ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸುರಪುರ ಠಾಣೆಯಲ್ಲಿ ಜಾತಿನಿಂದನೆ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಬಂಧಿಸಲು ಪೊಲೀಸರು ಹುಡುಕಾಡುತ್ತಿದ್ದಾರೆ.
ಯಾದಗಿರಿ/ಹುಣಸಗಿ(ಜ.31): ಗಣರಾಜ್ಯೋತ್ಸವ ಅಂಗವಾಗಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದ ವೇದಿಕೆಯ ಮೇಲೆ ದಲಿತ ಸಮುದಾಯದವರನ್ನು ಕುಳ್ಳಿರಿಸಿದ್ದಕ್ಕೆ ಆಕ್ರೋಶಗೊಂಡ ಗ್ರಾಮ ಪಂಚಾಯ್ತಿ ಸದಸ್ಯನೊಬ್ಬ, ಆ ಶಾಲೆಯ ಮುಖ್ಯ ಶಿಕ್ಷಕಿಗೆ ಕರೆ ಮಾಡಿ, ಅಶ್ಲೀಲ ಶಬ್ಧಗಳಿಂದ ನಿಂದಿಸಿ, ಜೀವಬೆದರಿಕೆ ಹಾಕಿದ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಬಾಚೀಮಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸುರಪುರ ಠಾಣೆಯಲ್ಲಿ ಜಾತಿನಿಂದನೆ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಬಂಧಿಸಲು ಪೊಲೀಸರು ಹುಡುಕಾಡುತ್ತಿದ್ದಾರೆ.
ಬಾಚೀಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ನಿರ್ಮಲಾ ಡಾಂಗೆ ಈ ದೂರು ದಾಖಲಿಸಿದ್ದಾರೆ. ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುವಂತೆ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಸಿಬ್ಬಂದಿಯವರು ಸೇರಿದಂತೆ ಪಾಲಕರು, ಪೋಷಕರು ಮುಂತಾದವರಿಗೆ ಜ.25ರಂದು ಫೋನ್ ಕರೆ ಮಾಡಿ ಮುಖ್ಯಶಿಕ್ಷಕಿ ನಿರ್ಮಲಾ ಆಹ್ವಾನ ನೀಡಿದ್ದಾರೆ.
ಸಿಎಂ ಪತ್ನಿಗೆ ನೋಟೀಸ್ ಕೊಟ್ಟಿದ್ದಕ್ಕೆ ಡಿಕೆಶಿಗೆ ಖುಷಿ? ಗೃಹ ಸಚಿವರು ಹೇಳಿದ್ದೇನು?
ಅದರಂತೆ, ಜ.26ರಂದು ಕಾರ್ಯಕ್ರಮಕ್ಕೆ ಅತಿಥಿಗಳು ಮುಂತಾದವರು ಬಂದು, ಧ್ವಜಾರೋಹಣ ನೆರೆವೇರಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮುಖ್ಯ ಶಿಕ್ಷಕಿ ನಿರ್ಮಲಾ ಅವರಿಗೆ ಫೋನ್ ಕರೆ ಮಾಡಿದ ಗ್ರಾಮ ಪಂಚಾಯಿತಿ ಸದಸ್ಯ ಬಸನಗೌಡ ಕೆಂಚಾರೆಡ್ಡಿ ಎಂಬಾತ ಆಕ್ರೋಶಗೊಂಡು ನಿಂದಿಸಲು ಶುರು ಮಾಡಿದ್ದ. ‘ಹೆಣ್ಮಕ್ಕಳ ಕುರಿತು ಇಂತಹ ಮಾತುಗಳು ಸರಿಯಲ್ಲ, ನಾನು ನಿಮ್ಮ ಅಕ್ಕ ತಂಗಿಯರ ತರಹ ತಿಳಿದುಕೊಳ್ಳಬೇಕು’ ಎಂದು ಸಮಾಧಾನಕ್ಕೆ ಮುಂದಾದ ನಿರ್ಮಲಾ ಹಾಗೂ ಪತಿ ವಿರುದ್ಧ ಅಶ್ಲೀಲ ಪದಗಳಲ್ಲಿ ನಿಂದಿಸಿದ ಬಸನಗೌಡ, ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ನೊಂದ ಮುಖ್ಯ ಶಿಕ್ಷಕಿ ನಿರ್ಮಲಾ ದೂರಿದ್ದಾರೆ.
