ಕೃಷಿ ಕಾರ್ಮಿಕರಿಗೆ ಬಂತು ಲೇಬರ್‌ ಬ್ಯಾಂಕ್‌..!

*   ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿಯಲ್ಲಿ ಕಚೇರಿ ಆರಂಭ
*   7000 ಕಾರ್ಮಿಕರನ್ನು ಹೊಂದಿರುವ ಲೇಬರ್‌ ಬ್ಯಾಂಕ್‌
*   ರೈತರ ಬೇಡಿಕೆಗೆ ಅನುಗುಣವಾಗಿ ಕಾರ್ಮಿಕರನ್ನು ಪೂರೈಸುತ್ತಿರುವ ಬ್ಯಾಂಕ್‌
 

Labor Bank Started at Byadagi in Haveri grg

ನಾರಾಯಣ ಹೆಗಡೆ

ಹಾವೇರಿ(ಜು.01): ಕೃಷಿಯಲ್ಲಿ ಕಾರ್ಮಿಕರ ಕೊರತೆ ನೀಗಿಸುವುದು, ಬಡ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಿ ಸ್ಥಳೀಯವಾಗಿಯೇ ಉದ್ಯೋಗ ನೀಡುವ ಉದ್ದೇಶದೊಂದಿಗೆ ಜಿಲ್ಲೆಯಲ್ಲಿ ಆರಂಭಗೊಂಡಿರುವ ಲೇಬರ್‌ ಬ್ಯಾಂಕ್‌ ಈಗ ಮತ್ತೊಂದು ಹೆಜ್ಜೆ ಮುಂದಕ್ಕೆ ಇಟ್ಟಿದೆ. ಎಲ್ಲ ಕಾರ್ಮಿಕರಿಗೆ ಸಮವಸ್ತ್ರ ನೀಡಿ ಕೂಲಿಗಳಿಗೂ ವೃತ್ತಿ ಗೌರವ ತಂದು ಕೊಡುವ ವಿನೂತನ ಪ್ರಯತ್ನ ಪ್ರಶಂಸೆಗೆ ಪಾತ್ರವಾಗಿದೆ.

ಹಣಕಾಸಿನ ವ್ಯವಹಾರ ನಡೆಸುವ ಬ್ಯಾಂಕುಗಳನ್ನು ನಾವು ನೋಡಿದ್ದೇವೆ. ಆದರೆ, ಲೇಬರ್‌ ಬ್ಯಾಂಕ್‌ ಎನ್ನುವುದು ವಿನೂತನ ಪರಿಕಲ್ಪನೆಯಾಗಿದ್ದು, ಇದು ಕೃಷಿ ಕಾರ್ಮಿಕರ ಸಂಘಟನೆಯಾಗಿದೆ. ರಾಣಿಬೆನ್ನೂರಿನ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಇಂಥದ್ದೊಂದು ಮಾದರಿ ಲೇಬರ್‌ ಬ್ಯಾಂಕ್‌ ಆರಂಭಿಸಿ ಯಶಸ್ಸು ಕಂಡಿದೆ. ಕೃಷಿಗೆ ಕೂಲಿ ಕಾರ್ಮಿಕರ ಕೊರತೆ ಒಂದು ಕಡೆಯಾದರೆ, ಗ್ರಾಮೀಣ ಭಾಗದ ಕಾರ್ಮಿಕರು ಕೈತುಂಬಾ ಕೆಲಸವಿಲ್ಲದೇ ಮಹಾನಗರಗಳಿಗೆ ಗುಳೆ ಹೋಗುವುದು ನಡೆಯುತ್ತಿದೆ. ಇವೆರಡೂ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಸೇತುವೆಯಾಗಿ ಕೆಲಸ ಮಾಡಲು ಹುಟ್ಟಿಕೊಂಡಿರುವುದೇ ಲೇಬರ್‌ ಬ್ಯಾಂಕ್‌.

'ಯಡಿಯೂರಪ್ಪಗೆ ತಿರುಗೇಟು ಕೊಡಲು ಮಾಡಿದ ಹೋರಾಟ ಅಲ್ಲ'

7 ಸಾವಿರ ಲೇಬರ್‌ಗಳು:

