ಗದಗದ ಲಕ್ಕುಂಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನದ ನಿಧಿಯ ಹಿನ್ನೆಲೆಯಲ್ಲಿ, ಪುರಾತತ್ವ ಇಲಾಖೆಯು ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನ ಕಾರ್ಯವನ್ನು ಆರಂಭಿಸಿದೆ. ಸರ್ಕಾರವು ಇಡೀ ಗ್ರಾಮವನ್ನೇ ಸ್ಥಳಾಂತರಿಸುವ ಗಂಭೀರ ಚಿಂತನೆ ನಡೆಸುತ್ತಿದೆ.
ಗದಗ (ಜ.16): ತಾಲೂಕಿನ ಇತಿಹಾಸಿಕ ಪ್ರಸಿದ್ದ ಲಕ್ಕುಂಡಿ ಗ್ರಾಮದಲ್ಲಿ ಜ. 10ರಂದು ಅಪರೂಪದ ಚಿನ್ನದ ಆಭರಣ (ನಿಧಿ) ಪತ್ತೆಯಾದ ಬೆನ್ನಲ್ಲಿಯೇ ಸರ್ಕಾರ ಜ.16ರಿಂದ ಉತ್ಪನನ ಪ್ರಾರಂಭಿಸಲು ಮುಂದಾಗಿದೆ. ಮನೆಯ ಅಡಿಪಾಯ ತೆಗೆಯುವ ವೇಳೆ ಸುಮಾರು ಅರ್ಧ ಕೆಜಿ ಚಿನ್ನದ ಆಭರಣಗಳು ಸಿಕ್ಕಿದ್ದರಿಂದಾಗಿ ಲಕ್ಕುಂಡಿ ಈಗ ಎಲ್ಲರ ಗಮನ ಸೆಳೆದಿದೆ. ಗ್ರಾಮದ ಕೋಟೆ ವೀರಭದ್ರೇಶ್ವರ ದೇವ ಸ್ಥಾನ ಮುಂಭಾಗದಲ್ಲಿ ಆರಂಭಗೊಳ್ಳಲಿರುವ ಉತ್ಪನನ ಕಾರ್ಯವು ಅಧಿಕಾರಿಗಳು ಹಾಗೂ ಜನಸಾಮಾನ್ಯರಲ್ಲಿ ಕುತೂಹಲ ಮೂಡಿಸಿದೆ.
ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಮತ್ತು ಸಿದ್ದರ ಬಾವಿಗೆ ಸಂಪರ್ಕ ಇತ್ತು ಎಂದು ಇತಿಹಾಸದಲ್ಲಿ ಉಲ್ಲೇಖಗಳಿವೆ. ಉತ್ಪನನ ನಡೆಯುವ ಸ್ಥಳದ ಪಕ್ಕದ ಖಾಲಿ ಜಾಗದಲ್ಲಿ ಈ ಹಿಂದೆ ಗ್ರಾಮದಲ್ಲಿ ನಾಟಕ ಪ್ರದರ್ಶನದ ವೇಳೆ ಭೂಮಿ ಅಗೆಯುವ ಸಂದರ್ಭದಲ್ಲಿ ಕಟ್ಟಡದ ಅವಶೇಷಗಳು ದೊರೆತಿದ್ದವು. ಈಗ ಅದೇ ಸ್ಥಳದಲ್ಲಿಯೇ ಉತ್ಪನನ ಪ್ರಾರಂಭವಾಗಲಿದೆ.
ಇಡೀ ಗ್ರಾಮ ಸ್ಥಳಾಂತರಕ್ಕೆ ಚಿಂತನೆ
ಚಾಲುಕ್ಯರ ಕಲಾ ವೈಭವದ ತಾಣವಾದ ಲಕ್ಕುಂಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನದ ನಿಧಿಯು ದೊಡ್ಡ ಸಂಚಲನ ಮೂಡಿಸಿದೆ. ಈ ನಿಧಿಯ ಹಿಂದಿರುವ ಐತಿಹಾಸಿಕ ರಹಸ್ಯಗಳನ್ನು ಭೇದಿಸಲು ರಾಜ್ಯ ಸರ್ಕಾರ ಈಗ ಬೃಹತ್ ಕಾರ್ಯಾಚರಣೆಗೆ ಮುಂದಾಗಿದ್ದು, ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡುವ ಗಂಭೀರ ಚಿಂತನೆ ನಡೆಸಿದೆ.
48 ಸಿಬ್ಬಂದಿಯಿಂದ ಉತ್ಖನನ ಕಾರ್ಯ
ಪುರಾತತ್ವ ಇಲಾಖೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಒಟ್ಟು 48 ಸಿಬ್ಬಂದಿ ನೇತೃತ್ವದಲ್ಲಿ ಇಂದಿನಿಂದ ಅಧಿಕೃತವಾಗಿ ಉತ್ಖನನ ಕಾರ್ಯ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೇ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮೊದಲ ಹಂತದ ಸಂಶೋಧನೆ ನಡೆಯಲಿದೆ.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರು ಈ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, "ಲಕ್ಕುಂಡಿ ಗ್ರಾಮದ ಪ್ರತಿ ದೇವಸ್ಥಾನದ ಅಡಿಯಲ್ಲೂ ಅಪಾರ ಸಂಪತ್ತು ಇರುವ ಸಾಧ್ಯತೆಯಿದೆ. ಈ ಐತಿಹಾಸಿಕ ಸತ್ಯಗಳನ್ನು ಹೊರಹಾಕಲು ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ. ಗ್ರಾಮ ಸ್ಥಳಾಂತರವಾದರೆ ಮಾತ್ರ ಲಕ್ಕುಂಡಿಯ ಸಂಪೂರ್ಣ ವೈಭವ ಮತ್ತು ನಿಧಿಯ ರಹಸ್ಯಗಳು ಜಗತ್ತಿಗೆ ತಿಳಿಯಲಿವೆ ಎಂಬುದು ಸರ್ಕಾರದ ಆಶಯವಾಗಿದೆ.
ಲಕ್ಕುಂಡಿಯಲ್ಲಿ 101 ದೇವಸ್ಥಾನಗಳು ಮತ್ತು 101 ಬಾವಿಗಳಿವೆ ಎಂಬ ಪ್ರತೀತಿಯಿದೆ. ಈ ಹಿಂದೆ ನಿಧಿ ಸಿಕ್ಕಾಗ ಅದನ್ನು ಬಳಸಿಕೊಂಡ ಕುಟುಂಬಗಳು ಸರ್ವನಾಶವಾಗಿವೆ ಎಂಬ ಭಯವೂ ಗ್ರಾಮದ ಕೆಲವು ಹಿರಿಯರಲ್ಲಿದೆ. ಮತ್ತೊಂದೆಡೆ, ನಿಧಿಗಳ್ಳರ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.


