Asianet Suvarna News Asianet Suvarna News

ಧಾರವಾಡದಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಚುಚ್ಚುಮದ್ದು ಕೊರತೆ..!

* ಬ್ಲ್ಯಾಕ್‌ ಫಂಗಸ್‌ ಬಹಳ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿರುವದು ಆತಂಕಕಾರಿ
* ಬ್ಲಾಕ್‌ ಫಂಗಸ್‌ಗೆ ಔಷಧದ ಕೊರತೆ 
* ವಿದೇಶದಿಂದ ಆಮದಿಗೆ ಪ್ರಯತ್ನ: ಜೋಶಿ

Lack of Amphotericin B Injection for Black Fungus Patients in Dharwad grg
Author
Bengaluru, First Published May 21, 2021, 3:17 PM IST

ಮಯೂರ ಹೆಗಡೆ

ಹುಬ್ಬಳ್ಳಿ(ಮೇ.21):  ಕಿಮ್ಸ್‌ನಲ್ಲಿ ಬ್ಲ್ಯಾಕ್‌ ಫಂಗಸ್‌ನಿಂದ ಬಳಲುವವರ ಸಂಖ್ಯೆ ಇದೀಗ 50 ತಲುಪಿರುವ ಆತಂಕಕಾರಿ ಬೆಳವಣಿಗೆ ನಡುವೆಯೆ ಅಗತ್ಯ ಔಷಧದ ಕೊರತೆ ತೀವ್ರವಾಗಿದ್ದು, ರೋಗಿಗಳ ಚಿಕಿತ್ಸೆಗೆ ವೈದ್ಯರು ಹರಸಾಹಸ ಪಡುವಂತಾಗಿದೆ.

ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ 50 ಮಿ.ಗ್ರಾಂ. ‘ಅಂಪೊಟೊರಿಸಿಯನ್‌’ ಚುಚ್ಚುಮದ್ದನ್ನು ಪ್ರತಿದಿನ ವ್ಯಕ್ತಿಯ ತೂಕಕ್ಕೆ ಅನುಸಾರವಾಗಿ ನೀಡಬೇಕಾಗುತ್ತದೆ. ಕನಿಷ್ಠ 50 ಮಿ.ಗ್ರಾಂ ಅಂತೂ ಕೊಡಬೇಕಾಗುತ್ತದೆ. ಒಂದು ಚುಚ್ಚುಮದ್ದಿಗೆ 5-7 ಸಾವಿರ ತಗಲುತ್ತದೆ. ದುಬಾರಿ ಚಿಕಿತ್ಸೆಯಾದ ಕಾರಣ ರಾಜ್ಯ ಸರ್ಕಾರ ಈಗಾಗಲೆ ಇದಕ್ಕೂ ಉಚಿತ ಚಿಕಿತ್ಸೆ ಘೋಷಿಸಿದೆ. ಆದರೆ, ರೆಮ್‌ಡಿಸಿವೆರ್‌ ಹಾಗೂ ಕೋವಿಡ್‌ ಲಸಿಕೆಗೆ ಉಂಟಾದ ಕೊರತೆ ಸಮಸ್ಯೆಯೇ ಈ ಚಿಕಿತ್ಸೆಗೂ ಕಾಡುತ್ತಿದೆ.
ಅಂದರೆ ರೋಗ ವಾಸಿಯಾಗುವವರೆಗೆ ಒಬ್ಬ ರೋಗಿಗೆ ಹೆಚ್ಚು ಕಡಿಮೆ 40-60 ವಯಲ್‌ ಔಷಧಿ ನೀಡಬೇಕು. ಆದರೆ ಬ್ಲ್ಯಾಕ್‌ ಫಂಗಸ್‌ ಪ್ರಾದೇಶಿಕ ಚಿಕಿತ್ಸಾ ಕೇಂದ್ರವಾದ ಕಿಮ್ಸ್‌ ಸೇರಿದಂತೆ ರಾಜ್ಯಾದ್ಯಂತ ಇದರ ಅಭಾವ ಉಂಟಾಗಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ ‘ಮೈಕ್ರೋಡಿಬ್ರಾಯಿಡರ್‌’ ಯಂತ್ರದ ಮೂಲಕ ಈ ಬ್ಲ್ಯಾಕ್‌ ಪಂಗಸ್‌ಗೆ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ. ಹಲವು ದಿನಗಳಿಂದ ಬಳಕೆಯಾಗದ ಕಾರಣ ಈ ಯಂತ್ರಗಳು ಪರಿಣಾಮಕಾರಿಯಾಗಿ ಶಸ್ತ್ರಚಿಕಿತ್ಸೆಗೆ ಒಗ್ಗುತ್ತಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿದ ಕಿಮ್ಸ್‌ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಗದಗ, ಕಿಮ್ಸ್‌ನಲ್ಲಿ ಬ್ಲಾಕ್‌ ಫಂಗಸ್‌ಗೆ ಸಂಬಂಧಿಸಿ ಗುರುವಾರ ಒಂದೇ ದಿನ 10 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ 50 ಜನರು ಈ ಚಿಕಿತ್ಸೆ ಪಡೆಯುತ್ತಿದ್ದಾರೆ. ಔಷಧದ ಕೊರತೆ ಸಂಬಂಧ ಹಿರಿಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದೆ ರೀತಿಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದರೆ ಸಮಸ್ಯೆ ಹೆಚ್ಚಾಗಲಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕೋವಿಡ್‌ ವೇಳೆಯೂ ಅಧಿಕಾರಕ್ಕಾಗಿ ಕಾಂಗ್ರೆಸ್‌ ರಾಜಕಾರಣ: ಅರವಿಂದ ಬೆಲ್ಲದ

ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಅರುಣಕುಮಾರ ಮಾತನಾಡಿ, ಬ್ಲಾಕ್‌ ಫಂಗಸ್‌ಗೆ ಔಷಧದ ಕೊರತೆ ಇದೆ. ಡಾ. ರವೀಂದ್ರ ಗದಗ ಅವರ ನೇತೃತ್ವದಲ್ಲಿ ರೇಡಿಯಾಲಜಿ, ಅರವಳಿಕೆ ವಿಭಾಗದ ತಜ್ಞರು, ನೇತ್ರತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ. ಕಿಮ್ಸ್‌ ಒಂದಕ್ಕೆ ನಾವು 2 ಸಾವಿರ ವಯಲ್‌ ಒದಗಿಸಲು ರಾಜ್ಯ ಸರ್ಕಾರಕ್ಕೆ ಕೇಳಿಕೊಂಡಿದ್ದೇವೆ. ಅದಲ್ಲದೆ ಆ್ಯಂಟಿ ಫಂಗಲ್‌ ಸೇರಿ ಇತರೆ ಕೊರತೆಯಿರುವ ಔಷಧಗಳನ್ನೂ ಪೂರೈಸುವಂತೆ ಕೇಳಿದ್ದೇವೆ. ಇವಿಷ್ಟುಸಿಕ್ಕರೆ ಈ ಭಾಗದ ರೋಗಿಗಳಿಗೆ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದರು.

ವಿದೇಶದಿಂದ ಆಮದಿಗೆ ಪ್ರಯತ್ನ; ಜೋಶಿ

ಇನ್ನು, ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬ್ಲ್ಯಾಕ್‌ ಫಂಗಸ್‌ ಬಹಳ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿರುವದು ಆತಂಕಕಾರಿ. ಹೇಗೆ ಇದನ್ನು ನಿರ್ವವಹಿಸಬೇಕು ಎಂಬುದರ ಕುರಿತು ಚರ್ಚಿಸಲಾಗಿದೆ. ಬ್ಲಾಕ್‌ ಫಂಗಸ್‌ ರೋಗ ಮೊದಲು ಸಣ್ಣ ಪ್ರಮಾಣದಲ್ಲಿ ಇತ್ತು. ಸದ್ಯ ಭಯಂಕರ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದರಿಂದ ಔಷಧಗಳ ಕೊರತೆಯಾಗಿದೆ. ಔಷಧ ತಯಾರಿಕಾ ಕಂಪನಿಗಳು ಇಷ್ಟು ಪ್ರಮಾಣದಲ್ಲಿ ರೋಗ ಕಂಡು ಬರಬಹುದು ಎಂದು ಅಂದಾಜು ಸಹ ಮಾಡಿರಲಿಲ್ಲ. ಅಗತ್ಯ ಔಷಧಗಳನ್ನು ತ್ವರಿತವಾಗಿ ಉತ್ಪಾದಿಸಲು, ವಿದೇಶಗಳಿಂದ ಆಮದು ಮಾಡಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ. ಹಂತ ಹಂತವಾಗಿ ಔಷಧಗಳನ್ನು ಒದಗಿಸಲಾಗುವುದು ಎಂದು ಜೋಶಿ ತಿಳಿಸಿದರು.

ಬ್ಲ್ಯಾಕ್‌ ಫಂಗಸ್‌ಗೆ ಸಂಬಂಧಿಸಿ ಕಿಮ್ಸ್‌ನಲ್ಲಿ 50 ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ. ಔಷಧದ ಕೊರತೆಯಿದ್ದು, ಕಿಮ್ಸ್‌ಗೆ 2 ಸಾವಿರ ವಯಲ್‌ಗಳನ್ನು ನೀಡುವಂತೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಕೋರಲಾಗಿದೆ ಎಂದು ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ತಿಳಿಸಿದ್ದಾರೆ. 
 

Follow Us:
Download App:
  • android
  • ios