ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ 14 ವರ್ಷಗಳೇ ಕಳೆದಿವೆ. ಆದರೆ ಈವರೆಗೂ 4040 ಎಕರೆ ಅಧಿಸೂಚಿತ ಭೂಮಿಯಲ್ಲಿ 1656 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸಫಲವಾಗಿಲ್ಲ.
ಬೆಂಗಳೂರು (ಜು.19): ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ 14 ವರ್ಷಗಳೇ ಕಳೆದಿವೆ. ಆದರೆ ಈವರೆಗೂ 4040 ಎಕರೆ ಅಧಿಸೂಚಿತ ಭೂಮಿಯಲ್ಲಿ 1656 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸಫಲವಾಗಿಲ್ಲ.
ಕೆಂಪೇಗೌಡ ಬಡಾವಣೆಯಲ್ಲಿ ಅಂತಿಮ ಅಧಿಸೂಚಿತ ಭೂಮಿಯ ಪೈಕಿ 2694 ಎಕರೆಯನ್ನು ಸ್ವಾಧೀನ ಪಡಿಸಿಕೊಂಡು ಅಭಿಯಂತರ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. 2217 ಎಕರೆ ಪ್ರದೇಶದಲ್ಲಿ ನಿವೇಶನಗಳನ್ನು ವಿಂಗಡಿಸಿ ಹಂಚಿ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. 167 ಎಕರೆಯಲ್ಲಿ ಕಾಮಗಾರಿಗಳು ಪ್ರಾರಂಭಕ್ಕೆ ಬಾಕಿಯಿವೆ. 309 ಎಕರೆ ಪ್ರದೇಶ ಅಭಿಯಂತರ ವಿಭಾಗಕ್ಕೆ ಹಸ್ತಾಂತರಿಸಿಲ್ಲ. ಆದರೆ ಈ ಪ್ರದೇಶದಲ್ಲಿ ರೈತರು ಮತ್ತು ಬಿಡಿಎ ನಡುವೆ ಪುನಃ ವ್ಯಾಜ್ಯ ಉಂಟಾಗಿರುವುದರಿಂದ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ.
ಮಿಲಿಟರಿ ವಸತಿ ಪ್ರದೇಶದಲ್ಲಿ ಬೀದಿ ನಾಯಿ ಗಣತಿಗೆ ಸಿಗುತ್ತಿಲ್ಲ ಅವಕಾಶ
ಪ್ರಸ್ತುತ 1655 ಎಕರೆ ಪ್ರದೇಶವನ್ನು ಇನ್ನು ಭೂಸ್ವಾಧೀನ ವಿಭಾಗವು ವಶಪಡಿಸಿಕೊಂಡು ಅಭಿಯಂತರ ವಿಭಾಗಕ್ಕೆ ಹಸ್ತಾಂತರಿಸಬೇಕಾಗಿದೆ. 600 ಎಕರೆ ವಿವಾದ ನ್ಯಾಯಾಲಯದಲ್ಲಿದೆ. 325 ಎಕರೆ ರೆವಿನ್ಯೂ ಬಡಾವಣೆ ಭೂಸ್ವಾಧೀನ ಪಡಿಸಿಕೊಂಡಿದೆ. 426 ಎಕರೆ ಸರ್ಕಾರಿ ಭೂಮಿಯಾಗಿದ್ದು, 309 ಎಕರೆ ಪ್ರದೇಶ ಅಭಿಯಂತರ ವಿಭಾಗಕ್ಕೆ ಹಸ್ತಾಂತರವಾಗಿಲ್ಲ. ಈ ಎಲ್ಲ ಕಾರಣದಿಂದ ಅಗತ್ಯ ಭೂಮಿ ಸಿಗದ ಪರಿಣಾಮ ಬಡಾವಣೆಯಲ್ಲಿ ರಸ್ತೆಗಳ ನಿರ್ಮಾಣ, ವಿದ್ಯುತ್ ಸಂಪರ್ಕ, ಯುಟಿಲಿಟಿ ಚೇಂಬರ್ ಸೇರಿದಂತೆ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ.
ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಜರ್ ಆರ್ಟೀರಿಯಲ್ ರಸ್ತೆ(ಎಂಎಆರ್) ನಿರ್ಮಾಣಕ್ಕೆ 260 ಎಕರೆ ಭೂಮಿ ಪಡೆಯಲು ಅಧಿಸೂಚನೆ ಹೊರಡಿಸಲಾಗಿತ್ತು. 238 ಎಕರೆ ಅಭಿಯಂತರ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. 22 ಎಕರೆ ಭೂಸ್ವಾಧೀನ ಇನ್ನೂ ಬಾಕಿ ಇದೆ. 160 ಎಕರೆ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 63 ಎಕರೆ ಪ್ರದೇಶದಲ್ಲಿ ರೈತರು ಅಭಿಯಂತರ ವಿಭಾಗಕ್ಕೆ ಕಾಮಗಾರಿಯನ್ನು ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ. 35 ಎಕರೆ ಹೊಸದಾಗಿ ವಶಪಡಿಸಿಕೊಂಡು ಅಭಿಯಂತರ ವಿಭಾಗಕ್ಕೆ ಹತ್ತಾಂತರಿಸಲಾಗಿದೆ.
