ಗದಗದ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಹಣತೆ ಆಕಾರದ ಲೋಹದ ತುಂಡು ಪತ್ತೆಯಾಗಿದೆ. ಆದರೆ, ಬಯೋಮೆಟ್ರಿಕ್ ಹಾಜರಾತಿಯಿಂದ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದು, ಸಮೀಪದ ಐತಿಹಾಸಿಕ ಸಿದ್ಧರ ಬಾವಿ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಏಳನೇ ದಿನಕ್ಕೂ ಮುಂದುವರಿದಿದ್ದು, ಒಂದೆಡೆ ಪುರಾತತ್ವ ಮಹತ್ವದ ಅವಶೇಷಗಳ ಪತ್ತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಕಾರ್ಮಿಕರು ಹಲವು ತಾಂತ್ರಿಕ ಹಾಗೂ ಮೂಲಸೌಕರ್ಯ ಸಮಸ್ಯೆಗಳ ನಡುವೆ ಹೋರಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ತಲೆ ನೋವು ತಂದ ಬಯೋಮೆಟ್ರಿಕ್ ಹಾಜರಾತಿ
ಉತ್ಖನನ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೆ ಬಯೋಮೆಟ್ರಿಕ್ ಹಾಜರಾತಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆಲ ಕಾರ್ಮಿಕರ ಬೆರಳಚ್ಚನ್ನು ಯಂತ್ರ ಸ್ವೀಕರಿಸದೇ ಇರುವುದರಿಂದ ಹಾಜರಾತಿ ದಾಖಲಿಸುವಲ್ಲಿ ತೊಂದರೆ ಉಂಟಾಗಿದೆ. ಹಾಜರಾತಿ ದಾಖಲಾಗದಿದ್ದರೆ ವೇತನವೂ ದೊರಕುವುದಿಲ್ಲ. ಕೆಲಸ ನಿಲ್ಲಿಸುವಂತೆಯೂ ಇಲ್ಲ. ಕಲ್ಲು ಮತ್ತು ಮಣ್ಣಿನಲ್ಲಿ ಕೆಲಸ ಮಾಡುವುದರಿಂದ ಕೈಗಳು ಜಡ್ಡು ಹಿಡಿದ ಪರಿಣಾಮವಾಗಿ, ಕಾರ್ಮಿಕರು ಬೆರಳಚ್ಚು ನೀಡಲು ಸಾಕಷ್ಟು ಪ್ರಯತ್ನ ಪಟ್ಟರೂ ಯಂತ್ರ ಸ್ಪಂದಿಸದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾರ್ಮಿಕರು ಕೆಲಕಾಲ ಪರದಾಟ ನಡೆಸಿದರು. ಕೊನೆಗೆ ಹಾಜರಾತಿ ಪುಸ್ತಕದಲ್ಲಿ ಕೈಯಾರೆ ನೋಂದಣಿ ಮಾಡಿ ಕೆಲಸ ಮುಂದುವರೆಸಲಾಯ್ತು.
ಹಣತೆ ಆಕಾರದಲ್ಲಿರುವ ಲೋಹದ ತುಂಡು ಪತ್ತೆ
ಇದೀಗ ಲಕ್ಕುಂಡಿಯಲ್ಲಿ ಉತ್ಖನನದ ಏಳನೇ ದಿನದ ಕಾರ್ಯ ಆರಂಭಗೊಂಡಿದೆ. ಪುರಾತತ್ವ ಇಲಾಖೆ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಈ ಉತ್ಖನನ ನಡೆಯುತ್ತಿದೆ. ಕಳೆದ ಆರು ದಿನಗಳಲ್ಲಿ ಅನೇಕ ಅಪರೂಪದ ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಇಂದು ಕೂಡ ಇನ್ನಷ್ಟು ಮಹತ್ವದ ಅವಶೇಷಗಳು ಸಿಗುವ ನಿರೀಕ್ಷೆ ಇದೆ. ಸುಮಾರು 35 ಕಾರ್ಮಿಕರು ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಭೂಮಿ ಅಗೆದಂತೆಲ್ಲಾ ಹೊಸ ಹೊಸ ಅವಶೇಷಗಳು ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಉತ್ಖನನದ ಏಳನೇ ದಿನದ ಆರಂಭದಲ್ಲೇ ಹಣತೆ ಆಕಾರದಲ್ಲಿರುವ ಲೋಹದ ತುಂಡೊಂದು ಪತ್ತೆಯಾಗಿದೆ. ಇದು ಹಿಂದಿನ ಕಾಲದಲ್ಲಿ ಕರ್ಪೂರ ಬೆಳಗಲು ಬಳಸುತ್ತಿದ್ದ ಲೋಹದ ವಸ್ತುವಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಪತ್ತೆಯಾದ ಲೋಹದ ತುಂಡನ್ನು ಸ್ವಚ್ಛಗೊಳಿಸಿ ಸಿಬ್ಬಂದಿ ಸುರಕ್ಷಿತವಾಗಿ ಇರಿಸಿದ್ದು, ತಜ್ಞರ ಪರಿಶೀಲನೆಯ ಬಳಿಕ ಇದು ಯಾವ ಕಾಲಕ್ಕೆ ಸೇರಿದದ್ದು ಹಾಗೂ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು ಎಂಬ ಬಗ್ಗೆ ಸ್ಪಷ್ಟತೆ ದೊರೆಯಲಿದೆ.
