ಮಳಿಗೆ ಬಾಡಿಗೆದಾರರಿಗೆ ಬರೆ ಎಳೆದ ಕೆಎಸ್‌ಆರ್‌ಟಿಸಿ..!

ಕೋವಿಡ್‌ ವೇಳೆ ನೀಡಿದ್ದ ಬಾಡಿಗೆ ವಿನಾಯಿತಿ ರದ್ದು, ಪೂರ್ಣ ಬಾಡಿಗೆ ಪಾವತಿಸಲು ನೋಟಿಸ್‌

KSRTC Cancellation of Rent Exemption Given During Covid grg

ಚಿಕ್ಕಬಳ್ಳಾಪುರ(ಜು.27): ಕೊರೋನಾ ಸಂದರ್ಭದಲ್ಲಿ ಬಸ್‌ ಓಡಾಟ ಇಲ್ಲದೇ ಪ್ರಯಾಣಿಕರ ಸುಳಿವು ಇಲ್ಲದೇ ವ್ಯಾಪಾರ ವಹಿವಾಟು ನಡೆಯದೇ ಸಂಕಷ್ಟಕ್ಕೀಡಾಗಿದ್ದ ಸಾರ್ವಜನಿಕ ಬಸ್‌ ನಿಲ್ದಾಣದ ಅಂಗಡಿ ಮಳಿಗೆಗಳ ಮಾಲೀಕರಿಗೆ ಬಾಡಿಗೆ ವಿನಾಯಿತಿ ನೀಡಿದ್ದ ಕೆಎಸ್‌ಆರ್‌ಟಿಸಿ ಇದೀಗ ಸದ್ದಿಲ್ಲದೇ ವಿನಾಯಿತಿ ಹಿಂಪಡೆದಿದೆ. ಹೌದು, ಕೋವಿಡ್‌ ವೇಳೆ ಬಾಡಿಗೆ ಕಟ್ಟದಂತೆ ವಿನಾಯಿತಿ ನೀಡಿದ್ದ ಕೆಎಸ್‌ಆರ್‌ಟಿಸಿ ಇದೀಗ ಬಸ್‌ ನಿಲ್ದಾಣಗಳಲ್ಲಿ ಅಂಗಡಿ ನಡೆಸುವ ಮಾಲೀಕರಿಗೆ ಪೂರ್ಣ ಬಾಡಿಗೆ ಶುಲ್ಕ ಪಾವತಿಸುವಂತೆ ನೋಟಿಸ್‌ ಜಾರಿ ಮಾಡುವ ಮೂಲಕ ಬಾಡಿಗೆದಾರರಿಗೆ ಬರೆ ಎಳೆಯುವ ಕೆಲಸಕ್ಕೆ ಕೆಎಸ್‌ಆರ್‌ಟಿಸಿ ಮುಂದಾಗಿದೆ.

2ನೇ ಅಲೆ ವೇಳೆ ಪೂರ್ಣ ವಿನಾಯ್ತಿ

ಜಿಲ್ಲೆಯ ಆರು ತಾಲೂಕುಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಬಾಡಿಗೆ ನೀಡಿ ಅಂಗಡಿ ಮಳಿಗೆ ನಡೆಸುವ ಮಾಲೀಕರಿಗೆ ಕೆಎಸ್‌ಆರ್‌ಟಿಸಿ ಕೋವಿಡ್‌ ಎರಡನೇ ಅಲೆ ವೇಳೆ ಏಪ್ರಿಲ್‌ ತಿಂಗಳಲ್ಲಿ ಬರೋಬ್ಬರಿ ಶೇ.70 ರಷ್ಟುಬಾಡಿಗೆ ರಿಯಾಯಿತಿ ಕೊಟ್ಟರೆ ಮೇ ತಿಂಗಳ ಬಾಡಿಗೆಯಲ್ಲಿ ಸಂಪೂರ್ಣ ವಿನಾಯಿತಿ ನೀಡಿತ್ತು. ಅಲ್ಲದೇ ಜೂನ್‌ ತಿಂಗಳಲ್ಲಿ ಕೂಡ ಶೇ.70 ರಷ್ಟು ಬಾಡಿಗೆ ವಿನಾಯಿತಿ ನೀಡಿತ್ತು.

KSRTC ಅಧಿಕಾರಿಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ, ಅವರು ಆಡಿದ್ದೇ ಆಟ!

