Asianet Suvarna News Asianet Suvarna News

ಶಿವಮೊಗ್ಗ: ಕೇಶವಮೂರ್ತಿ ನಿಧನ, ಮಾಯವಾದ ಗಮಕ ಮಾಂತ್ರಿಕ..!

ಕೇಶವಮೂರ್ತಿಗಳ ಮನೋಧರ್ಮ, ಸಾಹಿತ್ಯದ ಕುರಿತಾದ ಆಳವಾದ ಔಚಿತ್ಯ ಪ್ರಜ್ಞೆ ,ಕವಿಯ ಭಾವಕ್ಕೆ ಬೇಕಾದ ರಾಗಗಳ ಬಳಕೆ, ಪದ್ಯದಲ್ಲಿ ಅಡಕವಾಗಿರುವ ರಸವನ್ನು ಸಮರ್ಥವಾಗಿ ಗ್ರಹಿಸಿ ಅವರು ಹಾಡುತ್ತಿದ್ದ ರೀತಿ ಎಲ್ಲವೂ ಇನ್ನು ನೆನಪು ಮಾತ್ರ. 

Late Kesavamurthy Contribute to Gamaka Art grg
Author
First Published Dec 21, 2022, 10:36 PM IST

ವಿನಯ್ ಶಿವಮೊಗ್ಗ

ಶಿವಮೊಗ್ಗ(ಡಿ.21):  ಹತ್ತು-ಇಪ್ಪತ್ತು ವರ್ಷ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ ಕಲಾವಿದನೂ ಗಮಕ ಗಂಧರ್ವ ಕೇಶವಮೂರ್ತಿಗಳ ಪ್ರತಿಭೆಗೆ ಸಮನಾಗಲಾರ….. ಪದ್ಯದಿಂದ ಪದ್ಯಕ್ಕೆ ಅವರು ವಾಚನಕ್ಕೆ ಬಳಸುತ್ತಿದ್ದ ರಾಗಗಳು ಹಾ ಆಕ್ಷಣದಲ್ಲಿ ರಾಗದಿಂದ ರಾಗಕ್ಕೆ ಅವರು ಬದಲಿಸಿ ಹಾಡುತ್ತಿದ್ದ ಪರಿ ಅಮೋಘವಾಗಿತ್ತು. ಅವರ ಮನೋಧರ್ಮ, ಸಾಹಿತ್ಯದ ಕುರಿತಾದ ಆಳವಾದ ಔಚಿತ್ಯ ಪ್ರಜ್ಞೆ, ಕವಿಯ ಭಾವಕ್ಕೆ ಬೇಕಾದ ರಾಗಗಳ ಬಳಕೆ, ಪದ್ಯದಲ್ಲಿ ಅಡಕವಾಗಿರುವ ರಸವನ್ನು ಸಮರ್ಥವಾಗಿ ಗ್ರಹಿಸಿ ಅವರು ಹಾಡುತ್ತಿದ್ದ ರೀತಿ ಎಲ್ಲವೂ ಇನ್ನು ನೆನಪು ಮಾತ್ರ. 

ಗಮಕ ಕಲೆಗೆ ಮೊಟ್ಟ ಮೊದಲ ಪದ್ಮಶ್ರೀ ಪ್ರಶಸ್ತಿ ಪಡೆದು ಕಲಾ ಪ್ರಪಂಚವೇ ಗಮಕ ಕಲೆಯತ್ತ ತಿರುಗಿ ನೋಡುವಂತೆ ಮಾಡಿದವರು. ಕೇಶವ ಮೂರ್ತಿಗಳ ಗಮಕ ವಾಚನದಲ್ಲಿ ಅವರ ಧ್ವನಿ ಎಂದೂ ಮೆರೆಯುತ್ತಿರಲಿಲ್ಲ. ಕವಿಯ ಭಾವ ಎದ್ದು ಕಾಣುತ್ತಿತ್ತು. ಗುದುಗಿನ ಭಾರತ ವಾಚಿಸುತ್ತಿದ್ದರೆ ಕುಮಾರವ್ಯಾಸನೇ ರಾರಾಜಿಸುತ್ತಿದ್ದನು.  

