‘ಟಿಪ್ಪು ನಿಜಕನಸು ನಾಟಕ’ ವಿರುದ್ಧ ಕಾನೂನು ಹೋರಾಟ; ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಟಿಪ್ಪು ವಿವಿ: ಇಬ್ರಾಹಿಂ
- ‘ಟಿಪ್ಪು ನಿಜಕನಸು ನಾಟಕ’ದ ವಿರುದ್ಧ ಕಾನೂನು ಹೋರಾಟ
- ಮುಸ್ಲಿಂ-ಗೌಡ್ರ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಾರೆ
- ಟಿಪ್ಪು ಪ್ರತಿಮೆ ಇಸ್ಲಾಂ ಸಂಸ್ಕೃತಿಯಲ್ಲ: ಇಬ್ರಾಹಿಂ
- ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ
ಮೈಸೂರು (ನ.17) : ಟಿಪ್ಪು ನಿಜಕನಸುಗಳು ನಾಟಕ ಕೃತಿ ಮತ್ತು ನಾಟಕ ಪ್ರದರ್ಶನದ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದು, ಈಗಾಗಲೇ ದೂರು ನೀಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿಗೆ ತನ್ನದೇ ಆದ ಸಾಂಸ್ಕೃತಿಕ ಹಿರಿಮೆ ಇದೆ. ಜ್ಞಾನಗರಿಯಾದ ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಅಜ್ಞಾನದ ಕಡೆಗೆ ಕರೆದೊಯ್ಯುತ್ತಿದ್ದಾನೆ. ಗಲಾಟೆ ನಡೆಯುವುದು ಬೇಡ ಎಂದು ಸಭೆ ನಡೆಸಿದ್ದೇನೆ. ಟಿಪ್ಪುವಿನ ಬಗ್ಗೆ ಪುಸ್ತಕದಲ್ಲಿ ಕೆಟ್ಟದಾಗಿ ಚಿತ್ರೀಕರಿಸಲಾಗಿದೆ ಎಂದು ದೂರಿದರು.
ನಮ್ಮ ಧರ್ಮ ಗುರುಗಳೊಡನೆ ಚರ್ಚಿಸಿ ಬೆಂಗಳೂರಿನಲ್ಲಿಯೂ ಶೀಘ್ರದಲ್ಲಿಯೇ ಮತ್ತೊಂದು ಪ್ರಕರಣ ದಾಖಲಿಸಲಾಗುವುದು. ಶೃಂಗೇರಿ ಶಾರದಾಪೀಠವನ್ನು ಪುನರ್ ನಿರ್ಮಿಸಿರುವುದು ಟಿಪ್ಪು ಎಂದು ಗುರುಗಳೇ ಹೇಳಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದಂತೆ ಈ ರೀತಿ ಮಾಡುತ್ತಿದ್ದಾರೆ. ಎರಡು ಸಮಾಜದ ಮಧ್ಯೆ ವಿಷ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಟಿಪ್ಪು ನಿಜಕನಸುಗಳು ಪುಸ್ತಕ ಬಿಡುಗಡೆ: ಲೇಖಕ ರೋಹಿತ್ ಚಕ್ರತೀರ್ಥರಿಗೆ ಬೆದರಿಕೆ ಕರೆ
ಪ್ರತಾಪ ಸಿಂಹ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾಗಿ ಅನಗತ್ಯ ವಿಚಾರಗಳ ಮುನ್ನಲೆಗೆ ತರುತ್ತಿದ್ದಾನೆ. ನಂಜುಂಡನಿಗೆ ಕೊಟ್ಟಪಂಚವಜ್ರ ಟಿಪ್ಪು ಸುಲ್ತಾನ್ ಕೊಟ್ಟಿದ್ದು, ಇದನ್ನ ಪ್ರತಾಪಸಿಂಹ ಹಿಂದಕ್ಕೆ ಪಡೆಯುತ್ತಾನಾ? ಮೋದಿ ನಿಂತು ಭಾಷಣ ಮಾಡುವ ಕೆಂಪು ಕೋಟೆಯನ್ನ ಷಹಜಹಾನ್ ಕಟ್ಟಿಸಿದ್ದು, ಅಲ್ಲಿ ನಿಂತು ಯಾಕೆ ಭಾಷಣ ಬಿಗಿತೀರಿ. ಪ್ರತಾಪಸಿಂಹ ಅದನ್ನು ಒಡೆಸಿಬಿಡುತ್ತಾನಾ?. ಟಿಪ್ಪು ದೇಶದ್ರೋಹಿಗಳನ್ನು ಕೊಂದಿದ್ದಾನೆ. ಅಂದಿನ ದೇಶದ್ರೋಹಿ ಸಂತತಿಗಳು ಇಂದಿಗೂ ಇವೆ. ಆದರೆ, ಇವರ ಪುಸ್ತಕದಲ್ಲಿ ಒಕ್ಕಲಿಗರ ಹೆಸರು ಮುನ್ನಲೆಗೆ ತಂದು ನಮ್ಮ ಗೌಡರ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಾರೆ. ಇದಕ್ಕೆ ಮುಂಬರುವ ಚುನಾವಣೆಯಲ್ಲಿ ಎಚ್ಡಿಕೆಯನ್ನು ಸಿಎಂ ಮಾಡಿ ದೇಶದಲ್ಲಿ ಮುಸ್ಲಿಂ- ಗೌಡರು ಅಣ್ಣತಮ್ಮಂದಿರಂತೆ ಇರುವಂತಹ ಯೋಜನೆಗಳ ಮೂಲಕವೇ ಉತ್ತರ ನೀಡುತ್ತೇವೆ ಎಂದು ಅವರು ತಿಳಿಸಿದರು.
