Asianet Suvarna News Asianet Suvarna News

Mandya Politics : ಹೊಸಬರ ಅಬ್ಬರ, ಹಳಬರು ಹೈರಾಣು..!

ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನೂ ಆರು ತಿಂಗಳಿದೆ. ಆಗಲೇ ಕ್ಷೇತ್ರಗಳೊಳಗೆ ಅಖಾಡ ರಂಗೇರತೊಡಗಿದೆ. ಜಿಲ್ಲಾ ರಾಜಕೀಯಕ್ಕೆ ಹೊಸಬರ ಪ್ರವೇಶ ಹಳೆಯ ಹುಲಿಗಳಿಗೆ ನುಂಗಲಾಗದ ಬಿಸಿತುಪ್ಪವಾಗಿದೆ. ಹೊಸಬರ ಅಬ್ಬರದೊಳಗೆ ಹಳಬರು ಹೈರಾಣಾಗುವಂತಾಗಿದೆ.

leaders Prepare for Election In Mandya snr
Author
First Published Dec 7, 2022, 7:25 AM IST

ಮಂಡ್ಯ ಮಂಜುನಾಥ

ಮಂಡ್ಯ (ಡಿ.07):  ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನೂ ಆರು ತಿಂಗಳಿದೆ. ಆಗಲೇ ಕ್ಷೇತ್ರಗಳೊಳಗೆ ಅಖಾಡ ರಂಗೇರತೊಡಗಿದೆ. ಜಿಲ್ಲಾ ರಾಜಕೀಯಕ್ಕೆ ಹೊಸಬರ ಪ್ರವೇಶ ಹಳೆಯ ಹುಲಿಗಳಿಗೆ ನುಂಗಲಾಗದ ಬಿಸಿತುಪ್ಪವಾಗಿದೆ. ಹೊಸಬರ ಅಬ್ಬರದೊಳಗೆ ಹಳಬರು ಹೈರಾಣಾಗುವಂತಾಗಿದೆ.

ಹೊಸದಾಗಿ ರಾಜಕೀಯ (Politics)  ಪ್ರವೇಶಿಸುವವರು ಜನರ ವಿಶ್ವಾಸ ಗಳಿಸುವುದಕ್ಕೆ ಹೆಚ್ಚಿನ ಉತ್ಸಾಹ ತೋರಿದ್ದಾರೆ. ಚುನಾವಣೆ ಇನ್ನೂ ಎಂಟ್ಹತ್ತು ತಿಂಗಳಿರುವಂತೆಯೇ ಪೂರ್ವಸಿದ್ಧತೆ ಆರಂಭಿಸಿ ಎಲ್ಲೆಡೆ ಬಿರುಸಿನಿಂದ ಓಡಾಡುತ್ತಿದ್ದಾರೆ. ಸಮಾಜ ಸೇವೆ ಹೆಸರಿನಲ್ಲಿ ಯಥೇಚ್ಛ ಹಣವನ್ನು (Money)  ಖರ್ಚು ಮಾಡುತ್ತಿದ್ದು, ಕ್ಷೇತ್ರದೊಳಗೆ ರಾಜಕೀಯವಾಗಿ ಹೆಸರು ಮಾಡಲು ನಾನಾ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಜನಪ್ರಿಯತೆ ಪಡೆದುಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹಳೆಯ ಹುಲಿಗಳಿಗಿಂತ ಹೊಸಬರ ಭರಾಟೆ ಎಲ್ಲೆಡೆ ಜೋರಾಗಿ ಸದ್ದು ಮಾಡುತ್ತಿದೆ.

ಕ್ಷೇತ್ರದ ಜನರ ವಿಶ್ವಾಸ ಸಂಪಾದಿಸಲು ಹೊಸಬರು ಆಡುತ್ತಿರುವ ಚೆಲ್ಲಾಟ ಹಳಬರಿಗೆ ಪ್ರಾಣಸಂಕಟವನ್ನು ತಂದೊಡ್ಡಿದೆ. ಚುನಾವಣೆ ಇನ್ನು ಮೂರು ತಿಂಗಳಿರುವ ವೇಳೆಗೆ ಸಕ್ರಿಯರಾಗುತ್ತಿದ್ದ ಹಳಬರು ಇದೀಗ ಆರು ತಿಂಗಳು ಮುಂಚಿತವಾಗಿಯೇ ಅಖಾಡಕ್ಕಿಳಿಯುವ ಅನಿವಾರ್ಯ ಪರಿಸ್ಥಿತಿಯನ್ನು ಹೊಸಬರು ತಂದೊಡ್ಡಿದ್ದಾರೆ.

