ಮೈಸೂರು, (ಜೂನ್.11): ರಾಜ್ಯ ರಸ್ತೆ ಸಾರಿಗೆ ಸಂಸ್ಥೆ [ಕೆಎಸ್‌ಆರ್‌ಟಿಸಿ]ಯು ಮೈಸೂರಿನಿಂದ ಪ್ರತಿನಿತ್ಯ ಮುಂಬೈಗೆ ಅಂತರ್ ರಾಜ್ಯ ಐಶಾರಾಮಿ ಬಸ್‌ ಸೌಲಭ್ಯ ಆರಂಭಿಸಿದೆ. 

ಮೈಸೂರು ಗ್ರಾಮಾಂತರ ವಿಭಾಗದ ವತಿಯಿಂದ ಐರಾವತ 'ಅಂಬಾರಿ' ಡ್ರೀಮ್‌ ಕ್ಲಾಸ್‌ ಮಾದರಿಯ ಎಸಿ ಸ್ಲೀಪರ್ ಬಸ್‌ಗೆ ಚಾಲನೆ ನೀಡಲಾಗಿದೆ. 

ಮೈಸೂರು-ಬೆಂಗಳೂರಿಗೆ ವಿಮಾನ ಸೇವೆ : ದರವೆಷ್ಟು..?

ನಿತ್ಯ ಮಧ್ಯಾಹ್ನ 1 ಗಂಟೆಗೆ ಮೈಸೂರಿನಿಂದ ಹೊರಟು ಕೆ.ಆರ್‌.ಪೇಟೆ, ಶ್ರವಣಬೆಳಗೊಳ, ಅರಸೀಕೆರೆ, ಶಿವಮೊಗ್ಗ, ಹರಿಹರ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಕೊಲ್ಲಾಪುರ, ಪುಣೆ ಮಾರ್ಗವಾಗಿ ಮಾರನೇ ದಿನ ಬೆಳಿಗ್ಗೆ 9 ಗಂಟೆಗೆ ಮುಂಬೈ ತಲುಪುತ್ತದೆ. 

ಹಾಗೆಯೇ, ಮುಂಬೈನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮಾರನೇ ದಿನ ಬೆಳಿಗ್ಗೆ 9ಕ್ಕೆ ಮೈಸೂರಿಗೆ ಬರಲಿದೆ. 1,100 ಕಿ.ಮೀ ದೂರವಿದ್ದು, 20.5 ಗಂಟೆ ಅವಧಿಯ ಒಂದು ಕಡೆಯ ಪ್ರಯಾಣ ದರ 2,000 ರೂಪಾಯಿ ಇರಲಿದೆ.

ಫುಲ್ ಹೈಫೈ ಬಸ್
ಪ್ರಯಾಣಿಕರ ಸುಖಕರ ಹಾಗೂ ಆರಾಮದಾಯಕ ಪ್ರಯಾಣಕ್ಕೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿರುವ 14.5 ಮೀಟರ್ ಉದ್ದದ ಈ ಬಸ್‍ನಲ್ಲಿ ಮೇಲ್ಗಡೆ ಮತ್ತು ಕೆಳಗಡೆ ಬರ್ತ್‍ಗಳು ಸೇರಿ ಒಟ್ಟು 46 ವಿಶೇಷ ಆಸನಗಳಿವೆ. 

ಆಸನದಲ್ಲಿಯೇ ಪ್ರಯಾಣಿಕರ ಲಗ್ಗೇಜ್ ಗಳನ್ನು ಇಟ್ಟುಕೊಳ್ಳಲು ಲಗ್ಗೇಜ್ ಕ್ಯಾರಿಯರ್ ಸಹ ಇದೆ. ಪ್ರತಿ ಬರ್ತ್‍ನಲ್ಲೂ ಎಸಿ ಇದ್ದು ಫೋನ್ ಹೋಲ್ಡರ್, ಚಾರ್ಜಿಂಗ್ ವ್ಯವಸ್ಥೆಯೂ ಕೂಡ ಇದೆ. 

ಪ್ರಯಾಣದ ವೇಳೆ ಪ್ರಯಾಣಿಕರಿಗೆ ಬೆಡ್ ಶೀಟ್, ಕುಡಿಯುವ ನೀರಿನ ಬಾಟಲ್ ಒದಗಿಸಲಾಗುತ್ತದೆ. ಟಿಕೆಟ್ ದರ ಒಂದು ಟ್ರಿಪ್‍ಗೆ 2000ರೂಪಾಯಿ  ನಿಗದಿಪಡಿಸಲಾಗಿದೆ. 

ಚೆನ್ನೈ, ಹೈದರಾಬಾದ್, ಬೆಳಗಾವಿಗೂ ಸೇವೆ 
ಪ್ರಸ್ತುತ ಇರುವ ಐರಾವತ ಸ್ಲೀಪರ್ ಕೋಚ್ ಸೇವೆಗಳನ್ನು ಡ್ರೀಮ್ ಕ್ಲಾಸ್ ಸೇವೆಗಳನ್ನಾಗಿ ಪರಿವರ್ತಿಸುವ ಬಗ್ಗೆ ಚಿಂತನೆ ನಡೆದಿದೆ. ಮುಂದೆ ಚೆನ್ನೈ, ಹೈದರಾಬಾದ್, ಬೆಳಗಾವಿ ಇನ್ನಿತರ ಕಡೆಗಳಿಗೆ ಡ್ರೀಮ್ ಕ್ಲಾಸ್ ಬಸ್ ಗಳನ್ನು ಓಡಿಸುವ ಯೋಚನೆ ಇದೆ ಎಂದು ಕೆಎಸ್ ಆರ್ ಟಿಸಿ  ಮೈಸೂರು ಗ್ರಾಮಾಂತರ ಡಿಸಿ ಆರ್.ಅಶೋಕ್ ಕುಮಾರ್ ತಿಳಿಸಿದರು.

ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