ಎಂಎಆರ್ ರಸ್ತೆ ನಿರ್ಮಾಣಕ್ಕಾಗಿ ಇನ್ನೂ 83 ಎಕರೆ ಬೇಕಾಗಿದ್ದು, ವ್ಯಾಜ್ಯ ನಿವಾರಿಸಿಕೊಳ್ಳಬೇಕು. ಆ ನಂತರವೇ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯ. ಪ್ರಸ್ತುತ ಈವರೆಗೆ ಶೇ.60ರಷ್ಟುಮಾತ್ರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಉಳಿದ ಶೇ.40ರಷ್ಟುಪ್ರಮಾಣದ ಭೂಮಿ ಬಿಡಿಎ ಕೈವಶವಾಗಿಲ್ಲ ಎಂಬುದು ನಿವೇಶನದಾರರ ಆರೋಪ. ಹೀಗಾಗಿ ಪ್ರಾಧಿಕಾರಕ್ಕೆ ಆರ್ಥಿಕ ಹೊರೆ, ಭೂಸ್ವಾಧೀನ ಸಮಸ್ಯೆಯಿಂದಾಗಿ ಅಭಿಯಂತರ ವಿಭಾಗದ ಕಾಮಗಾರಿಗಳ ವೆಚ್ಚ ಮುಂದಿನ ದಿನಗಳಲ್ಲಿ ಅಂದಾಜಿಸಿದ ಮೊತ್ತಕ್ಕಿಂತ ಐದರಿಂದ ಆರುಪಟ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈತರನ್ನು ನಿರ್ಲಕ್ಷ್ಯಿಸಿದ್ದ ಬಿಡಿಎ: ಬಡಾವಣೆಗೆ ಭೂಮಿ ಕೊಟ್ಟರೈತರಿಗೆ ಮೊದಲ ಆದ್ಯತೆಯಾಗಿ ಅಭಿವೃದ್ಧಿಪಡಿಸಿದ ಭೂ ಪರಿಹಾರ ಕೊಡಬೇಕಿತ್ತು. ಆದರೆ, ಬಿಡಿಎ ರೈತರನ್ನು ನಿರ್ಲಕ್ಷ್ಯಿಸಿ, ನಿವೇಶನಗಳನ್ನು ನಿವೇಶನದಾರರಿಗೆ ಹಂಚಿದ ಬಳಿಕ ರೈತರಿಗೆ ಕೊಟ್ಟಿತು. ಜೊತೆಗೆ ಬಡಾವಣೆ ನಿರ್ಮಾಣಕ್ಕೆ ಬಡವರ ಜಮೀನುಗಳನ್ನು ಮಾತ್ರ ವಶಪಡಿಸಿಕೊಂಡಿದ್ದು, ಪ್ರಭಾವಿಗಳ ಭೂಮಿಯನ್ನು ವಶಪಡಿಸಿಕೊಂಡಿಲ್ಲ. ಪೂರ್ಣಪ್ರಮಾಣದಲ್ಲಿ ಭೂಮಿ ಸಿಗದ ಪರಿಣಾಮ ಬಡಾವಣೆಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದಂತಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಶಾಲಾ ವಿದ್ಯಾರ್ಥಿನಿಯರಿಂದಲೇ ತರಗತಿ ನೆಲ ಒರೆಸೋ ಕೆಲಸ ಮಾಡಿಸಿದ ಶಿಕ್ಷಕಿ!
ಅಂತಿಮ ಅಧಿಸೂಚನೆ ಆಗಿರುವಷ್ಟು ಜಾಗವನ್ನು ಸ್ವಾಧೀನಪಡಿಸಿಕೊಳ್ಳದ ಪರಿಣಾಮ ಬಡಾವಣೆಯಲ್ಲಿ ಲಕ್ಷಾಂತರ ರುಪಾಯಿ ಬ್ಯಾಂಕ್ ಸೇರಿದಂತೆ ಮತ್ತಿತರ ಮೂಲಗಳಿಂದ ಸಾಲ ಪಡೆದಿರುವ ನಿವೇಶನಗಳ ಮಾಲೀಕರು, ಮನೆ ಕಟ್ಟಿಕೊಳ್ಳಲಾಗದೆ, ಪಡೆದ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಅತಂತ್ರಕ್ಕೆ ಸಿಲುಕಿಕೊಂಡಿದ್ದಾರೆ. ಈ ನಡುವೆ ಬಿಡಿಎ ಮತ್ತೊಂದು ಪ್ರಮಾದ ಎಸಗಿದ್ದು, ಎನ್‌ಪಿಕೆಎಲ್ ನಿರ್ಮಾಣಕ್ಕೆ ಭೂಮಿ ಕೊಟ್ಟರೈತರಿಗೆ ಪರಿಹಾರ ಕೊಡದೆ, ಅವರಿಗೆ ಕಾಯ್ದಿರಿಸಿದ ಪರಿಹಾರದ ನಿವೇಶನಗಳನ್ನು ಅರ್ಕಾವತಿ ನಿವೇಶನದಾರರಿಗೆ ಮರು ಹಂಚಿಕೆ ಮಾಡುತ್ತಿರುವುದು ಮತ್ತು ಮಧ್ಯಂತರ ನಿವೇಶನಗಳನ್ನು ಹರಾಜು ಹಾಕಲಾಗುತ್ತಿದ್ದು, ಇದು ರೈತರಲ್ಲಿ ಬೇಸರ ತರಿಸಿದ್ದು, ಬಾಕಿ ಇರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಬಿಡುತ್ತಿಲ್ಲ.
