ಇನ್ನಷ್ಟುಮಹಿಳಾ ರಾಜಕಾರಣಿಗಳನ್ನು ಹೊಂದುವಂತಾಗಲಿ : ಡಾ.ಬಿ.ಎಸ್. ಅಜಯ ಕುಮಾರ್
ನಮ್ಮನ್ನು ಸಮರ್ಥ ನಾಯಕರು ಆಳುವಂತಾಗಲು ರಾಜಕೀಯದಲ್ಲಿ ಹೆಚ್ಚಿನ ಮಹಿಳೆಯರನ್ನು ಆಯ್ಕೆ ಮಾಡಬೇಕು ಎಂದು ಎಚ್‌ಸಿಜಿ- ಬಿಎಚ್‌ಐಒ ಕಾರ್ಯಾಧ್ಯಕ್ಷ ಮತ್ತು ಸಂಸ್ಥಾಪಕ ಡಾ.ಬಿ.ಎಸ್. ಅಜಯ ಕುಮಾರ್ ಬುಧವಾರ ಆಗ್ರಹಿಸಿದರು.
ಮೈಸೂರು : ನಮ್ಮನ್ನು ಸಮರ್ಥ ನಾಯಕರು ಆಳುವಂತಾಗಲು ರಾಜಕೀಯದಲ್ಲಿ ಹೆಚ್ಚಿನ ಮಹಿಳೆಯರನ್ನು ಆಯ್ಕೆ ಮಾಡಬೇಕು ಎಂದು ಎಚ್‌ಸಿಜಿ- ಬಿಎಚ್‌ಐಒ ಕಾರ್ಯಾಧ್ಯಕ್ಷ ಮತ್ತು ಸಂಸ್ಥಾಪಕ ಡಾ.ಬಿ.ಎಸ್. ಅಜಯ ಕುಮಾರ್ ಬುಧವಾರ ಆಗ್ರಹಿಸಿದರು.
ಭಾರತ್ ಹಾಸ್ಪಿಟಲ್ ಮತ್ತು ಇನ್ಸಿಟ್ಯೂಟ್ ಆಫ್ ಆಂಕೊಲಾಜಿ ಕಲಾಮಂದಿರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ರಾಜಕೀಯ ಮತ್ತು ಆಡಳಿತದಲ್ಲಿ ಮುಂಚೂಣಿಯಲ್ಲಿರುವ ಸಮಯ ಬಂದಿದೆ. ಪ್ರತಿದಿನ ಕುಟುಂಬ ಮತ್ತು ಮನೆಯನ್ನು ನಡೆಸುವ ವಿಧಾನ ಅವರ ನಾಯಕತ್ವದ ಕೌಶಲ್ಯವನ್ನು ಸಾಬೀತುಪಡಿಸುತ್ತದೆ. ಈಗ ಅವರು ಪಂಚಾಯತ್, ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಕುಳಿತು ಜನರನ್ನು ಆಳಬೇಕಾಗಿದೆ. ನಾವು ಶೀಘ್ರದಲ್ಲೇ ಬೇಗೂರು ಮತ್ತು ಗುಂಡ್ಲುಪೇಟೆಯಲ್ಲಿ ನಮ್ಮ 5,000 ಮಹಿಳೆಯರಿಗೆ ರಾಜಕೀಯ ನಾಯಕತ್ವ ತರಬೇತಿ ಪ್ರಾರಂಭಿಸಲಿದ್ದೇವೆ. ಈ ಮಹಿಳೆಯರು ಅಂತಿಮವಾಗಿ ರಾಜಕೀಯಕ್ಕೆ ಪ್ರವೇಶಿಸಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದರು.
