ಧಾರವಾಡ(ಅ.16): ಸರ್ಕಾರಿ ಸ್ವಾಮಿತ್ವದಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಗೃಹಸಾಲದ ಮೇಲಿನ ಬಡ್ಡಿ ದರದಲ್ಲಿ ಕಡಿತ ಘೋಷಿಸುವ ಮೂಲಕ ಮುಂಬರುವ ಹಬ್ಬದ ಸಾಲಿನಲ್ಲಿ ಮನೆ ಕಟ್ಟಡ ಅಥವಾ ಪ್ಲಾಟ್‌ ಖರೀದಿ ಮಾಡಬಯಸುವವರಿಗೆ ಸಿಹಿಸುದ್ದಿ ನೀಡಿದೆ.

ಗೃಹ ಸಾಲದ ಬಡ್ಡಿಯನ್ನು ಶೇ. 8.5ರಿಂದ ಶೇ. 7.50ಕ್ಕೆ ಇಳಿಸಿದೆ. ಬ್ಯಾಂಕ್‌ ಅಧ್ಯಕ್ಷ ಪಿ. ಗೋಪಿ ಕೃಷ್ಣ ಗುರುವಾರ ಧಾರವಾಡದಲ್ಲಿ ಹಬ್ಬ ಸಂಬಂಧಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಬಡ್ಡಿದರವನ್ನು ಗ್ರಾಹಕರ ಸಿಬಿಲ್‌ ಅಂಕಗಳಿಗೆ ಸಂಪರ್ಕಿಸಿರುವುದರಿಂದ ಉತ್ತಮ ಸಾಲ ಮರುಪಾವತಿ ಹಿನ್ನೆಲೆಯುಳ್ಳವರಿಗೆ ವರದಾನವಾಗಲಿದೆ.

ಲಾಕ್‌ಡೌನ್‌ ನಂತರ ವಾಯವ್ಯ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳ ಪುನಾರಂಭ

ಬ್ಯಾಂಕಿನ ಈ ನಿರ್ಧಾರ ಮನೆ ಕೊಳ್ಳುವ ಅಥವಾ ಕಟ್ಟಬಯಸುವ ಲಕ್ಷಾಂತರ ಜನರ ಆಶಯಕ್ಕೆ ನವ ಚೈತನ್ಯ ನೀಡಲಿದೆ. ಪ್ರಸ್ತುತ ದರ ಶೇ.7.50 ಮಾರುಕಟ್ಟೆಯಲ್ಲಿ ಬಹಳ ಸ್ಪರ್ಧಾತ್ಮಕವಾಗಿದೆ ಮತ್ತು ಇದು ತಿಂಗಳ ಕಂತಿನಲ್ಲಿ ಸಾಲಗಾರನಿಗೆ ಭಾರಿ ಉಳಿತಾಯವಾಗಲಿದೆ ಎಂದರು.

ಪ್ರಸ್ತುತ ಬ್ಯಾಂಕು, ಗೃಹ ಸಾಲದ ಅಡಿಯಲ್ಲಿ 642 ಕೋಟಿ ಹೊಂದಿದ್ದು, ಈ ಹಣಕಾಸಿನ ವರ್ಷದ ಅಂತ್ಯದ ಒಳಗಡೆ ಕನಿಷ್ಠ 200 ಕೋಟಿಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ಬ್ಯಾಂಕಿನ ಎಲ್ಲ 629 ಶಾಖೆಗಳಲ್ಲಿ ಲಭ್ಯವಿದ್ದು, ಉಳಿದಡೆ ಹೆಚ್ಚಿನ ಬಡ್ಡಿ ನೀಡುತ್ತಿರುವ ಗ್ರಾಹಕರು ತಮ್ಮ ಬ್ಯಾಂಕಿಗೆ ಬರಬಹುದೆಂಬುದನ್ನೂ ತಿಳಿಸಿದರು. ಬ್ಯಾಂಕಿನ ಮಹಾ ಪ್ರಬಂಧಕ ಚಂದ್ರಶೇಖರ್‌ ಡಿ. ಮೊರೊ, ಬಿ.ಸಿ. ರವಿಚಂದ್ರ, ಎಜಿಎಂ ಶ್ರೀಕಾಂತ ಹೆಗಡೆ, ಮುಖ್ಯ ಪ್ರಬಂಧಕ ವಿ.ವಿ. ಯಾಜಿ ಇದ್ದರು.