Asianet Suvarna News Asianet Suvarna News

ಬಾಡಿಗೆ ಪಾವತಿಸದ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿ ಕಾನೂನು ಕ್ರಮ

ಪಟ್ಟಣದ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ಸಕಾಲದಲ್ಲಿ ಪಾವತಿಸದ ಬಾಡಿಗೆದಾರರ ಮಳಿಗೆಗಳಿಗೆ ಬೀಗ ಹಾಕುವ ಮೂಲಕ ಕಾನೂನು ಕ್ರಮ ಕೈಗೊಳ್ಳಲಿದ್ದು, ಇದಕ್ಕೆ ಪುರಸಭಾ ಸದಸ್ಯರು ಸಂಪೂರ್ಣ ಸಹಕಾರ ನೀಡಬೇಕು ಎಂದು ಹುಣಸೂರು ಉಪ ವಿಭಾಗಾಧಿಕಾರಿ, ಪುರಸಭಾ ಆಡಳಿತಾಧಿಕಾರಿ ರುಚಿ ಬಿಂದಾಲ್‌ ಹೇಳಿದರು.

Legal action by locking municipally owned commercial shops for non-payment of rent snr
Author
First Published Aug 2, 2023, 5:03 AM IST | Last Updated Aug 2, 2023, 5:03 AM IST

  ಕೆ.ಆರ್‌. ನಗರ :  ಪಟ್ಟಣದ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ಸಕಾಲದಲ್ಲಿ ಪಾವತಿಸದ ಬಾಡಿಗೆದಾರರ ಮಳಿಗೆಗಳಿಗೆ ಬೀಗ ಹಾಕುವ ಮೂಲಕ ಕಾನೂನು ಕ್ರಮ ಕೈಗೊಳ್ಳಲಿದ್ದು, ಇದಕ್ಕೆ ಪುರಸಭಾ ಸದಸ್ಯರು ಸಂಪೂರ್ಣ ಸಹಕಾರ ನೀಡಬೇಕು ಎಂದು ಹುಣಸೂರು ಉಪ ವಿಭಾಗಾಧಿಕಾರಿ, ಪುರಸಭಾ ಆಡಳಿತಾಧಿಕಾರಿ ರುಚಿ ಬಿಂದಾಲ್‌ ಹೇಳಿದರು.

ಪಟ್ಟಣದ ಪುರಸಭೆಯ ಕೃಷ್ಣ ರಾಜೇಂದ್ರ ಸಭಾಂಗಳದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ವಾಣಿಜ್ಯ ಮಳಿಗೆಗಳ ಬಾಡಿಗೆ ಕೋಟ್ಯಂತರ ರು. ಗಳಷ್ಟು ಬಾಕಿ ಉಳಿದಿದ್ದು, ವಸೂಲಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ, ಹಾಗಾಗಿ ಬಾಕಿದಾರರಿಗೆ ಸದಸ್ಯರು ನೆರವಾಗಬಾರದು ಎಂದರು.

ಪಟ್ಟಣದಲ್ಲಿ ಎಲ್ಲೆಂದರಲ್ಲಿ ರಸ್ತೆಗಳು ಒತ್ತುವರಿಯಾಗಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ, ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಒಂದು ಜಾಗದಲ್ಲಿ ಒತ್ತುವರಿ ಮಾಡಿ ಸುಮ್ಮನಿರದೆ ಎಲ್ಲ ಕಡೆ ತೆರವು ಕಾರ್ಯಾಚರಣೆ ನಡೆಸಲು ಪುರಸಭೆ ಆಡಳಿತ ಮಂಡಳಿ ಮತ್ತು ಸಾರ್ವಜನಿಕರ ಸಹಕಾರ ಪಡೆಯಬೇಕೆಂದರು.

ಮುಂದೆ ವಾರದಲ್ಲಿ ಒಂದು ಬಾರಿ ಪುರಸಭೆಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆಂದು ತಿಳಿಸಿದ ಅವರು, ಸದಸ್ಯರು ಮತ್ತು ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರು ನನ್ನ ಗಮನಕ್ಕೆ ತರಬೇಕೆಂದರು.