ವರ್ಷದಿಂದಲೇ ಸಕ್ರಿಯ:

ಚುನಾವಣಾ ಆಕಾಂಕ್ಷಿಗಳಾಗಿರುವ ಹೊಸಬರಲ್ಲಿ ಹಲವರು ಕಳೆದೊಂದು ವರ್ಷದಿಂದಲೇ ಕ್ಷೇತ್ರದೊಳಗೆ ಸಕ್ರಿಯರಾಗಲು ಕಾರ್ಯಚಟುವಟಿಕೆ ಆರಂಭಿಸಿದ್ದಾರೆ. ಹಲವಾರು ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಾ ಕ್ಷೇತ್ರದೊಳಗೆ ಅಸ್ತಿತ್ವ ಕಂಡುಕೊಳ್ಳುವುದರೊಂದಿಗೆ ಜನರನ್ನು ಓಲೈಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. ತಮ್ಮದೇ ಆದ ವೋಟ್‌ಬ್ಯಾಂಕ್‌ ಸೃಷ್ಟಿಸಿಕೊಳ್ಳುವುದಕ್ಕೆ ಕಾರ್ಯೋನ್ಮುಖರಾಗಿದ್ದು, ಕಾರ್ಯಕ್ರಮಗಳಿಗೆ ಕೆಲವರು ಲಕ್ಷಾಂತರ ರು. ಹಣವನ್ನು ಚೆಲ್ಲಿದರೆ, ಮತ್ತೆ ಕೆಲವರು ಒಂದು ಕೋಟಿ ರು.ವರೆಗೆ ಹಣ ತಂದು ಸುರಿದಿದ್ದಾರೆ. ಸಮಾಜಸೇವೆ ಹೆಸರಿನಲ್ಲಿ ರಾಜಕೀಯ ಪ್ರವೇಶಾಕಾಂಕ್ಷಿಗಳು ಹಣ ಖರ್ಚು ಮಾಡುವುದರೊಂದಿಗೆ ಹಳಬರ ಮೈ ಬೆವರಿಳಿಸುತ್ತಿದ್ದಾರೆ. ಕೆಲವರು ಹಳಬರಲ್ಲಿ ಸೋಲಿನ ಭೀತಿಯನ್ನೂ ಸೃಷ್ಟಿಸಿರುವುದು ಸುಳ್ಳೇನಲ್ಲ.

ಇದೀಗ ಚುನಾವಣೆಗೆ ಇನ್ನೂ ಆರು ತಿಂಗಳಿದೆ. ಆಗಲೇ ಮದ್ದೂರು, ನಾಗಮಂಗಲ, ಮಂಡ್ಯ, ಕೆ.ಆರ್‌.ಪೇಟೆ, ಶ್ರೀರಂಗಪಟ್ಟಣ ಕ್ಷೇತ್ರಗಳಲ್ಲಿ ಬಿರುಸಿನ ಪೈಪೋಟಿ ಏರ್ಪಟ್ಟು ಚುನಾವಣಾ ರಂಗನ್ನು ತುಂಬಿಕೊಳ್ಳಲಾರಂಭಿಸಿವೆ. ಮಳವಳ್ಳಿ ಹಾಗೂ ಪಾಂಡವಪುರ ಕ್ಷೇತ್ರಗಳಲ್ಲಿ ಹೆಚ್ಚಿನ ಹೊಸ ಮುಖಗಳಿಲ್ಲದ ಕಾರಣ ಅಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ.

ಹಳಬರೆದುರು ಶಕ್ತಿ ಪ್ರದರ್ಶನ:

ಜಿಲ್ಲೆಯ ಹಲವು ಕ್ಷೇತ್ರಗಳೊಳಗೆ ರಾಜಕೀಯವಾಗಿ ಗುರುತಿಸಿಕೊಳ್ಳಲು ಹೊಸ ಆಕಾಂಕ್ಷಿಗಳು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದ್ದಾರೆ. ಜನರನ್ನು ಆಕರ್ಷಿಸುವಂತೆ ಆರೋಗ್ಯ ಮೇಳ, ಉದ್ಯೋಗ ಮೇಳ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಧನಸಹಾಯ, ಮಳೆಯಿಂದ ಹಾನಿಗೊಳಗಾದವರಿಗೆ ಆರ್ಥಿಕ ನೆರವು, ಶಾಲಾ ಮಕ್ಕಳಿಗೆ ಸ್ಕೂಲ್‌ ಬ್ಯಾಗ್‌, ಧಾರ್ಮಿಕ ಯಾತ್ರೆ, ಋುತುಮತಿಯಾದ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ, ನೀರಿನ ಕ್ಯಾನ್‌ ವಿತರಣೆ, ಕನ್ನಡ ರಾಜ್ಯೋತ್ಸವ ಹೆಸರಿನಲ್ಲಿ ಕನ್ನಡ ಹಬ್ಬ, ಗಣಪತಿ ಪ್ರತಿಷ್ಠಾಪನೆಗೆ ನೆರವು, ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಕ್ರೀಡಾ ಸಾಮಗ್ರಿಗಳ ವಿತರಣೆ, ಕ್ರೀಡಾಕೂಟಗಳ ಆಯೋಜನೆಗೆ ನೆರವು ಸೇರಿದಂತೆ ಹಲವಾರು ರೀತಿಯ ಸೇವಾ ಕಾರ್ಯಗಳನ್ನು ಹೊಸ ಆಕಾಂಕ್ಷಿಗಳು ನಿರಂತರವಾಗಿ ನಡೆಸಿಕೊಂಡು ಬರುವುದರೊಂದಿಗೆ ಹಳಬರೆದುರು ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ.

ಅಸ್ತಿತ್ವ ಉಳಿವಿಗೆ ಕ್ಷೇತ್ರ ಸಂಚಾರ:

ಹೊಸ ಮುಖಗಳು ಕ್ಷೇತ್ರದೊಳಗೆ ಹೆಚ್ಚು ಸಕ್ರಿಯರಾಗುತ್ತಿರುವುದನ್ನು ಕಂಡ ಹಳೆಯ ಹುಲಿಗಳು ಇದೀಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಕ್ಷೇತ್ರದೊಳಗೆ ಸಂಚರಿಸುವುದು, ಮುಖಂಡರ ಮನೆಗಳಿಗೆ ಭೇಟಿ ಕೊಟ್ಟು ಮಾತುಕತೆ ನಡೆಸುವುದು, ಪಂಚಾಯ್ತಿವಾರು ಸಭೆ-ಸಮಾರಂಭಗಳನ್ನು ಆಯೋಜಿಸಿ ಔತಣ ಕೂಟಗಳನ್ನು ಏರ್ಪಡಿಸುವುದಕ್ಕೆ ಮುಂದಾಗಿದ್ದಾರೆ.

ಚುನಾವಣೆ ಸಮೀಪಿಸುವವರೆಗೆ ಕಾದುಕುಳಿತರೆ ಹೊಸ ಮುಖಗಳ ಅಬ್ಬರದ ನಡುವೆ ತಾವೆಲ್ಲಿ ಕಳೆದುಹೋಗುವೆವೋ ಎಂಬ ಭಯವೂ ಅವರನ್ನು ಕಾಡುತ್ತಿದೆ. ಹಣವಿರುವವರ ಕಡೆಗೆ ಮತದಾರರು ವಾಲಿದರೆ ಮುಂದೆ ತಮ್ಮ ರಾಜಕೀಯ ಭವಿಷ್ಯದ ಕತೆ ಏನು ಎಂಬ ಆತಂಕದಿಂದ ಈಗಲೇ ಅಖಾಡ ಪ್ರವೇಶಿಸಿ ಜನರಿಗೆ ಹತ್ತಿರವಾಗುವುದಕ್ಕೆ ಕಾರ್ಯೋನ್ಮುಖರಾಗಿದ್ದಾರೆ.