Shivamogga: ಪದ್ಮಶ್ರೀ ಪುರಸ್ಕೃತ ಗಮಕ ಗಂಧರ್ವ ಕೇಶವಮೂರ್ತಿ ಇನ್ನಿಲ್ಲ

ಕೇಶವ ಮೂರ್ತಿಗಳು ಗಮಕ ವಾಚಿಸುತ್ತಿದ್ದರೆ ವ್ಯಾಖ್ಯಾನಕ್ಕೆ ಪಕ್ಕದಲ್ಲಿ ಕೂತ ಮಾರ್ಕಂಡೇಯ ಅವಧಾನಿಗಳು ಗದ್ಗದಿತರಾಗುತ್ತಿದ್ದರು, ಮತ್ತೂರು ಕೃಷ್ಣಮೂರ್ತಿಗಳು ಕಣ್ಣೀರಿಡುತ್ತಿದ್ದರು. ಎದುರು ಕೂತು ಕೇಳುವ ಪ್ರೇಕ್ಷರರ ಎದೆಯಲ್ಲಿ ಕುಮಾರವ್ಯಾಸನ ಕೃಷ್ಣ ಕಥೆ ಚಿರಸ್ಥಾಯಿಯಾಗುತ್ತಿತ್ತು. 

ಘನವೆತ್ತ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುವಾಗ ಏನೂ ಅರಿಯದ ಮುಗ್ಧ ಮಗುವಿನಂತೆ ನನಗೆ ಕಂಡಿದ್ದರು. ಒಂದು ಕಲೆಯನ್ನು ಜೀವನದಾದ್ಯಂತ ತಪಸ್ಸಿನಂತೆ ಸಿದ್ಧಿಸಿಕೊಂಡವರು ಮಗುವಿನಂತಾಗುತ್ತಾರೆ  ಏಕೆಂದರೆ ಮಗುವಿನಂತಾದವರು ಮಾತ್ರ ದೇವರಾಗಲು ಸಾಧ್ಯ. ಗಮಕ ಗ್ರಾಮ ಹೊಸಹಳ್ಳಿ ತನ್ನ ಗಮಕ ಗಂಧರ್ವನನ್ನು ಕಳೆದುಕೊಂಡು ಒಂದು ಭವ್ಯ ಅಧ್ಯಾಯದ ಮಂಗಳಕ್ಕೆ ಸಾಕ್ಷಿಯಾಗಿದೆ.

ಮೋದಿ ಸಂತಾಪ: 
ಗಮಕವನ್ನು ಜನಪ್ರಿಯಗೊಳಿಸಲು ಮತ್ತು ಕರ್ನಾಟಕದ ವಿಶಿಷ್ಟ ಸಂಸ್ಕೃತಿ ಆಚರಣೆಗಾಗಿ ಶ್ರೀ ಎಚ್.ಆರ್.ಕೇಶವ ಮೂರ್ತಿ ಅವರ ಪ್ರಯತ್ನವನ್ನು ನಾವು ಸದಾ ಸ್ಮರಿಸುತ್ತೇವೆ. ಹಲವು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾರ್ಗದರ್ಶನಕ್ಕಾಗಿ ಅವರು ನೆನಪಾಗುತ್ತಾರೆ. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ಸಂತಾಪಗಳು. ಓಂ ಶಾಂತಿ, ಎಂದು ಕನ್ನಡದಲ್ಲಿಯೇ ಟ್ವೀಟ್ ಮಾಡಿ, ಅಗಲಿದ ದಿಗ್ಗಜನಿಗೆ ನಮನ ಸಲ್ಲಿಸಿದ್ದಾರೆ. 

ಪದ್ಮಶ್ರೀ ಪಡೆದ ನಂತರ ಕೇಶವಮೂರ್ತಿಗಳ ಕೈಯನ್ನು ತಮ್ಮ ತಲೆ ಮೇಲೆ ಇರಿಸಿಕೊಂಡು ಪ್ರಧಾನಿ ಆಶೀರ್ವಾದ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. 

 

Follow Us:
Download App:
  • android
  • ios