ಶಿರಾಡಿ ಸುರಂಗ ಹೆದ್ದಾರಿ ಕಾರ್ಯಸಾಧುವಲ್ಲ: ಕೇಂದ್ರ ಸಚಿವ ಗಡ್ಕರಿ
ಬಹು ವರ್ಷಗಳಿಂದ ಪ್ರಸ್ತಾಪಿತ ಯೋಜನೆಗೆ ಎಳ್ಳುನೀರು, ಬೃಹತ್ ಬಂಡವಾಳ, ಸವಾಲಿನ ಕೆಲಸ ಕಾರಣ: ಕೇಂದ್ರ ಹೆದ್ದಾರಿ, ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ
ಮಂಗಳೂರು(ಡಿ.12): ಕಳೆದ ಹಲವು ವರ್ಷಗಳಿಂದ ಪ್ರಸ್ತಾಪಿತ ಶಿರಾಡಿ ಘಾಟ್ ಸುರಂಗ ಮಾರ್ಗ ಹೆದ್ದಾರಿ ಯೋಜನೆ ಕಾರ್ಯ ಸಾಧ್ಯವಲ್ಲ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದ್ದು, ಈ ಯೋಜನೆ ಕೈತಪ್ಪುವ ಸೂಚನೆ ದೊರೆತಿದೆ. ಲೋಕಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರ ಪ್ರಶ್ನೆಗೆ ಕೇಂದ್ರ ಹೆದ್ದಾರಿ, ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ನೀಡಿದ ಉತ್ತರದಲ್ಲಿ ಈ ವಿಚಾರ ಉಲ್ಲೇಖಿಸಿದ್ದಾರೆ. ಈ ಯೋಜನೆಯು ಅತಿ ಸವಾಲಿನದ್ದಾಗಿದ್ದು, ದೊಡ್ಡ ಮೊತ್ತದ ಬಂಡವಾಳ ಬೇಕಾಗುತ್ತದೆ. ಹಾಗಾಗಿ ಇದು ಕಾರ್ಯಸಾಧುವಲ್ಲ ಎಂದಿದ್ದಾರೆ.
ಸುರಂಗ ಹೆದ್ದಾರಿ ಬದಲಿಗೆ ಶಿರಾಡಿ ಘಾಟ್ ಹೆದ್ದಾರಿ ಭಾಗದಲ್ಲಿ ಸಂಚಾರ ದಟ್ಟಣೆ ಸುಗಮಗೊಳಿಸಲು ಈಗಿರುವ ದ್ವಿಪಥ ಹೆದ್ದಾರಿಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲಾಗುತ್ತದೆ, ಇದಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸಾಧ್ಯತಾ ವರದಿ (ಡಿಪಿಆರ್) ತಯಾರಿಕೆ ತಜ್ಞರನ್ನು ನೇಮಿಸಿದ್ದಾರೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ಶಿರಾಡಿ ಘಾಟ್ ರಸ್ತೆ ಗುಂಡಿಮಯ: ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ
ಕಳೆದ ಫೆಬ್ರವರಿಯಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸಕ್ಕಾಗಿ ಮಂಗಳೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, 6 ಲೇನ್‌ನ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆ ಮಾಡುವುದಾಗಿಯೂ, ಅದಕ್ಕಾಗಿ 14 ಸಾವಿರ ಕೋಟಿ ರು. ಯೋಜನೆ ಸಿದ್ಧವಾಗಿದೆ ಎಂದೂ ತಿಳಿಸಿದ್ದರು. ಆಸ್ಟ್ರಿಯಾ ಮೂಲದ ಜಿಯೊ ಕನ್ಸಲ್ಟ್ ಇಂಡಿಯಾ ಸಂಸ್ಥೆ ಡಿಪಿಆರ್ ಕೂಡ ಸಿದ್ಧಪಡಿಸಿತ್ತು. 23.5 ಕಿ.ಮೀ ಉದ್ದದ ಸುರಂಗ ಮಾರ್ಗ ಯೋಜನೆಯಲ್ಲಿ 6 ಸುರಂಗಗಳು, 7 ಸೇತುವೆಗಳು ಸೇರಿದ್ದವು. ಸುರಂಗ ಯೋಜನೆ ಕಾರ್ಯಗತವಾದರೆ ಘಾಟ್ ಪ್ರದೇಶದ ಪ್ರಯಾಣ ಸಮಯದಲ್ಲಿ ಕನಿಷ್ಠ ಒಂದು ಗಂಟೆ ಕಡಿಮೆ ಮಾಡುವ ಉದ್ದೇಶವಿತ್ತು.
ಮಡಿಕೇರಿ- ಮೈಸೂರು ಚತುಷ್ಪಥ
ಮಡಿಕೇರಿ- ಮೈಸೂರು ಚತುಷ್ಪಥ ಯೋಜನೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಗಡ್ಕರಿ, ಎನ್‌ಎಚ್ 275ರ ಮಡಿಕೇರಿ- ಮೈಸೂರು ಐದು ಪ್ಯಾಕೇಜ್‌ಗಳನ್ನು ಹೊಂದಿದ್ದು, ಪ್ಯಾಕೇಜ್ 1ರ 27 ಕಿ.ಮೀ.ಗಳ ಡಿಪಿಆರ್ ಕೆಲಸ ಪ್ರಗತಿಯಲ್ಲಿದೆ. 92 ಕಿ.ಮೀ.ನ ಎರಡನೇ ಪ್ಯಾಕೇಜ್‌ಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.
ತೀರ್ಥಹಳ್ಳಿ- ಮಲ್ಪೆ ಚತುಷ್ಪಥ ಕಾಮಗಾರಿಯಲ್ಲಿ ಪರ್ಕಳದಿಂದ ಮಲ್ಪೆ ಮಧ್ಯೆ 9 ಕಿ.ಮೀ ಭಾಗವನ್ನು ಚತುಷ್ಪಥಗೊಳಿಸುವ ಕೆಲಸ ಶೇ.92ರಷ್ಟುಪೂರ್ಣಗೊಂಡಿದೆ, ಮುಂದಿನ ವರ್ಷ ಮಾಚ್‌ರ್ 31ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದೂ ತಿಳಿಸಿದ್ದಾರೆ.