ಮಂಗಳೂರು(ಮೇ 19): ಲಾಕ್‌ಡೌನ್‌ ಸಡಿಲ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ದ.ಕ.ಜಿಲ್ಲೆಯ ವಿವಿಧ ರೂಟ್‌ಗಳಲ್ಲಿ ನಿಗದಿತ ವೇಳೆಯಲ್ಲಿ ಸೀಮಿತ ಬಸ್‌ ಸಂಚಾರ ಮೇ 19ರಿಂದಲೇ ಆರಂಭಿಸಲಿದೆ. ಆದರೆ ದ.ಕ.ಜಿಲ್ಲೆಯಲ್ಲಿ ಸ್ಥಳೀಯವಾಗಿ ಯಾವುದೇ ಬಸ್‌ ಸಂಚಾರ ಇರುವುದಿಲ್ಲ. ಖಾಸಗಿ ಬಸ್‌ಗಳು ಕೂಡ ಮೇ ಅಂತ್ಯದ ವರೆಗೆ ಸಂಚಾರ ನಡೆಸುವುದಿಲ್ಲ.

ಮಂಗಳೂರು ಮತ್ತು ಪುತ್ತೂರು ವಿಭಾಗದಿಂದ ಸುಮಾರು 35ಕ್ಕೂ ಅಧಿಕ ಬಸ್‌ಗಳು ನಿಬಂಧನೆಗೆ ಒಳಪಟ್ಟು ಸಂಚಾರ ನಡೆಸಲಿದೆ. ಬೆಳಗ್ಗೆ 7ರಿಂದ ರಾತ್ರಿ 7 ಗಂಟೆ ಒಳಗೆæ ಬಸ್‌ ಸಂಚಾರ ಇರಲಿದೆ. ಗಂಟೆಗೊಮ್ಮೆ ಮಧ್ಯಾಹ್ನ ವರೆಗೆ ದೂರದ ಊರುಗಳಿಗೆ ಬಸ್‌ ಸಂಚಾರ ಇರಲಿದೆ. ಉಳಿದಂತೆ ಸಂಜೆ ವರೆಗೆ ಬಸ್‌ ಸಂಚಾರ ಇರಲಿದೆ.

ಮುಂಬೈಯಿಂದ ಬಂದ ಗರ್ಭಿಣಿಗೆ ಕೊರೋನಾ ಸೋಂಕು

ಮಂಗಳೂರಿನಿಂದ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಗೆ ಎಕ್ಸ್‌ಪ್ರೆಸ್‌ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಇದೇ ರೀತಿ ಪುತ್ತೂರಿನಿಂದ ಬೆಂಗಳೂರು, ಸುಳ್ಯ, ಸ್ಟೇಟ್‌ಬ್ಯಾಂಕ್‌, ಬೆಳ್ತಂಗಡಿ ಹಾಗೂ ಉಪ್ಪಿನಂಗಡಿಗೆ ಹಾಗೂ ಬಿ.ಸಿ.ರೋಡ್‌ನಿಂದ ವಿಟ್ಲಕ್ಕೆ ಮತ್ತು ಸುಳ್ಯದಿಂದ ಮಡಿಕೇರಿಗೆ ಹಾಗೂ ಮಡಿಕೇರಿಯಿಂದ ಬೆಂಗಳೂರಿಗೆ ಬಸ್‌ ಸಂಚಾರ ಇರಲಿದೆ.

ಹೊರ ಜಿಲ್ಲೆಗಳಿಗೆ ಟಿಕೆಟ್‌ ಬುಕ್ಕಿಂಗ್‌ ಇದ್ದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಇರುತ್ತದೆ. ಬಸ್‌ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಥರ್ಮಲ್‌ ಸ್ಕಾ್ಯನ್‌ ಮೊದಲು ನಡೆಯುತ್ತದೆ. ನಂತರ ಸ್ಯಾನಿಟೈಸರ್‌ ಉಪಯೋಗಿಸಬೇಕು. ಬಳಿಕ ಪ್ರಯಾಣಿಕರ ಹೆಸರು ಸಹಿತ ವಿವರಗಳನ್ನು ಪಡೆದುಕೊಳ್ಳುತ್ತಾರೆ. ಬಳಿಕವೇ ಬಸ್‌ ಏರಲು ಅವಕಾಶ. ಒಂದು ಬಸ್‌ನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು 30 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ.

ಮಂಗಳೂರಿಗೆ 3 ನೇ ವಿಮಾನ: 20ರಂದು ಮಸ್ಕತ್‌ನಿಂದ ಕನ್ನಡಿಗರು ತವರಿಗೆ

ಸುಳ್ಯ ವರದಿ: ಸುಳ್ಯ ಕೆಎಸ್‌ಆರ್‌ಟಿಸಿ ಬಸ್‌ ಡಿಪೋದಿಂದಲೂ ಮಂಗಳವಾರದಿಂದ ಬಸ್‌ ಸಂಚಾರ ಆರಂಭವಾಗಲಿದೆ. ಆರಂಭದಲ್ಲಿ ಸುಳ್ಯ- ಪುತ್ತೂರು, ಸುಳ್ಯ-ಮಡಿಕೇರಿ ಹಾಗೂ ಸುಳ್ಯ-ಬೆಂಗಳೂರು ನಡುವೆ ಮಾತ್ರ ಬಸ್‌ ಸಂಚಾರ ಇರುತ್ತದೆ. ಪ್ರತಿ ಬಸ್‌ನಲ್ಲೂ 30 ಪ್ರಯಾಣಿಕರಿಗೆ ಮಾತ್ರ ಅವಕಾಶ. ಮಾಸ್ಕ್‌ ಧರಿಸಿದ ಪ್ರಯಾಣಿಕರಿಗಷ್ಟೇ ಅವಕಾಶವಿದೆ. ಬೆಂಗಳೂರಿಗೆ 30 ಪ್ರಯಾಣಿಕರು ಇದ್ದರಷ್ಟೆಬಸ್‌ ಸಂಚಾರವಿರುತ್ತದೆ. ರಾತ್ರಿ ಪ್ರಯಾಣ ಇರುವುದಿಲ್ಲ. ಸಂಜೆ 7 ಗಂಟೆಗೆ ಬೆಂಗಳೂರು ತಲುಪುವ ರೀತಿಯಲ್ಲಿ ಸಂಚಾರ ಸಮಯ ನಿಗದಿಪಡಿಲಾಗುತ್ತದೆ ಎಂದು ಡಿಪೋ ಮೆನೇಜರ್‌ ಸುಂದರ್‌ರಾಜ್‌ ತಿಳಿಸಿದ್ದಾರೆ.

ದ.ಕ.ದಲ್ಲೂ ಖಾಸಗಿ ಬಸ್‌ ಸಂಚಾರವಿಲ್ಲ: ಪರವಾನಗಿಯನ್ನು ಸಾರಿಗೆ ಇಲಾಖೆಗೆ ತಾತ್ಕಾಲಿಕವಾಗಿ ಸಲ್ಲಿಕೆ ಮಾಡಿರುವುದರಿಂದ ಖಾಸಗಿ ಬಸ್‌ಗಳು ಮೇ ಅಂತ್ಯದ ವರೆಗೆ ಬಸ್‌ ಓಡಿಸುವ ಸಾಧ್ಯತೆ ವಿರಳ. ಲಾಕ್‌ಡೌನ್‌ ಅವಧಿಯಲ್ಲಿ ವಿನಾಃ ಕಾರಣ ರಸ್ತೆ ತೆರಿಗೆ ಪಾವತಿಸಬೇಕಾದ ಕಾರಣಕ್ಕೆ ಸುಮಾರು 2 ಸಾವಿರಕ್ಕೂ ಅಧಿಕ ಬಸ್‌ಗಳು ಪರವಾನಗಿಯನ್ನು ಆರ್‌ಟಿಒಗೆ ಸರಂಡರ್‌ ಮಾಡಿದ್ದವು. ಈಗ ಪರವಾನಗಿ ಮರಳಿ ಪಡೆದುಕೊಂಡರೆ, ದುಬಾರಿ ತೆರಿಗೆ ಪಾವತಿಸಬೇಕಾಗುತ್ತದೆ. ಈ ತೆರಿಗೆ ಮನ್ನಾ ಮಾಡುವಂತೆ ಈಗಾಗಲೇ ಖಾಸಗಿ ಬಸ್‌ಗಳ ಮಾಲೀಕರು ಸರ್ಕಾರಕ್ಕೆ ಬೇಡಿಕೆ ಇರಿಸಿದ್ದಾರೆ.

ಉಡುಪಿ ವರದಿ:

ಕೆಎಸ್‌ಆರ್‌ಟಿಸಿ ಉಡುಪಿ ಡಿಪೋದಲ್ಲಿ ಒಟ್ಟು 108 ಬಸ್‌ಗಳಿವೆ. ಈಗಾಗಲೇ 7 ಬಸ್‌ಗಳು ಮೇ 15ರಿಂದಲೇ ಉಡುಪಿ ಜಿಲ್ಲೆಯೊಳಗೆ ಸಂಚರಿಸುತ್ತಿವೆ. ಮಂಗಳವಾರದಿಂದ ಉಳಿದ ಬಸ್‌ಗಳನ್ನು ಓಡಿಸಲು ಅನುಮತಿ ಸಿಕ್ಕಿದೆ. ಆದರೆ ಬಸ್‌ ಚಾಲಕರು, ನಿರ್ವಾಹಕರು, ಮೆಕಾನಿಕ್‌ಗಳು ತಂತಮ್ಮ ಊರಿಗೆ ಹೋಗಿದ್ದಾರೆ. ಅವರು ಬರುವುದು ತಡವಾಗುವುದರಿಂದ ಎಲ್ಲ ಬಸ್‌ಗಳನ್ನು ಮಂಗಳವಾರದಿಂದಲೇ ಓಡಿಸುವುದು ಸಾಧ್ಯವಿಲ್ಲ. ಲಭ್ಯ ಇರುವ ಸಿಬ್ಬಂದಿಯನ್ನು ಅವಲಂಬಿಸಿ ಬಸ್‌ ಓಡಿಸಲಾಗುತ್ತದೆ ಎಂದು ಡಿಪೋ ಮ್ಯಾನೇಜರ್‌ ಉದಯ ಕುಮಾರ್‌ ಶೆಟ್ಟಿತಿಳಿಸಿದ್ದಾರೆ.