ನಾಲ್ಕು ವರ್ಷಗಳ ಹಿಂದೆಯೇ ಆರಂಭವಾದ ಈ ಲೇಬರ್‌ ಬ್ಯಾಂಕ್‌ನಲ್ಲಿ ಈಗ 7 ಸಾವಿರ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಹತ್ತಿ ಬಿಡಿಸುವುದು, ಕಳೆ ಕೀಳುವುದು, ಬಿತ್ತನೆ, ಗೊಬ್ಬರ ಹಾಕುವುದು, ತೋಟಗಾರಿಕೆ ಹೀಗೆ ಬೇಸಾಯದ ನೈಪುಣ್ಯತೆ ಇರುವ ಗ್ರಾಮೀಣ ಕಾರ್ಮಿಕರು ಇದ್ದಾರೆ. ಜಮೀನು ಮಾಲೀಕರು ತಮಗೆ ಇಂತಿಷ್ಟುಕೆಲಸಗಾರರು ಇಂಥ ದಿನ ಬೇಕೆಂದು ಲೇಬರ್‌ ಬ್ಯಾಂಕ್‌ ಸಂಪರ್ಕಿಸಿದರೆ ಸಾಕು. ಆ ದಿನಕ್ಕೆ ಅಗತ್ಯದಷ್ಟುಕಾರ್ಮಿಕರು ರೈತನ ಹೊಲದಲ್ಲಿರುತ್ತಾರೆ. ಇದರಿಂದ ಜಮೀನು ಮಾಲೀಕರಿಗೆ ಕಾರ್ಮಿಕರ ಕೊರತೆ ನೀಗಲಿದ್ದು, ಕಾರ್ಮಿಕರಿಗೆ ಸ್ಥಳೀಯವಾಗಿಯೇ ಕೆಲಸ ಸಿಗಲು ಅನುಕೂಲವಾಗಿದೆ.

25ರಿಂದ 30 ಕಾರ್ಮಿಕರು ಸೇರಿ ಒಂದು ಗುಂಪು ಮಾಡಿಕೊಂಡಿದ್ದು, ಪ್ರತಿ ಗುಂಪಿಗೂ ಒಬ್ಬ ಮುಖ್ಯಸ್ಥನಿರುತ್ತಾನೆ. ಲೇಬರ್‌ ಬ್ಯಾಂಕಿಂದ ಮುಖ್ಯಸ್ಥನಿಗೆ ಕೆಲಸದ ಮಾಹಿತಿಯನ್ನು ತಿಳಿಸಲಾಗುತ್ತದೆ. ಆತ ಕಾರ್ಮಿಕರನ್ನು ಕರೆದೊಯ್ದು ಕೆಲಸ ಪೂರೈಸಿ ರೈತರಿಂದ ಅಥವಾ ಹೊಲದ ಮಾಲೀಕರಿಂದ ಹಣ ಪಡೆದು ಕಾರ್ಮಿಕರಿಗೆ ವಿತರಿಸುತ್ತಾನೆ. ಬ್ಯಾಂಕಿಗೆ ಸೇವಾಶುಲ್ಕ ಪಾವತಿಸುತ್ತಾನೆ. ಹೀಗೆ ಲೇಬರ್‌ ಬ್ಯಾಂಕಿಗೆ .11 ಲಕ್ಷ ಸೇವಾ ಶುಲ್ಕ ಸಂದಾಯವಾಗಿದೆ.

ವರ್ಷವಿಡಿ ಕೆಲಸ:

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಒಬ್ಬರಿಗೆ 100 ದಿನಗಳ ಕೆಲಸ ಮಾತ್ರ ಸಿಗುತ್ತಿದೆ. ಕುಟುಂಬದಲ್ಲಿ ನಾಲ್ಕಾರು ಜನರಿದ್ದರೂ ಅವರಿಗೆ ಖಾತ್ರಿಯಲ್ಲಿ ವರ್ಷವಿಡಿ ಕೆಲಸ ಸಿಗುವುದಿಲ್ಲ. ಈ ಅಂತರವನ್ನು ತುಂಬಲು ಲೇಬರ್‌ ಬ್ಯಾಂಕ್‌ ಪ್ರಯತ್ನಿಸುತ್ತಿದೆ. ಕೃಷಿಕರು ಕೂಲಿಯಾಳು ಬೇಕಾದಾಗ ಊರಲ್ಲಿದ್ದವರನ್ನು, ಅಕ್ಕಪಕ್ಕದ ಗ್ರಾಮದವರನನ್ನು ಸಂಪರ್ಕಿಸುತ್ತಿದ್ದರು. ಆದರೆ, ಕೂಲಿ ಸಮಸ್ಯೆಯಿಂದ ಕೃಷಿಯನ್ನೇ ಕೈಬಿಡುತ್ತ ಬಂದಿದ್ದರು. ಲೇಬರ್‌ ಬ್ಯಾಂಕ್‌ ಸ್ಥಾಪನೆಯ ನಂತರ ಸುಮಾರು 20 ಕಿಲೋಮೀಟರ್‌ ದೂರದ ಕಾರ್ಮಿಕರು ಕೆಲಸಕ್ಕೆ ಸಿಗುತ್ತಿದ್ದಾರೆ. ಕಾರ್ಮಿಕರ ಸಂಘಟನೆಗೆ ಸಾಂಸ್ಥಿಕ ರೂಪ ನೀಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿ ಕಟ್ಟಡ ಮತ್ತು ಇತರೆ ಕೆಲಸಗಳ ಕೂಲಿ ಕಾರ್ಮಿಕರ ಸಂಘದ ಹೆಸರಿನಲ್ಲಿ ಕಾರ್ಮಿಕ ಇಲಾಖೆ ಅಡಿಯಲ್ಲಿ ನೋಂದಾಯಿಸಲಾಗಿದೆ. ಬ್ಯಾಡಗಿ ತಾಲೂಕಿನ ಕದರಮಂಡಲಗಿಯಲ್ಲಿ ಲೇಬರ್‌ ಬ್ಯಾಂಕ್‌ ಕಚೇರಿ ಆರಂಭಿಸಲಾಗಿದೆ. ಕಾರ್ಮಿಕರು ಮತ್ತು ಭೂಮಾಲೀಕರ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಇದರಿಂದ ಕಾರ್ಮಿಕರಿಗೆ ವರ್ಷವಿಡಿ ಕೆಲಸ ಸಿಗುತ್ತಿದ್ದು, ಗುಳೆ ಸಮಸ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.

