ತಲುಪಿದ ಹಿನ್ನೆಲೆಯಲ್ಲಿ ಎಲ್ಲ 11 ರೇಡಿಯಲ್ ಗೇಟ್‍ಗಳ ಮೂಲಕ ಸುಮಾರು 40 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ.

ಗುರುವಾರ ಬೆಳಗ್ಗೆಯೇ ಮೂರು ಗೇಟ್‍ಗಳನ್ನು ತೆರೆದು ಸುಮಾರು 10 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗಿತ್ತು. ಸಂಜೆಯ ಹೊತ್ತಿಗೆ ನೀರಿನ ಒಳಹರಿವಿನ ಪ್ರಮಾಣ ಜಾಸ್ತಿಯಾಗಿದ್ದರಿಂದ 9 ಬಾಗಿಲುಗಳನ್ನು ತೆರೆದು ಸುಮಾರು 18 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಯಿತು. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಜಲಾಶಯಕ್ಕೆ ಸುಮಾರು ಒಂದು ಲಕ್ಷ ಕ್ಯುಸೆಕ್‌ ನೀರು ಹರಿದುಬರುತ್ತಿರುವುದರಿಂದ ಎಲ್ಲ 11 ಗೇಟ್‍ಗಳನ್ನು 3ಅಡಿಗಳಷ್ಟು ತೆರೆದು 40ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಮಳೆ ಮುಂದುವರೆದು ಒಳಹರಿವಿನ ಪ್ರಮಾಣ ಜಾಸ್ತಿಯಾದರೆ ಗೇಟ್‍ಗಳನ್ನು ಇನ್ನಷ್ಟು ಎತ್ತರಿಸಿ ಮತ್ತಷ್ಟು ನೀರನ್ನು ಹೊರಬಿಡಲಾಗುವುದು.

ದಕ್ಷಿಣ ಕನ್ನಡ: 30 ವರ್ಷಗಳ ಬಳಿಕ ಫಲ್ಗುಣಿ ನದಿಯಲ್ಲಿ ಪ್ರವಾಹ ಸ್ಥಿತಿ..!

ವಿದ್ಯುತ್ ಉತ್ಪಾದನೆಯ ಏಕೈಕ ಉದ್ದೇಶದಿಂದ 1964ರಲ್ಲಿ ನಿರ್ಮಿಸಲಾಗಿರುವ ಲಿಂಗನಮಕ್ಕಿ ಜಲಾಶಯ ಇದುವರೆಗೆ 23 ಬಾರಿ ಭರ್ತಿಯಾಗಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿನಿಂದ ವ್ಯಾಪಕ ಮಳೆಯಾಗಿದೆ. ಈ ಕಾರಣದಿಂದ ಜಲಾಶಯ ನಿರೀಕ್ಷೆಗಿಂತ ಮುನ್ನವೇ ಭರ್ತಿಯಾಗಿ ಆಗಸ್ಟ್ ಆರಂಭದಲ್ಲಿಯೇ ಗೇಟ್ ತೆರೆದು ನೀರನ್ನು ಬಿಟ್ಟಿರುವುದು ಇದೇ ಮೊದಲು. 2019ರಲ್ಲಿ ಆಗಸ್ಟ್ ತಿಂಗಳೊಂದರಲ್ಲಿ ಜಲಾಶಯಕ್ಕೆ 104 ಟಿಎಂಸಿ ನೀರು ಹರಿದು ಬಂದಿರುವುದು ಇದುವರೆಗಿನ ದಾಖಲೆಯಾಗಿತ್ತು. ಆ ವರ್ಷ ಆಗಸ್ಟ್ ಎರಡನೇ ವಾರದಲ್ಲಿ ಜಲಾಶಯ ಭರ್ತಿಯಾಗಿ ನದಿಗೆ ನೀರು ಬಿಡಲಾಗಿತ್ತು. ಆದರೆ ಈ ಬಾರಿ ಜಲಾಶಯಕ್ಕೆ ಜುಲೈ ತಿಂಗಳಿನಲ್ಲಿಯೇ 115 ಟಿಎಂಸಿ ನೀರು ಹರಿದುಬಂದು ಹಿಂದಿನ ದಾಖಲೆಯನ್ನು ಮುರಿದಿದೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹುಟ್ಟುವ ಶರಾವತಿ ನದಿ ಹೊಸನಗರ, ಸಾಗರ, ಗೇರುಸೊಪ್ಪ ಮಾರ್ಗವಾಗಿ ಹರಿದು ಹೊನ್ನಾವರದಲ್ಲಿ ಸಮುದ್ರವನ್ನು ಸೇರುತ್ತದೆ. ಈ ನಡುವೆ ನದಿಗೆ ಎರಡು ಅಣೆಕಟ್ಟುಗಳನ್ನು (ಗೇರುಸೊಪ್ಪ ಟೇಲ್‍ರೇಸ್ ಸೇರಿದಂತೆ) ಕಟ್ಟಲಾಗಿದ್ದು, ಈ ಎರಡು ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ಮೂರು ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಯೇ ಹೆಚ್ಚಿನ ಪ್ರಮಾಣದ ವಿದ್ಯುತ್ ಉತಾದನೆಯಾಗುತ್ತದೆ. ಉಳಿದಂತೆ ಚಕ್ರಾ-ಸಾವೆಹಕ್ಲು ಹಾಗೂ ಗೇರುಸೊಪ್ಪ ಟೇಲ್‍ರೇಸ್‍ಗಳಲ್ಲಿ ಕೂಡ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಎಲ್ಲ ಜಲಾಶಯಗಳಿಂದ ಕನಿಷ್ಟ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆಯಾಗುವುದರಿಂದ ಲಿಂಗನಮಕ್ಕಿ ಜಲಾಶಯ ತುಂಬಿದರೆ ಆಳುವ ಸರ್ಕಾರಗಳಿಗೆ, ಜನರಿಗೆ ಎಲ್ಲಿಲ್ಲದೆ ಸಂತೋಷವನ್ನುಂಟುಮಾಡುತ್ತದೆ.

