ಬೆಳಗಾವಿ(ಜೂ.20): ಗೋಕಾಕ ವಿಧಾನಸಭೆಯ ಉಪಚುನಾವಣೆ ನಂತರ ಜಾರಕಿಹೊಳಿ ಸಹೋದರರು ಮತ್ತೆ ಒಂದಾಗಿದ್ದು, ಈ ಬೆಳವಣಿಗೆ ಗೋಕಾಕ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಜನಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಬೆಂಗಳೂರಿನ ಸದಾಶಿವ ನಗರದಲ್ಲಿರುವ ನೂತನ ಗೃಹಪ್ರವೇಶ ಸಮಾರಂಭದಲ್ಲಿ ಕಾಂಗ್ರೆಸ್‌ ಮುಖಂಡ ಲಖನ್‌ ಜಾರಕಿಹೊಳಿ ಭಾಗವಹಿಸಿದ್ದಾರೆ. ಮಾತ್ರವಲ್ಲ, ತಮ್ಮ ಸಹೋದರ ರಮೇಶ ಅವರ ಜೊತೆಗೆ ಕುಳಿತುಕೊಂಡು ಪರಸ್ಪರರು ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಗೃಹ ಪ್ರವೇಶ ಸಮಾರಂಭ ಮತ್ತೆ ಸಹೋದರರನ್ನು ಒಂದಾಗಿಸುವಂತೆ ಮಾಡಿದೆ ಎನ್ನಲಾಗುತ್ತಿದೆ. ಜಾರಕಿಹೊಳಿ ಸಹೋದರರ ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದು ಗೋಕಾಕ ಕ್ಷೇತ್ರದ ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ಗೊಂದಲಕ್ಕೂ ಕಾರಣವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಾಲಯದಲ್ಲಿ ಗ್ರಹಣ ಸಿದ್ಧತೆ ಹೀಗಿದೆ

ಕಳೆದ ಎರಡು ದಿನಗಳ ಹಿಂದಷ್ಟೇ ಗೋಕಾಕದಲ್ಲಿರುವ ಲಖನ್‌ ಜಾರಕಿಹೊಳಿ ಅವರ ಮನೆಗೆ ತೆರಳಿ ಸ್ವತಃ ರಮೇಶ ಜಾರಕಿಹೊಳಿ ಅವರೇ ತಮ್ಮ ಬೆಂಗಳೂರಿನಲ್ಲಿರುವ ನೂತನ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಲಖನ್‌ ಅವರು ಗೃಹ ಪ್ರವೇಶ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸಹೋದರನಿಗೆ ಶುಭಕೋರಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೂ ರಮೇಶ ಅವರು ಆಹ್ವಾನ ನೀಡಿದ್ದರು. ಆದರೆ, ಸತೀಶ ಅನ್ಯ ಕಾರ್ಯದ ನಿಮಿತ್ತ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದಿದ್ದಾರೆ.

ಉಪಕದನದ ನಂತರ ಈಗ ಭೇಟಿ?:

ಬಿಜೆಪಿಯಿಂದ ಸ್ಪರ್ಧಿಸಿದ್ದ ತಮ್ಮ ಹಿರಿಯ ಸಹೋದರ ರಮೇಶ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್‌ನಿಂದ ಲಖನ್‌ ಜಾರಕಿಹೊಳಿ ಚುನಾವಣಾ ಅಖಾಡಕ್ಕಿಳಿದಿದ್ದರು. ಈ ಮೂಲಕ ಸಹೋದರನಿಗೆ ರಾಜಕೀಯ ಸವಾಲು ಹಾಕಿದ್ದರು. ಆದರೆ, ಉಪಕದನದಲ್ಲಿ ರಮೇಶ ಜಾರಕಿಹೊಳಿ ಅವರೇ ಮೇಲುಗೈ ಸಾಧಿಸುವ ಮೂಲಕ ತಮ್ಮ ರಾಜಕೀಯ ಬುನಾದಿಯನ್ನು ಮತ್ತಷ್ಟುಭದ್ರಪಡಿಸಿಕೊಂಡಿದ್ದರು. ಉಪ ಚುನಾವಣೆ ವೇಳೆ ವೈಯಕ್ತಿಕವಾಗಿ ಆರೋಪ, ಪ್ರತ್ಯಾರೋಪಗಳನ್ನು ಮಾಡಿದ್ದರಿಂದಾಗಿ ಸಹೋದರರ ನಡುವೆ ಬಿರುಕು ಉಂಟಾಗಿತ್ತು.