ಶಿವಮೊಗ್ಗ, [ಫೆ.03]: ಶಿವಮೊಗ್ಗ ಜಿಲ್ಲೆಯ ವಿಠಲನಗರದಲ್ಲಿ ಶನಿವಾರ ತಡರಾತ್ರಿ 1.33ರ ಸುಮಾರಿಗೆ ಲಘು ಭೂಕಂಪನವಾಗಿದೆ. ಇದನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದೃಢಪಡಿಸಿದೆ.

ವಿಠಲನಗರ ಕೇಂದ್ರ ಸ್ಥಾನದಿಂದ ಮಾಣಿ ಜಲಾಶಯದ ಹಿನ್ನೀರು ವ್ಯಾಪ್ತಿಯ ಯಡೂರು, ಗಾರ್ಡರಗದ್ದೆ, ಶುಂಠಿಹಕ್ಲು, ಕರುಣಾಪುರ, ಹನಸ, ಮೇಗರಹಳ್ಳಿ, ಸುಣ್ಣದ ಮನೆ, ಹಾಲಿಗೆ, ಡಿಂಡ ಭಾಗದಲ್ಲಿ ಭೂಮಿ ಕಂಪಿಸಿದೆ. 

ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿದ್ದು ಜನರು ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದರು. ರಿಕ್ಟರ್ ಮಾಪಕದಲ್ಲಿ 2.2ರಷ್ಟು ತೀವ್ರತೆ ದಾಖಲಾಗಿದ್ದು, ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. 

ಭೂಕಂಪನದ ಬಗ್ಗೆ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಜಿ.ಶ್ರೀನಿವಾಸರೆಡ್ಡಿಯವರು ದೃಢಪಡಿಸಿದ್ದು, ಈ ಕುರಿತು ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ನಿನ್ನೆಯಷ್ಟೇ (ಶನಿವಾರ] ಅಪಘಾನಿಸ್ಥಾನದ ಹಿಂದುಖುಷ್‌ ಪರ್ವತ ಪ್ರದೇಶದಲ್ಲಿ ರಿಕ್ಟರ್‌ ಮಾಪಕದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪವಾಗಿರುವ ಬಗ್ಗೆ ಹವಮಾನ ಇಲಾಖೆ ತಿಳಿಸಿತ್ತು. ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿತ್ತು.