ಹಳೆಯ ಹುಲಿಗಳ ಪೈಕಿ ನಾಗಮಂಗಲದಲ್ಲಿ ಎನ್‌.ಚಲುವರಾಯಸ್ವಾಮಿ, ಎಲ್‌.ಆರ್‌.ಶಿವರಾಮೇಗೌಡ, ಮದ್ದೂರಿನಲ್ಲಿ ಡಿ.ಸಿ.ತಮ್ಮಣ್ಣ, ಮೇಲುಕೋಟೆಯಲ್ಲಿ ಸಿ.ಎಸ್‌.ಪುಟ್ಟರಾಜು, ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯ ಅವರನ್ನು ಹೊರತುಪಡಿಸಿದಂತೆ ಉಳಿದವರು ಇನ್ನೂ ಚುನಾವಣಾ ಕಾರ್ಯಚಟುವಟಿಕೆಯಲ್ಲಿ ಸಕ್ರಿಯರಾಗಲು ಮುಂದಾಗಿಲ್ಲ. ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ, ಶಾಸಕ ಕೆ.ಸುರೇಶ್‌ಗೌಡ ಅವರಿನ್ನೂ ಈಗಲೇ ಚುನಾವಣಾ ಅಖಾಡ ಪ್ರವೇಶಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈಗಿನಿಂದಲೇ ಹಣ ಖರ್ಚು ಮಾಡುತ್ತಾ ಹೋದರೆ ಚುನಾವಣೆ ವೇಳೆಗೆ ಹಣ ಖಾಲಿಯಾಗಬಹುದೆಂಬ ಆತಂಕ ಅವರನ್ನು ಕಾಡುತ್ತಿದೆ. ಅದಕ್ಕಾಗಿ ಚುನಾವಣೆ ಮೂರ್ನಾಲ್ಕು ತಿಂಗಳಿರುವಾಗ ರಣರಂಗ ಪ್ರವೇಶಿಸುವ ಆಲೋಚನೆಯಲ್ಲಿದ್ದಾರೆ.

ಈ ಬಾರಿ ಪೈಪೋಟಿ ಜೋರು:

ಹಿಂದಿನ ನಡೆದ ಚುನಾವಣೆಗಳಲ್ಲೆಲ್ಲಾ ಹಳೆಯ ಸಾಂಪ್ರದಾಯಿಕ ಎದುರಾಳಿಗಳ ನಡುವೆಯೇ ನೇರ ಸ್ಪರ್ಧೆ ಏರ್ಪಡುತ್ತಿತ್ತು. ಆದರೆ, ಈಗ ಎರಡು-ಮೂರು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ತ್ರಿಕೋನ, ಚತುಷ್ಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಬಿ-ಫಾರಂ ಪಡೆಯುವುದನ್ನು ಏಕೈಕ ಗುರಿಯಾಗಿಸಿಕೊಂಡಿರುವ ಹೊಸ ಆಕಾಂಕ್ಷಿಗಳು ರಾಜಕೀಯ ನಾಯಕರ ಬೆನ್ನುಹತ್ತಿ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಹೊಸಬರ ಅಬ್ಬರದ ನಡುವೆ ಹಲವು ಕ್ಷೇತ್ರಗಳಲ್ಲಿ ಹಳಬರು ಕಳೆದೇಹೋಗುತ್ತಿದ್ದಾರೆ. ಹೊಸದಾಗಿ ರಾಜಕೀಯ ಪ್ರವೇಶಿಸುತ್ತಿರುವವರಲ್ಲಿ ಹೆಚ್ಚಿನವರು ಉದ್ಯಮಿಗಳು, ಬಿಲ್ಡರ್‌ಗಳೇ ಆಗಿದ್ದಾರೆ. ಅವರಾರ‍ಯರಿಗೂ ದುಡ್ಡು ಲೆಕ್ಕವೇ ಇಲ್ಲ. ಜನರ ಮಧ್ಯದಲ್ಲಿ ಗುರುತಿಸಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕು. ಅದಕ್ಕೆ ಏನೆಲ್ಲಾ ಕಾರ್ಯತಂತ್ರಗಳೊಂದಿಗೆ ಸಜ್ಜಾಗಬೇಕೋ ಅದೆಲ್ಲವನ್ನೂ ರೆಡಿ ಮಾಡಿಕೊಳ್ಳುತ್ತಿದ್ದಾರೆ.

ಹೊಸಬರು ಇಷ್ಟೆಲ್ಲಾ ಸೇವಾ ಕಾರ್ಯಗಳಿಗೆ ಹಣ ಖರ್ಚು ಮಾಡಿ ಚುನಾವಣಾ ತಾಲೀಮು ಆರಂಭಿಸಿರುವ ಆಕಾಂಕ್ಷಿಗಳಲ್ಲಿ ಜನಮಾನಸದೊಳಗೆ ರಾಜಕೀಯ ನಾಯಕನಾಗಿ ಹೊರಹೊಮ್ಮುವ ಸಾಮರ್ಥ್ಯ ಎಷ್ಟುಮಂದಿಗಿದೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಅದನ್ನು ಚುನಾವಣೆಯವರೆಗೆ ಕಾದುನೋಡಬೇಕಿದೆ.

Follow Us:
Download App:
  • android
  • ios