ನೆರೆಯ ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು(Wayanad landslide) ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲೇ ರಾಜ್ಯದ ಕೆಲವೆಡೆ ಬೆಟ್ಟ ಕುಸಿತವಾಗಿದೆ. ಚಿಕ್ಕಮಗಳೂರಿನ ಚಂದ್ರಗಿರಿ ಪರ್ವತದಲ್ಲಿ ಭೂ ಕುಸಿತವಾಗಿದೆ. ಭೂ ಕುಸಿತದಿಂದಾಗಿ ನೇತ್ರಾವತಿ ಪೀಕ್, ದಿಡುಪೆ ಫಾಲ್ಸ್‌ ಪ್ರವೇಶ ನಿಷೇಧಿಸಲಾಗಿದೆ. 

 ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದ.ಕದಲ್ಲಿ ಭೂ ಕುಸಿತ । ಜನರಲ್ಲಿ ತೀವ್ರ ಆತಂಕ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು (ಜು.9): ನೆರೆಯ ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು(Wayanad landslide) ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲೇ ರಾಜ್ಯದ ಕೆಲವೆಡೆ ಬೆಟ್ಟ ಕುಸಿತವಾಗಿದೆ. ಚಿಕ್ಕಮಗಳೂರಿನ ಚಂದ್ರಗಿರಿ ಪರ್ವತದಲ್ಲಿ ಭೂ ಕುಸಿತವಾಗಿದೆ. ಭೂ ಕುಸಿತದಿಂದಾಗಿ ನೇತ್ರಾವತಿ ಪೀಕ್, ದಿಡುಪೆ ಫಾಲ್ಸ್‌ ಪ್ರವೇಶ ನಿಷೇಧಿಸಲಾಗಿದೆ. ಶಿವಮೊಗ್ಗದಲ್ಲಿ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದಿದ್ದು ಒಂದೇ ಕುಟುಂಬದ ಮೂವರು ಪ್ರಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಗುಡ್ಡ ಕುಸಿತದ ಆತಂಕದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಫಾಲ್ಸ್‌ (ಕಡಮಗುಂಡಿ), ನೇತ್ರಾವತಿ ಪೀಕ್‌ಗೆ ಜು.9, 10ರಂದು ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಬಳಿ ಭೂ ಕುಸಿತ ಉಂಟಾಗಿದ್ದು, ತಾತ್ಕಾಲಿಕವಾಗಿ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. ಇದಕ್ಕಾಗಿ ರಾಜಾಸೀಟ್‌ಗೆ ಪ್ರವೇಶ ನಿಷೇಧಿಸಲಾಗಿದೆ.

ಇನ್ನು ವಯನಾಡು ಟನಲ್‌ ಕಂಪನಿಯಿಂದ ಮಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿದೆ. ಕೆತ್ತಿಕಲ್‌ನಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ತಡೆಗೋಡೆ ನಿರ್ಮಿಸುತ್ತಿರುವ ಡಿಬಿಎಲ್‌ ಕಂಪನಿ ಅವೈಜ್ಞಾನಿಕವಾಗಿ ಮಣ್ಣು ತೆಗೆದಿತ್ತು. ಇದರಿಂದಾಗಿ ರಸ್ತೆಗೆ ಅಪಾರ ಪ್ರಮಾಣದ ಮಣ್ಣುಕಲ್ಲು ಬಿದ್ದಿದೆ. ಇದರಿಂದ ಗುಡ್ಡದ ಮೇಲ್ಭಾಗದ ನಿವಾಸಿಗಳಿಗೆ ಭಾರಿ ಆತಂಕದ ಸ್ಥಿತಿ ಆಗಿದೆ.

ಕರ್ನಾಟಕ-ಮಹಾರಾಷ್ಟ್ರ ಗಡಿಭಾಗಕ್ಕೆ ಸಮೀಪವಿರುವ ಪ್ರವಾಸಿ ತಾಣ ಅಂಬೋಲಿ ಫಾಲ್ಸ್ ಸಮೀಪ ತಡರಾತ್ರಿ ಭಾರಿ ಗುಡ್ಡ ಕುಸಿದು ನಾಲ್ಕು ಬೃಹತ್ ಬಂಡೆಗಳು ರಸ್ತೆಯ ಮೇಲೆ ಉರುಳಿ ಬಿದ್ದಿವೆ. ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನ ಅಂಬೋಲಿ ಘಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುಡ್ಡದ ಮೇಲ್ಭಾಗದಿಂದ ಏಕಾಏಕಿ ಬೃಹತ್ ಬಂಡೆಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಬೆಳಗಾವಿ-ಸಿಂಧದುರ್ಗ ನಡುವಿನ ವಾಹನ ಸಂಚಾರವನ್ನು ಮಧ್ಯರಾತ್ರಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.