ಸದಸ್ಯ ಪ್ರಕಾಶ್‌ ಮಾತನಾಡಿ, ಪಟ್ಟಣದಲ್ಲಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಮಾಂಸ ಮಾರಾಟ ಮಾಡುತ್ತಿರುವುದರಿಂದ ಪುರಸಭೆಗೆ ಸಾಕಷ್ಟುತೊಂದರೆಯಾಗುತ್ತಿದೆ, ಆದ್ದರಿಂದ ಕೂಡಲೆ ಮಟನ್‌ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ 7 ವರ್ಷಗಳ ಹಿಂದೆ ಸಾರ್ವಜನಿಕರಿಗೆ ಅನುಕೂಲವಾಗದ ಜಾಗದಲ್ಲಿ ಲಕ್ಷಾಂತರ ರು. ಗಳ ವೆಚ್ಚ ಮಾಡಿ ನಿರ್ಮಿಸಲಾದ ಮಾಂಸದ ಮಾರುಕಟ್ಟೆಪಾಳು ಬಿದ್ದಿದ್ದು, ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಮಾರುಕಟ್ಟೆನಿರ್ಮಿಸಿದರೆ ಪುರಸಭೆಗೂ ಆದಾಯ ಬರುತ್ತದೆ ಎಂದರಲ್ಲದೆ ಹಳೆ ಎಡತೊರೆಯಲ್ಲಿ ಕಾವೇರಿ ನದಿ ದಂಡೆಯಲ್ಲಿರುವ ಪಂಪ್‌ ಹೌಸ್‌ನಲ್ಲಿ ನೀರು ಶುದ್ಧೀಕರಣವಾಗುತ್ತಿಲ್ಲ, ಆದರೂ ಅದೇ ನೀರು ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ ಮತ್ತು ಪುರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂದು ಅರೋಪಿಸಿದರು.

ಸದಸ್ಯ ಮಧುವನಹಳ್ಳಿ ನಟರಾಜ್‌ ಮಾತನಾಡಿ, ಜೂನಿಯರ್‌ ಕಾಲೇಜು ಹಿಂಭಾಗ ಕಳೆದ ವರ್ಷ ಲಕ್ಷಾಂತರ ರು. ಗಳ ವೆಚ್ಚ ಮಾಡಿ ನಿರ್ಮಿಸಲಾದ ಕುಡಿಯುವ ನೀರಿನ ಟ್ಯಾಂಕ್‌ನಿಂದ ನೀರು ಪೂರೈಕೆ ಮಾಡುತ್ತಿಲ್ಲ, ಇದರಿಂದ ಸಮರ್ಪಕವಾಗಿ ನೀರು ಪೂರೈಕೆಯಾಗದೆ ಸಾರ್ವಜನಿಕರಿಗೆ ತೊಂದರೆಯಾಗಿದೆ ಮತ್ತು ಸದಸ್ಯರ ಗಮನಕ್ಕೆ ತಾರದೆ ಹೊಸ ಬಡಾವಣೆಗಳನ್ನ ಪುರಸಭೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.

ಸದಸ್ಯರಾದ ಕೆ.ಜಿ. ಸುಬ್ರಹ್ಮಣ್ಯ ಕೆ.ಪಿ. ಪ್ರಭುಶಂಕರ್‌ ಮತ್ತು ಸಂತೋಷ್‌ಗೌಡ ಮಾತನಾಡಿದರು.

ಎಲ್ಲ ಸದಸ್ಯರ ದೂರುಗಳು ಮತ್ತು ಸಮಸ್ಯೆಗಳ ಬಗ್ಗೆ ಆಲಿಸಿದ ಪುರಸಭಾ ಆಡಳಿತಾಧಿಕಾರಿಗಳು ತ್ವರಿತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರಲ್ಲದೆ, ಇದಕ್ಕೆ ಜನ ಪ್ರತಿನಿಧಿಗಳು ಸಹಕರಿಸಿದರೆ ಶೀಘ್ರ ಕೆಲಸವಾಗಲಿದೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್‌ಶಂಕರ್‌, ಮುಖ್ಯಾಧಿಕಾರಿ ಸುಧಾರಾಣಿ, ಸದಸ್ಯರಾದ ಶಿವುನಾಯಕ್‌, ಶಂಕರ್‌ಸ್ವಾಮಿ, ಸೈಯ್ಯದ್‌ ಸಿದ್ದಿಕ್‌, ಜಾವೀದ್‌ ಪಾಷ, ಸೌಮ್ಯಾ ಲೋಕೇಶ್‌, ಮಂಜುಳಾ ಚಿಕ್ಕವೀರು, ವೀಣಾ ವೃಷಬೇಂದ್ರ, ಅಶ್ವಿನಿಪುಟ್ಟರಾಜು, ಪಲ್ಲವಿ ಆನಂದ್‌, ತೋಂಟದಾರ್ಯ, ಪುರಸಭಾ ಕಂದಾಯಾಧಿಕಾರಿ ರಮೇಶ್‌, ಎಂಜಿನಿಯರ್‌ ಚಂದ್ರಶೇಖರ್‌, ಎಂ.ಎಂ. ಸೌಮ್ಯ ಇದ್ದರು.

Latest Videos
Follow Us:
Download App:
  • android
  • ios