ನದಿಪಾತ್ರದ ಜನರಿಗೆ ಆತಂಕ:

ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿರುವುದು ಒಂದೆಡೆ ಸಂತೋಷದ ಸಂಗತಿಯಾದರೆ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಬಿಡುವುದರಿಂದ ನದಿಪಾತ್ರದ ಜನರಿಗೆ ಆತಂಕದ ಸಂಗತಿಯಾಗಿದೆ. ನದಿ ನೀರು ಸಾಗರದಿಂದ ಹೊನ್ನಾವರದಲ್ಲಿ ಸಮುದ್ರ ಸೇರುವವರೆಗೆ ನದಿಪಾತ್ರದಲ್ಲಿ ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಜಲಾಶಯದಿಂದ ಬಿಡುವ ಅಪಾರ ಪ್ರಮಾಣದ ನೀರಿನಿಂದ ಉಂಟಾಗುವ ಪ್ರವಾಹದಿಂದ ನದಿಪಾತ್ರದ ಜನರ ಮನೆ, ಕೊಟ್ಟಿಗೆ, ಕೃಷಿಭೂಮಿ, ಅಡಕೆ ತೋಟಗಳು ಜಲಾವೃತವಾಗುತ್ತವೆ. ಹಾಗಾಗಿ ಇಲ್ಲಿನ ಜನರು ಕ್ಷಣಕ್ಷಣಕ್ಕೂ ಆತಂಕದಲ್ಲಿ ಕಾಲಕಳೆಯುತ್ತಾರೆ.

ಕರ್ನಾಟಕದಲ್ಲಿ ವರುಣನ ಆರ್ಭಟ: ಡ್ಯಾಂಗಳಿಂದ ಹೆಚ್ಚು ನೀರು ಬಿಡುಗಡೆ, ನದಿಗಳಲ್ಲಿ ಭಾರೀ ಪ್ರವಾಹ..!

ದೀಪದ ಬುಡ ಕತ್ತಲು

ಗಾದೆ ಮಾತಿನಂತೆ ರಾಜ್ಯಕ್ಕೆ ಬೆಳಕು ನೀಡುತ್ತಿರುವ ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಸಾಗರ ತಾಲ್ಲೂಕಿನ ತುಮರಿ, ಬ್ಯಾಕೋಡು ಹೋಬಳಿಯ ನೂರಾರು ಕುಟುಂಬಗಳ ಸಾವಿರಾರು ಜನ ತಮ್ಮ ಇಡೀ ಬದುಕನ್ನೇ ಕಳೆದುಕೊಂಡಿರುವುದು ಈಗ ಇತಿಹಾಸ. ಮೊದಲು ಮಡೆನೂರಿನಲ್ಲಿ ಅಣೆಕಟ್ಟು ಕಟ್ಟಲಾಗಿತ್ತು. ಆಗ ಒಂದಷ್ಟು ಜನರು ಬದುಕನ್ನು ಕಳೆದಕೊಂಡಿದ್ದರು. ನಂತರ ಮಡೆನೂರಿನಿಂದ ಕೆಲವೇ ಕಿ.ಮೀ. ದೂರದಲ್ಲಿ ಹೆಚ್ಚು ನೀರಿನ ಸಂಗ್ರಹಣಾ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಿದಾಗ ಮುಳುಗಡೆ ಸಂತ್ರಸ್ತರ ಸಂಖ್ಯೆ ಜಾಸ್ತಿಯಾಯಿತು. ಆದರೆ ಖೇದದ ಸಂಗತಿಯೆಂದರೆ ಇಷ್ಟು ವರ್ಷಗಳಾದರೂ ಈ ಭಾಗದ ಮುಳುಗಡೆ ಸಂತ್ರಸ್ತರ ಬವಣೆ ಕೊನೆಗೊಂಡಿಲ್ಲ. ಯಾವ ಸರ್ಕಾರಗಳೂ ಪುನರ್ವಸತಿ ಸೌಲಭ್ಯ, ಮೂಲಭೂತ ಸೌಕರ್ಯದ ವಿಷಯದಲ್ಲಿ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ ಎನ್ನಲೇಬೇಕು. ಇಂದಿಗೂ ಶರಾವತಿ ಮುಳುಗಡೆ ಸಂತ್ರಸ್ತರ ಬವಣೆ ಚುನಾವಣಾ ರಾಜಕೀಯದ ವಿಷಯಕ್ಕೆ ಸೀಮಿತವಾಗಿದೆ.

2000ರಿಂದ 2024 ರವರೆಗೆ ಗರಿಷ್ಠ ನೀರು ಸಂಗ್ರಹದ ವಿವರ

ವರ್ಷ ಅಡಿ

2000- 1816.95
2001-1795
2002-1789.09
2003-1795
2004-1808
2005-1819
2006-1819
2007-1819
2008-1807.09
2009-1819
2010-1814.55
2011-1817.07
2012-1809.55
2013-1819
2014-1819
2015-1793.10
2016-1796.85
2017-1799.20
2018-1819
2019-1819
2020-1816.10
2021-1815.90
2022-1814.10
2023- 1788.25
2024- 1815

Latest Videos
Follow Us:
Download App:
  • android
  • ios