‘ಕಾರ್ಯಕ್ರಮಕ್ಕೆ ಅವರೂ (ಗ್ರಾ.ಪಂ. ಸದಸ್ಯ ಬಸನಗೌಡ) ಸೇರಿದಂತೆ ಎಲ್ಲರಿಗೂ ಒಂದು ದಿನ ಮುಂಚೆಯೇ ಆಹ್ವಾನ ನೀಡಲಾಗಿತ್ತು. ಸಮಾರಂಭ ದಿನದಂದು (ಜ.26) ವೇದಿಕೆಯ ಮೇಲೆ ಮುಖ್ಯ ಅತಿಥಿಗಳು ಸೇರಿದಂತೆ ಕೆಲವು ಪಾಲಕರು-ಪೋಷಕರನ್ನು ಕುಳ್ಳಿರಿಸಲಾಗಿತ್ತು. ಆದರೆ, ನಮ್ಮ ಸಮನಾಗಿ ಕುಳಿತ ದಲಿತರ ಜೊತೆ ವೇದಿಕೆಯ ಮೇಲೆ ಹೇಗೆ ಕುಳಿತುಕೊಳ್ಳುವುದು ಎಂಬ ಕಾರಣಕ್ಕಾಗಿ ಬಸನಗೌಡ ಆಕ್ರೋಶಗೊಂಡು, ಅಶ್ಲೀಲ ಶಬ್ದಗಳಿಂದ ನಿಂದಿಸಿದ್ದಾರೆ, ಜೀವಬೆದರಿಕೆ ಹಾಕಿದ್ದಾರೆ.’ ಎಂದು ಮುಖ್ಯಶಿಕ್ಷಕಿ ನಿರ್ಮಲಾ ತಮ್ಮನ್ನು ಸಂಪರ್ಕಿಸಿದ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಗೊಂದಲ ಇದೆಯಾ?: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು
ಘಟನೆಯ ಬೆನ್ನಲ್ಲೇ, ಶಿಕ್ಷಕರು, ಪಾಲಕರು ಹಾಗೂ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಇದೇ ಹುಣಸಗಿ ತಾಲೂಕಿನ ಗ್ರಾಮವೊಂದರಲ್ಲಿ ಕೆಲ ತಿಂಗಳ ಹಿಂದೆ ಪೋಕ್ಸೋ ದೂರು ನೀಡಿದ್ದ ಕುಟುಂಬಸ್ಥರನ್ನು ಗ್ರಾಮದಿಂದಲೆ ಬಹಿಷ್ಕಾರ ಘಟನೆ ಮಾಸುವ ಮುನ್ನವೇ, ವೇದಿಕೆಯ ಮೇಲೆ ದಲಿತರ ಜೊತೆ ಸಮನಾಗಿ ಕುಳಿತುಕೊಳ್ಳುವ ಕಾರಣಕ್ಕೆ ಮುಖ್ಯಶಿಕ್ಷಕಿ ವಿರುದ್ಧ ಜೀವಬೆದರಿಕೆ, ಅಶ್ಲೀಲ ಶಬ್ಧಗಳ ನಿಂದನೆ ಪ್ರಕರಣ ನಾಗರಿಕ ಸಮಾಜದ ತಲೆ ತಗ್ಗಿಸುವಂತಿದೆ.
ದಲಿತರ ಮೇಲೆ ದೌರ್ಜನ್ಯ ಬಹಿಷ್ಕಾರ, ಜಾತಿ ನಿಂದನೆ ಮಾಡುವವರು ಎಷ್ಟೇ ಪ್ರಭಾವಿಗಳಾಗಿದ್ದರು ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಬಹುದು ಎಂದು ಹುಣಸಗಿ ದಲಿತ ಮುಖಂಡ ಸಿದ್ದಣ್ಣ ಮೇಲಿನಮನಿ ಹೇಳಿದ್ದಾರೆ.
ಬಾಚಿಮಟ್ಟಿ ಗ್ರಾಮದಲ್ಲಿ ಶಿಕ್ಷಕಿಯೊಬ್ಬಳಿಗೆ ಜಾತಿ ನಿಂದನೆ, ಜೀವಭಯ, ಅವ್ಯಾಚ ಶಬ್ದಗಳಿಂದ ನಿಂದಿಸಿದ ಆರೋಪಿ ಕಣ್ಮರೆಯಾಗಿದ್ದಾನೆ. ಪೊಲೀಸ್ ತಂಡ ರಚನೆ ಮಾಡಲಾಗಿದೆ ಆದಷ್ಟು ಬೇಗ ಬಂಧಿಸಲಾಗುವದು ಎಂದು ಸುರಪುರ ಡಿವೈಎಸ್ಪಿ ಜಾವೀದ್ ಇನಾಮದಾರ್ ತಿಳಿಸಿದ್ದಾರೆ.