ಹಾವೇರಿ: ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ನುಂಗಿದ ಸಿಬ್ಬಂದಿ..!

ಸಮವಸ್ತ್ರದಲ್ಲಿ ಕಾರ್ಮಿಕರು:

ಲೇಬರ್‌ ಬ್ಯಾಂಕ್‌ನಲ್ಲಿ ನೋಂದಾಯಿತರಾಗಿರುವ ಕಾರ್ಮಿಕರಿಗೆ ಲೇಬರ್‌ ಕಾರ್ಡ್‌ ಕೊಡಿಸಲಾಗಿದೆ. ಜತೆಗೆ ಕೂಲಿ ಕೆಲಸಕ್ಕೂ ವೃತ್ತಿಪರತೆಯ ಗೌರವ ಸಿಗಬೇಕು ಎಂಬ ಕಾರಣಕ್ಕೆ ದಾನಿಗಳ ನೆರವಿನಿಂದ ಸಮವಸ್ತ್ರ ನೀಡಲಾಗುತ್ತಿದೆ. ಸದ್ಯಕ್ಕೆ 700 ಕಾರ್ಮಿಕರಿಗೆ ಲೇಬರ್‌ ಬ್ಯಾಂಕ್‌ನ ಲೋಗೋ ಇರುವ ಖಾಕಿ ಅಂಗಿಯನ್ನು ನೀಡಲಾಗಿದೆ. ಇದು ಕಾರ್ಮಿಕರಿಗೆ ಹೊಸ ಹುಮ್ಮಸ್ಸು ತಂದಿತ್ತಿದೆ. ವಿನೂತನ ಕಲ್ಪನೆಯ ಲೇಬರ್‌ ಬ್ಯಾಂಕ್‌ ಕಾರ್ಯನಿರ್ವಹಣೆ ಬಗ್ಗೆ ಹಲವು ಸಂಸ್ಥೆಗಳು ಆಸಕ್ತಿ ತೋರುತ್ತಿವೆ. ಲೇಬರ್‌ ಬ್ಯಾಂಕಿಗೆ ಉಚಿತವಾಗಿ ಆ್ಯಪ್‌ ಸಿದ್ಧಪಡಿಸಲು ಕೆಲವರು ಮುಂದೆ ಬಂದಿದ್ದಾರೆ.

ಕೃಷಿಯಲ್ಲಿ ಕಾರ್ಮಿಕರ ಕೊರತೆ ತಪ್ಪಿಸುವುದು, ಗುಳೆ ತಪ್ಪಿಸಿ ಸ್ಥಳೀಯವಾಗಿಯೇ ಕೆಲಸ ನೀಡುವ ಉದ್ದೇಶದಿಂದ ಲೇಬರ್‌ ಬ್ಯಾಂಕ್‌ ಸ್ಥಾಪಿಸಲಾಗಿದೆ. ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಮಿಕರ ಜಾಲವನ್ನು ವಿಸ್ತರಿಸಲಾಗುತ್ತಿದೆ. ಅನೇಕ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಅಂತ ವನಸಿರಿ ಸಂಸ್ಥೆ ಸಂಸ್ಥಾಪಕ ಶಂಸುದ್ದೀನ್‌ ಬಳಿಗಾರ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios