ಕೋವಿಡ್‌ ವೇಳೆಯೂ ಅಧಿಕಾರಕ್ಕಾಗಿ ಕಾಂಗ್ರೆಸ್‌ ರಾಜಕಾರಣ: ಅರವಿಂದ ಬೆಲ್ಲದ

*  ದೇಶ ವಿರೋಧಿ ಕೆಲಸ ಮಾಡೋದನ್ನ ಬಿಟ್ಟು ಕೋವಿಡ್‌ ಕಾರ್ಯಕ್ಕೆ ಕೈ ಜೋಡಿಸಬೇಕು
*  ರಾಜ್ಯ ಸರ್ಕಾರ ಬಡವರಿಗಾಗಿ ಘೋಷಿಸಿರುವ ಪ್ಯಾಕೇಜ್‌ ಸ್ವಾಗತಾರ್ಹ 
*  ಕಾಂಗ್ರೆಸ್‌ನಿಂದ ಟೂಲ್‌ಕಿಟ್‌ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನ 
 

BJP MLA Aravind Bellad Slams Congress grg

ಹುಬ್ಬಳ್ಳಿ(ಮೇ.21): ಕೋವಿಡ್‌ ಸಮಯದಲ್ಲಿ ಕಾಂಗ್ರೆಸ್‌ ಅಧಿಕಾರದ ಹಪಾಹಪಿ, ಸ್ವಾರ್ಥದ ರಾಜಕಾರಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಟೂಲ್‌ಕಿಟ್‌ ಬಿಡುಗಡೆ ಮಾಡುವ ಮೂಲಕ ಜನರ ಹಾದಿತಪ್ಪಿಸುತ್ತಿದೆ. ವಿದೇಶಗಳಲ್ಲಿ ದೇಶದ ಮಾನ ಕಳೆಯುವ ಕೆಲಸ ಮಾಡುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್‌ ಸಮಯದಲ್ಲಿ ಜನರ ಸಂಕಷ್ಟ ಅರಿಯುವ ಕೆಲಸ ಮಾಡಬೇಕು. ಸರ್ಕಾರ ಏನಾದರೂ ತಪ್ಪು ಮಾಡಿದ್ದರೆ ರಚನಾತ್ಮಕ ಸಲಹೆಗಳನ್ನು ನೀಡಲಿ ಸ್ವೀಕರಿಸುತ್ತೇವೆ ಎಂದರು.
ಕೋವಿಡ್‌ ಸಂದರ್ಭದಲ್ಲಿ ಟೂಲ್‌ ಕಿಟ್‌ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ತಪ್ಪು ಸಂದೇಶ ಹಬ್ಬಿಸುವ ಕೆಲಸದಲ್ಲಿ ತೊಡಗಿದೆ. ಟೂಲ್‌ಕಿಟ್‌ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನ ಮಾಡುತ್ತಿದೆ. ಚೀನಾದಲ್ಲಿ ಹುಟ್ಟಿದ ವೈರಸ್‌ನ್ನು ಭಾರತದ, ಮೋದಿ ವೈರಸ್‌ ಎಂದು ಬಿಂಬಿಸಲು ಕಾಂಗ್ರೆಸ್‌ ಹೊರಟಿದೆ. ಅಧಿಕಾರದ ಹಪಹಪಿಯಿಂದ ಟೂಲ್‌ಕಿಟ್‌ ಷಡ್ಯಂತ್ರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ವ್ಯಾಕ್ಸಿನ್‌ ಬಂದಾಗಲೂ ಅಪಪ್ರಚಾರ ಮಾಡಿದೆ. ಈ ಕಾರಣದಿಂದಾಗಿ ಜನತೆ ಮೊದಲಿಗೆ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಲಿಲ್ಲ. ದೇಶ ವಿರೋಧಿ ಕೆಲಸ ಮಾಡುವುದನ್ನು ಬಿಟ್ಟು ಕೋವಿಡ್‌ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದರು.

ಹುಬ್ಬಳ್ಳಿ: ಆಕ್ಸಿಜನ್‌ ಟ್ಯಾಂಕರ್‌ ಬಂದು 3 ದಿನವಾದ್ರೂ ಗೊತ್ತೇ ಆಗಿಲ್ಲ, ಸಾರ್ವಜನಿಕರ ಆಕ್ರೋಶ

ಕೋವಿಡ್‌ ಸಹಾಯವಾಣಿ ಕೇಂದ್ರ, ಕೋವಿಡ್‌ ಕೇರ್‌ ಸೆಂಟರ್‌ ಮಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿಯಿಂದ 1,200 ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಪ್ಲಾಸ್ಮಾ ದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಹಾರದ ಕಿಟ್‌, ಮಾಸ್ಕ್‌, ಪರಿಹಾರ ಕಿಟ್‌ ಹೀಗೆ ಜನರಿಗೆ ಸಂಕಷ್ಟದಲ್ಲಿ ನೆರವು ನೀಡಿದ್ದೇವೆ. ಇಡೀ ದೇಶದಲ್ಲಿ ಮೊದಲು ಬರೀ 26 ಸಾವಿರ ವೆಂಟಿಲೇಟರ್‌ಗಳಿದ್ದವು. ಕಳೆದ ಒಂದು ವರ್ಷದಲ್ಲೇ ಬರೋಬ್ಬರಿ 86 ಸಾವಿರದಷ್ಟು ವೆಂಟಿಲೇಟರ್‌ ಬೆಡ್‌ಗಳನ್ನು ಮಾಡಲಾಗಿದೆ ಎಂದರು.

ಪ್ಯಾಕೇಜ್‌ ಸ್ವಾಗತಾರ್ಹ:

ರಾಜ್ಯ ಸರ್ಕಾರ ಬಡವರಿಗಾಗಿ ಘೋಷಿಸಿರುವ ಪ್ಯಾಕೇಜ್‌ ಸ್ವಾಗತಾರ್ಹ ಎಂದು ನುಡಿದರು. ಈ ವೇಳೆ ಮುಖಂಡರಾದ ಸಿದ್ದು ಮೊಗಲಿಶೆಟ್ಟರ್‌, ಲಿಂಗರಾಜ ಪಾಟೀಲ, ರವಿ ನಾಯಕ ಸೇರಿದಂತೆ ಹಲವರಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Latest Videos
Follow Us:
Download App:
  • android
  • ios