ಬಿಎಚ್‌ಐಒ ಮತ್ತು ಎಲ್ಲಾ ಎಚ್‌ಸಿಜಿ ಆಸ್ಪತ್ರೆಗಳಲ್ಲಿ ನೂರಾರು ಮಹಿಳೆಯರು ವೈದ್ಯರು, ದಾದಿಯರು ಮತ್ತು ಆರೈಕೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಆಸ್ಪತ್ರೆಯಲ್ಲಿ ನಾನು ಮಹಿಳೆಯನ್ನು ನೇಮಿಸಿಕೊಳ್ಳುವಾಗ ನನಗೆ ಆಕೆ ಬದ್ಧತೆ ಮತ್ತು ಪ್ರಾಮಾಣಿಕ ಕೆಲಸಗಾರ್ತಿ ಎಂದು ಖಚಿತವಾಗಿ ತಿಳಿದಿರುತ್ತೇನೆ. ಮಹಿಳೆ ಹೆಚ್ಚು ಸಮರ್ಪಣಾ ಮನೋಭಾವವನ್ನು ಹೊಂದಿದ್ದಾಳೆ ಮತ್ತು ಆಕೆ ಪ್ರತಿದಿನ ಪ್ರತಿಶತ ನೂರರಷ್ಟುಪ್ರಯತ್ನಪಡುತ್ತಾಳೆ ಎಂಬುದನ್ನು ನಾನು ನೋಡಿದ್ದೇನೆ. ಸಶಕ್ತ ಮಹಿಳೆ ಯಾವುದೇ ಸಮಾಜಕ್ಕೆ ಆಸ್ತಿ. ಇಂದು ಮಹಿಳೆಯರು ತಂತ್ರಜ್ಞಾನ, ವಿಜ್ಞಾನ, ಕಲೆ, ರಕ್ಷಣೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದಾರೆ. ಅವರು ನಮ್ಮ ಸಶಸ್ತ್ರ ಪಡೆಗಳನ್ನು ಸೇರುತ್ತಾರೆ ಮತ್ತು ಫೈಟರ್ ಜೆಟ್‌ಗಳನ್ನು ಕೂಡ ಹಾರಿಸುತ್ತಾರೆ ಎಂದರು.
ಈ ವೇಳೆ ಮೈಸೂರು ವಿವಿ ಸಮಾಜಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥೆ ಆರ್. ಇಂದಿರಾ ಮಾತನಾಡಿ, ಮಹಿಳೆಯರು ಎದುರಿಸುತ್ತಿರುವ ಕೆಲವು ಸಮಸ್ಯೆಗಳು ಪರಿಹಾರವಾಗಿದ್ದರೂ, ಮಹಿಳೆಯರು ಎದುರಿಸುತ್ತಿರುವ ಹೊಸ ಸಮಸ್ಯೆಗಳಲ್ಲಿ ಆನ್‌ಲೈನ್ ಅಪರಾಧವೂ ಒಳಗೊಂಡಿವೆ. ಜಾಗತಿಕವಾಗಿ ಮಹಿಳೆಯರಿಗೆ ಇಂಟರ್ನೆಟ್ ಬಳಕೆ ಅವಕಾಶ ಕಡಿಮೆ. ಕೋವಿಡ್ ವೇಳೆ ಅಧ್ಯಯನಗಳ ಪ್ರಕಾರ 40 ಪ್ರತಿಶತ ಮಹಿಳೆಯರು ಆನ್‌ಲೈನ್ ಅವಕಾಶ ಹೊಂದಿರಲಿಲ್ಲ. ಇಂದಿಗೂ ಅನೇಕ ಸಾಂಪ್ರದಾಯಿಕ ಕುಟುಂಬಗಳು ತಮ್ಮ ಹೆಣ್ಣುಮಕ್ಕಳಿಗೆ ಮೊಬೈಲ್ ಫೋನ್ ಕೊಡುವುದಿಲ್ಲ. ಇವೆಲ್ಲವನ್ನು ಗಮನಿಸಿದಾಗ ಮಹಿಳಾ ಸಬಲೀಕರಣವು ಈ ಸಮಯದ ಅಗತ್ಯವಾಗಿದೆ ಎಂದರು.
ಆಸ್ಪತ್ರೆಯ ನಿರ್ದೇಶಕಿ ಭಾಗ್ಯ ಅಜಯಕುಮಾರ್, ಡಾ. ವಿನಯಕುಮಾರ್ ಮುತ್ತಗಿ, ಡಾ.ಕೆ.ಜಿ. ಶ್ರೀನಿವಾಸ್, ಡಾ.ಎಂ. ವಿಜಯಕುಮಾರ್, ಡಾ.ಜಿ.ಎಚ್. ಅಭಿಲಾಷ್, ಡಾ.ಆರ್. ರಕ್ಷಿತ್ ಶೃಂಗೇರಿ ಮೊದಲಾದವರು ಇದ್ದರು.