ಐತಿಹಾಸಿಕ ಸಿದ್ಧರ ಬಾವಿಯ ದುಸ್ಥಿತಿ ಬಗ್ಗೆ ಆಕ್ರೋಶ
ಇನ್ನೊಂದೆಡೆ, ಉತ್ಖನನ ನಡೆಯುತ್ತಿರುವ ಸ್ಥಳದಿಂದ ಕೂಗಳತೆ ದೂರದಲ್ಲೇ ಇರುವ ಐತಿಹಾಸಿಕ ಸಿದ್ಧರ ಬಾವಿಯ ದುಸ್ಥಿತಿ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಈ ಸಿದ್ಧರ ಬಾವಿ, “101 ಬಾವಿ – 101 ದೇವಸ್ಥಾನ”ಗಳ ಖ್ಯಾತಿಗೆ ಪಾತ್ರವಾಗಿರುವ ಲಕ್ಕುಂಡಿಯ ಪ್ರಮುಖ ಜಲಸಂಪನ್ಮೂಲಗಳಲ್ಲಿ ಒಂದಾಗಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನ ಹಾಗೂ ಚಂದ್ರಮೌಳೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಈ ಬಾವಿ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಬಾವಿಯಲ್ಲಿ ಪಾಚಿ ಕಟ್ಟಿ, ನೀರು ಮಲಿನಗೊಂಡಿದ್ದು, ಸುತ್ತಮುತ್ತಲೂ ಗಿಡಗಂಟೆಗಳು ಬೆಳೆದಿವೆ. ಉತ್ಖನನ ಕಾರ್ಯ ನಡೆಯುತ್ತಿರುವ ಸ್ಥಳದ ಪಕ್ಕದಲ್ಲೇ ಇದ್ದರೂ, ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾವಿಯ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಬಾವಿಯಲ್ಲಿನ ಪಾಚಿ ಹಾಗೂ ಕಸವನ್ನು ತಕ್ಷಣ ಸ್ವಚ್ಛಗೊಳಿಸಿ, ಪಾಳು ಬಿದ್ದ ಬಾವಿಯನ್ನು ಸುಸ್ಥಿತಿಗೆ ತರುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಇದಲ್ಲದೆ, ಲಕ್ಕುಂಡಿಯಂತಹ ಪುರಾತತ್ವ ಮಹತ್ವದ ಪ್ರದೇಶದ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ಅನುದಾನ ಒದಗಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ. ಸಂಸದ ಪಿ.ಸಿ. ಗದ್ದಿಗೌಡರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಲಕ್ಕುಂಡಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಒತ್ತು ನೀಡಬೇಕೆಂಬ ಒತ್ತಾಯವೂ ವ್ಯಕ್ತವಾಗಿದೆ.
ಒಟ್ಟಾರೆ, ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ಇತಿಹಾಸದ ಅಮೂಲ್ಯ ಪುಟಗಳನ್ನು ಹೊರತೆಗೆಯುತ್ತಿದ್ದರೂ, ಕಾರ್ಮಿಕರ ಸಮಸ್ಯೆಗಳು ಮತ್ತು ಐತಿಹಾಸಿಕ ಸಿದ್ಧರ ಬಾವಿಯ ನಿರ್ಲಕ್ಷ್ಯವು ಆಡಳಿತ ವ್ಯವಸ್ಥೆಯ ಗಮನ ಸೆಳೆಯುವ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ.


