ಮೈಸೂರು : ಮೈಸೂರಿನಿಂದ - ಬೆಂಗಳೂರಿನ ನಡುವೆ ಶುಕ್ರವಾರ ವಿಮಾನ ಸಂಚಾರಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು. 

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಪ್ರಾದೇಶಿಕ ವಿಮಾನ ಸಂಚಾರ ಯೋಜನೆ ಉಡಾನ್ 3 ಅಡಿಯಲ್ಲಿ ಮೈಸೂರಿನಿಂದ ವಿಮಾನ ಸೇವೆ ಪ್ರಾರಂಭ ಮಾಡಲಾಗಿದೆ. 

ಇಂಡಿಯನ್ ಏರ್ ಲೈನ್ಸ್ ಸಂಸ್ಥೆಗೆ ಸೇರಿದ 9I 540 ವಿಮಾನ ಪ್ರತಿದಿನ 11.45ಕ್ಕೆ  ಮೈಸೂರಿಗೆ ಆಗಮಿಸಿ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ತೆರಳಲಿದೆ. ಈಗಾಗಲೇ ಮೈಸೂರಿನಿಂದ ಹೈದ್ರಾಬಾದ್ ಗೆ ವಿಮಾನ ಸಂಚಾರವಿದ್ದು ಇದು ಮೈಸೂರಿನಿಂದ ಸಂಚರಿಸುವ 2ನೇ ವಿಮಾನ ಸೇವೆಯಾಗಿದೆ. 

ಮೊದಲ ದಿನವೇ ಮೈಸೂರಿನಿಂದ ಬೆಂಗಳೂರಿಗೆ 32 ಜನ ಪ್ರಯಾಣಿಸಿದ್ದು, 1500 ರು. ದರ ನಿಗದಿಗೊಳಿಸಲಾಗಿದೆ. ಇನ್ನು ಜುಲೈ ಮೊದಲ ವಾರದಲ್ಲಿ ಮೂರು ವಿಮಾನಗಳು ಕಾರ್ಯಾರಂಭ ಮಾಡಲಿದ್ದು, ಈ ನಿಟ್ಟಿನಲ್ಲಿ 280 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. 

ವಿಮಾನ ಸಂಚಾರ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಸಚಿವ ಸಾ ರಾ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.