ವಿನಾಯ್ತಿಗೆ ಆಡಳಿತ ಮಂಡಳಿ ತಿರಸ್ಕಾರ

ಆದರೆ ಈ ವಿನಾಯಿತಿಯನ್ನು ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಸಭೆ ಒಪ್ಪಿಗೆ ಸೂಚಿಸದೇ ತಿರಸ್ಕರಿಸಿರುವ ಪರಿಣಾಮ ಜಿಲ್ಲೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಂಗಡಿ ಮಳಿಗೆ ಮಾಲೀಕರಿಗೆ ನೋಟಿಸ್‌ ಕೊಟ್ಟಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಏಪ್ರಿಲ್‌, ಮೇ ಹಾಗೂ ಜೂನ್‌ ತಿಂಗಳಲ್ಲಿ ಬಾಡಿಗೆ ವಿಚಾರದಲ್ಲಿ ನೀಡಿದ್ದ ವಿನಾಯಿತಿಯನ್ನು ಹಿಂಪಡೆದು ಮೂರು ತಿಂಗಳ ಬಾಡಿಗೆ ಹಣವನ್ನು ಸಂಪೂರ್ಣವಾಗಿ ಪಾವತಿಸಬೇಕೆಂದು ಖಡಕ್‌ ಸೂಚನೆ ಕಟ್ಟಿದ್ದು ಇದೀಗ ಮಳಿಗೆ ಮಾಲಿಕರಿಗೆ ದಿಕ್ಕು ತೋಚದಂತೆ ಆಗಿದೆ.

ಕೋವಿಡ್‌ ವೇಳೆ ಬಸ್‌ ಸಂಚಾರ ಇರಲಿಲ್ಲ. ಪ್ರಯಾಣಿಕರು ಬರಲಿಲ್ಲ. ಅಂಗಡಿ ಮಳಿಗೆಗಳನ್ನು ಮುಚ್ಚಿದ್ದವು. ಬಾಡಿಗೆ ವಿನಾಯಿತಿ ನೀಡುವುದಾಗಿ ಹೇಳಿದ್ದರು. ಜೊತೆಗೆ ನಾವು ಆಗ ಅಂಗಡಿಗಳನ್ನು ತೆರೆದಿರಲಿಲ್ಲ. ಆದರೆ ಏಕಾಏಕಿ ವಿನಾಯಿತಿ ಹಿಂಪಡೆದು 3 ತಿಂಗಳ ಬಾಡಿಗೆ ಪಾವತಿಸುವಂತೆ ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳು ನೀಡಿರುವ ನೋಟಿಸ್‌ ನೋಡಿ ಈಗ ಮಳಿಗೆ ಮಾಲೀಕರು ಕಕ್ಕಾಬಿಕ್ಕಿ ಆಗಿದ್ದಾರೆ. ಸರಿ ಸಮಾರು ಒಂದೊಂದು ಅಂಗಡಿ ಮಾಲೀಕರು, 50 ರಿಂದ 1 ಲಕ್ಷ ರು, ವರೆಗೂ ಬಾಡಿಗೆ ಪಾವತಿಸಬೇಕಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಕೊಡದಿದ್ದರೆ ಠೇವಣಿಯಲ್ಲಿ ಕಡಿತ

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಅಂಗಡಿ ಮಳಿಗೆ ನಡೆಸುವ ಮಾಲೀಕರು ಕೋವಿಡ್‌ ಸಂದರ್ಭದಲ್ಲಿ ಕೂಡ ಪೂರ್ಣ ಪ್ರಮಾಣದ ಬಾಡಿಗೆ ನೀಡುವಂತೆ ಸೂಚಿಸಿದ್ದು ಒಂದು ವೇಳೆ ಬಾಡಿಗೆ ಕೊಡದಿದ್ದರೆ ಮಾಲೀಕರು ಇಟ್ಟಿರುವ ಠೇವಣಿ ಹಣದಲ್ಲಿ ಕಡಿತಗೊಳಿಸುವ ಎಚ್ಚರಿಕೆಯನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನೀಡಿರುವುದು ಈಗ ಬಾಡಿಗೆದಾರರಿಗೆ ಬರೆ ಎಳೆದಂತೆ ಆಗಿದೆ.
 

Latest Videos
Follow Us:
Download App:
  • android
  • ios