ದೆಹಲಿ ಯುವತಿ ಕೊಲೆ ಪ್ರಕರಣ ಲವ್ ಜಿಹಾದ್‌ಗೆ ತಿರುಗಿದೆ. ಪ್ರಮೋದ ಮುತಾಲಿಕ್‌ಗೆ ಲವ್ ಮಾಡಿ ಗೊತ್ತಿಲ್ಲ. ಮೊದಲು ಲವ್ ಮಾಡಿ ಟೇಸ್ವ್ ನೋಡಲು ಹೇಳಿ. ಚರ್ಚೆಯಾಗಬೇಕಿರುವ ವಿಚಾರಗಳು ಸಾಕಷ್ಟುಇದೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಟಿಪ್ಪು ವಿವಿ:
ಜೆಡಿಎಸ್ ಅಧಿಕಾರಕ್ಕೆ ಬಂದರೆ ಟಿಪ್ಪು ವಿಶ್ವವಿದ್ಯಾಲಯವನ್ನು ಕೋಲಾರ ಅಥವಾ ಶ್ರೀರಂಗಪಟ್ಟಣದಲ್ಲಿ ಮಾಡುತ್ತೇವೆ. ಕೆಂಪೇಗೌಡ ವಿಶ್ವವಿದ್ಯಾನಿಲಯ ಮಾಡುತ್ತೇವೆ. ಇನ್ನು ಆರು ತಿಂಗಳು ತಡೆಯಿರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ಇಂತಹ ಅಹಿತಕರ, ಸಮಾಜದಲ್ಲಿ ಶಾಂತಿ ಕದಡುವ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತಾರೆ ಎಂದರು.
ಪರಿಸ್ಥಿತಿ ಬದಲಾಗಿದೆ ಎಂದು ಧರ್ಮ ಬದಲಾಯಿಸಲು ಆಗುತ್ತಾ?, ರಾಜಕೀಯ ಕಾರಣಗಳಿಂದ ಧರ್ಮ ಬದಲಾಯಿಸಲು ಆಗಲ್ಲ. ರಾಜಕಾರಣ ಇವತ್ತು ಇರುತ್ತೇ ನಾಳೆ ಸಾಯುತ್ತೇ ನಮಗೆ ಧರ್ಮವೇ ಮುಖ್ಯ. ಟಿಪ್ಪು ಪ್ರತಿಮೆ ಸ್ಥಾಪನೆ ಪ್ರಶ್ನೆಯೇ ಇಲ್ಲ. ಪ್ರತಿಮೆಗೆ ನಮ್ಮಲ್ಲಿ ಅವಕಾಶವೇ ಇಲ್ಲ. ಪೂಜೆ ಮಾಡುವುದು, ಕುಂಕುಮ ಹಚ್ಚುವುದು ನಮ್ಮಲ್ಲಿ ಇಲ್ಲ. ಬಡವರಿಗೆ ಸಹಾಯ ಮಾಡುವುದು ನಮ್ಮಲ್ಲಿರುವುದು. ಇದೇ ನಮ್ಮಲ್ಲಿರುವ ಆಚರಣೆ, ಎಲ್ಲಿಯಾದರೂ ನಮ್ಮ ಪ್ರತಿಮೆ ಇರುವುದನ್ನು ತೋರಿಸಿ. ತನ್ವೀರ್ ಸೇಠ್‌ಗೆ ಏನೂ ಗೊತ್ತಿಲ್ಲ. ಅವರ ತಂದೆ ಅಜೀಜ್ ಸೇಠ್ 50 ವರ್ಷ ಕೆಲಸ ಮಾಡಿದ್ದಾರೆ. ಅವರ ಪ್ರತಿಮೆ ಎಲ್ಲಾದರೂ ಇದೆಯಾ? ಏಕೆ ಹಾಕಿಲ್ಲ ಎಂದರು.
ವಿರೋಧದ ನಡುವೆಯೂ ಇಂದು 'ಟಿಪ್ಪು ನಿಜ ಕನಸುಗಳು' ಪುಸ್ತಕ ಬಿಡುಗಡೆ
ಟಿಪ್ಪು ಜಯಂತಿ ಮಾಡಿದ್ದು ತಪ್ಪು, ನಮ್ಮಲ್ಲಿ ಜಯಂತಿ ಸಹ ಇಲ್ಲ. ಅದನ್ನು ಮೀರಿ ಟಿಪ್ಪು ಜಯಂತಿ ಮಾಡುವುದಾದರೆ ಅಂದೇ ಶಾರದಾ ಪೀಠದ ಶ್ರೀ ಹಾಗೂ ಸುತ್ತೂರು ಶ್ರೀಗಳನ್ನು ಕರೆಸಿ ಟಿಪ್ಪು ಜಯಂತಿ ಮಾಡುವಂತೆ ಸಿದ್ದರಾಮಯ್ಯಗೆ ಹೇಳಿದ್ದೇ ಕೇಳಲಿಲ್ಲ. ಬಿಜೆಪಿ - ಕಾಂಗ್ರೆಸ್ ಟಿಪ್ಪು ಹೆಸರಲ್ಲಿ ರಾಜಕೀಯ ಮಾಡುತ್ತಿವೆ. ನಮಗದರ ಅಗತ್ಯವಿಲ್ಲ ಎಂದು ಅವರು ಹೇಳಿದರು.